ಮಗು ಗಂಡೋ, ಹೆಣ್ಣೋ ಎಂದು ತಿಳಿಯಲು ಗರ್ಭಿಣಿ ಪತ್ನಿಯ ಹೊಟ್ಟೆಯನ್ನೇ ಬಗೆದ ಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಸೆ.20- ಭ್ರೂಣ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಸರ್ಕಾರಗಳೇ ಘೋಷಿಸಿದ್ದರೂ ಇಲ್ಲೊಬ್ಬ ಪತಿ ಮಹಾಶಯ ತನ್ನ ಪತ್ನಿಯ ಹೊಟ್ಟೆಯೊಳಗಿರುವುದು ಗಂಡು ಮಗುವೊ? ಹೆಣ್ಣೋ ಮಗುವೋ? ಎಂದು ತಿಳಿಯಲು ಆಕೆಯ ಹೊಟ್ಟೆಗೆ ಹರಿತವಾದ ಆಯುಧದಿಂದ ಇರಿದಿರುವ ಭಯಾನಕ ಘಟನೆ ಬುದೌನ್‍ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಉತ್ತರಪ್ರದೇಶದ ಸಿವಿಲ್‍ಲೈನ್ ಇಲಾಖೆಯ ನೇಕಪುರ ಗಲ್ಲಿಯ ಪನ್ನಾಲಾಲ್ ಎಂಬ ದುಷ್ಟನೇ ತನ್ನ ಗರ್ಭಿಣಿ ಪತ್ನಿಗೆ ಇರಿದ ಕಿರಾತಕ. ಪನ್ನಾಲಾಲ್ ಹಾಗೂ ಆತನ ಗರ್ಭಿಣಿ ಪತ್ನಿ ಅನಿತಾಗೆ ಈಗಾಗಲೇ ಐವರು ಹೆಣ್ಣು ಮಕ್ಕಳಿದ್ದು ಮುಂದೆ ಹುಟ್ಟುವ ಮಗು ಗಂಡು ಮಗುವಾಗಿರಬೇಕೆಂದು ಆಗಾಗ್ಗೆ ಜಗಳ ಮಾಡುತ್ತಿದ್ದರು.

ಇಂದು ಬೆಳಗ್ಗೆಯೂ ಕೂಡ ಅನಿತಾ ಹಾಗೂ ಪನ್ನಾಲಾಲ್ ನಡುವೆ ಈ ಸಂಬಂಧವಾಗಿ ಗಲಾಟೆ ಆಗಿದ್ದು ಒಂದು ಹಂತಕ್ಕೆ ಜಗಳ ವಿಕೋಪಕ್ಕೆ ಹೋಗಿ ಪನ್ನಾಲಾಲ್ ಅನಿತಾಳ ಹೊಟ್ಟೆಯಲ್ಲಿರುವುದು ಗಂಡು ಮಗುವೋ? ಅಥವಾ ಹೆಣ್ಣು ಮಗುವೋ ಎಂದು ನೋಡಲು ಆಕೆಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ.

ಚಾಕು ಇರಿತಕ್ಕೆ ಒಳಗಾದ ಗರ್ಭಿಣಿ ಅನಿತಾಳ ಸ್ಥಿತಿ ಚಿಂತಾಜನಕವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದೆ, ಅನಿತಾಳ ಪೋಷಕರು ನೀಡಿದ ದೂರಿನ ಮೇಲೆ ಆರೋಪಿ ಪನ್ನಾಲಾಲ್‍ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಎಸ್‍ಪಿ ಪ್ರವೀಣ್‍ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments