ಪತ್ನಿಯನ್ನು ಕೊಂದಿದ್ದ ಪತಿ ಮತ್ತು ಮನೆಯವರಿಗೆ ಜೈಲು ಶಿಕ್ಷೆ
ಶಿವಮೊಗ್ಗ, ಜ.20- ವರದಕ್ಷಿಣೆಗಾಗಿ ಪತ್ನಿಯನ್ನು ಹತ್ಯೆ ಮಾಡಿದ್ದ ಪತಿ ಹಾಗೂ ಆತನ ತಂದೆತಾಯಿ ಮತ್ತು ಸಹೋದರಿಗೆ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಶಿವಮೊಗ್ಗ ನಗರದ ಗಾಂಧಿಬಜಾರ್ ರಸ್ತೆಯ ಉಪ್ಪಾರಕೇರಿ ನಿವಾಸಿ ಉಮೇಶ್, ಆತನ ತಾಯಿ ಸುಮಿತ್ರಾ ಬಾಯಿ, ತಂದೆ ನಾರಾಯಣ ಶೇಠ್ ಹಾಗೂ ಸೋದರಿ ರೂಪ ಶಿಕ್ಷೆಗೊಳಗಾದವರು. ನ್ಯಾಯಾಧೀಶರಾದ ಪ್ರಭಾವತಿ ಎಂ.ಹಿರೇಮಠ್ ಈ ತೀರ್ಪು ನೀಡಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ.ಯಳಗೇರಿ ವಾದ ಮಂಡಿಸಿದರು.
ಐಪಿಸಿ ಕಲಂ ಅನ್ವಯ 498 (ಎ), 304 (ಬಿ) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3 ಮತ್ತು 4ರನ್ವಯ ಭಟ್ಕಳದ ಆಶಾ ಅವರ ಪತಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 17000 ರೂ. ದಂಡ ವಿಧಿಸಲಾಗಿದೆ. ಅತ್ತೆ, ಮಾವ, ನಾದಿನಿ ಇವರುಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 12,000 ರೂ.ಗಳ ದಂಡ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಘಟನೆ ಹಿನ್ನೆಲೆ: ಕಳೆದ 7 ವರ್ಷಗಳ ಹಿಂದೆ ಭಟ್ಕಳದ ಸದಾನಂದ ರಾಮಯ್ಯರಾಯ್ಕರ್ ಎಂಬುವವರ ಮಗಳು ಆಶಾರೊಂದಿಗೆ ಉಮೇಶ್ ಅವರ ವಿವಾಹವಾಗಿತ್ತು. ಆದರೆ ಮದುವೆಯ ನಂತರ ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಹಾಗೂ ಹೆಚ್ಚಿನ ವರದಕ್ಷಿಣೆ ತರುವಂತೆ, ಪತಿ ಹಾಗೂ ಮನೆಯವರು ದೈಹಿಕ – ಮಾನಸಿಕ ಕಿರುಕುಳ ನೀಡಿದ್ದರು.
2015 ರ ಫೆಬ್ರವರಿಯಲ್ಲಿ ಪತಿ ಉಮೇಶ ಮನೆಯ ಇತರೆ ಸದಸ್ಯರ ಜೊತೆ ಸೇರಿ ಮಗು ಮಲಗಿಸುವ ಜೋಲಿಯ ಸೀರೆಯಿಂದ ಆಶಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಮೃತ ಆಶಾಳ ಪತಿ, ಅತ್ತೆ, ಮಾವ ಹಾಗೂ ನಾದಿನಿಯ ವಿರುದ್ದ ವರದಕ್ಷಿಣೆ ಕಿರುಕುಳ ಹಾಗೂ ಹತ್ಯೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.