ಕಾರಿನಲ್ಲೇ ಪತಿಯನ್ನು ಸುಟ್ಟು ಹಾಕಿದ್ದ ಪತ್ನಿ ಸೆರೆ
ಹಾಸನ, ಅ.30- ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಕಾರಿನಲ್ಲಿಟ್ಟು ಅಪಘಾತದಲ್ಲಿ ಸುಟ್ಟು ಹೋಗಿದೆ ಎಂಬಂತೆ ಬಿಂಬಿಸಿ ಕೊಲೆ ಪ್ರಕರಣದಿಂದ ಬಚಾವಾಗಲು ಮುಂದಾಗಿದ್ದ ನಿಗೂಢ ಪ್ರಕರಣವನ್ನು ಬೇಧಿಸುವಲ್ಲಿ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ದೊಡ್ಡಪ್ಪನ ಮಗಳೊಂದಿಗೆ ಅಕ್ರಮ ಸಂಬಂಧ ವಿರಿಸಿಕೊಂಡಿದ್ದ ವ್ಯಕ್ತಿಯ ಪತ್ನಿಯೇ ತನ್ನ
ತಂದೆ ಮತ್ತು ಸಹೋದರನೊಂದಿಗೆ ಸೇರಿ ಪತಿಯ ಕತ್ತು ಕೊಯ್ದು ಕೊಲೆ ಮಾಡಿ ಶವವನ್ನು ಕಾರಿನಲ್ಲಿಟ್ಟು ಬೆಂಕಿ ಹಚ್ಚಿ ಅಪಘಾತ ಸಂಭವಿಸಿದೆ ಎಂಬಂತೆ ಬಿಂಬಿಸಲು ಯತ್ನಿಸಿದ್ದರು.
ಬೆಂಗಳೂರಿನ ದೊಡ್ಡಜಾಲದ ನಿವಾಸಿ ಮಂಜುನಾಥ (55) , ಪುತ್ರಿ ಅಭಿಲಾಷ (22) ಹಾಗೂ ಪುತ್ರ ಬಸವರಾಜು (21) ಬಂಧಿತ ಆರೋಪಿಗಳು. ಬೆಂಗಳೂರಿನ ಅಭಿಲಾಷಳನ್ನು ಚನ್ನರಾಯಪಟ್ಟಣ ತಾಲ್ಲೂಕಿನ ಹೆಬ್ಬಾಳು ನಿವಾಸಿ ಕಾರು ಚಾಲಕ ದಿನೇಶನಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು.
ಆದರೆ ಇತ್ತೀಚೆಗೆ ದಿನೇಶ ತನ್ನ ದೊಡ್ಡಪ್ಪ ಮಗಳ ಜತೆ ಅಕ್ರಮ ಸಂಪರ್ಕವಿರಿಸಿಕೊಂಡು ಯಾರಿಗೂ ತಿಳಿಯದಂತೆ ವಿವಾಹವಾಗಿದ್ದ ಎನ್ನಲಾಗಿದೆ. ವಾರಿಗೆಯಲ್ಲಿ ತಂಗಿಯಾದವಳೊಂದಿಗೆ ಅಕ್ರಮ ಸಂಪರ್ಕವಿರಿಸಿಕೊಂಡಿದ್ದ ದಿನೇಶನ ವಿಷಯ ತಿಳಿಯುತ್ತಿದ್ದಂತೆ ಅಭಿಲಾಷ ತನ್ನ ಗಂಡನನ್ನೇ ಕೊಲೆ ಮಾಡಲು ನಿಶ್ಚಯಿಸಿದ್ದಳು.
ಕೊಲೆಯಾಗಿದ್ದು ಹೀಗೆ: ಅಭಿಲಾಷಾ ತನ್ನ ಪತಿ ದಿನೇಶ್ನಿಗೆ ಮದ್ಯಪಾನ ಮಾಡಿಸಿ ತಮ್ಮನೊಂದಿಗೆ ಸೇರಿ ಕಬ್ಬಿಣದ ಸಲಾಕೆಯಿಂದ ಆತನ ತಲೆಗೆ ಹೊಡೆದು ನಂತರ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡುತ್ತಾಳೆ. ನಂತರ ಶವವನ್ನು ಕಾರಿನಲ್ಲಿ ಊರಿಗೆ ಸಾಗಿಸಿ ಶವದ ಸಮೇತ ಕಾರಿಗೆ ಬೆಂಕಿ ಹಚ್ಚಿ ತಲೆಮರೆಸಿಕೊಂಡಿದ್ದರು.
ನಿಗೂಢವಾಗಿದ್ದ ಕೊಲೆ ಪ್ರಕರಣ ಚನ್ನರಾಯಪಟ್ಟಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಬೆಂಕಿಯಿಂದ ಇಡೀ ಕಾರು ಸುಟ್ಟು ಹೋಗಿದ್ದರಿಂದ ಸತ್ತವರು ಯಾರು ಎಂಬುದು ಪೊಲೀಸರಿಗೆ ತಿಳಿಯಲಿಲ್ಲ. ಆದರೆ ಕಾರು ಯಲ್ಲೋ ಬೋರ್ಡ್ ಎಂಬುದನ್ನು ಪತ್ತೆ ಹಚ್ಚುವ ಪೊಲೀಸರು ಕೊಲೆಯಾದವನು ಕ್ಯಾಬ್ ಚಾಲಕ ದಿನೇಶ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.
ಕಾರು ಅಪಘಾತದಿಂದ ದಿನೇಶನ ಸಾವು ಸಂಭವಿಸಿದೆಯೇ ಅಥವಾ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿ ಬಚಾವಾಗಲು ಅಪಘಾತದ ನಾಟಕವಾಡಲಾಗಿದೆಯೇ ಎಂಬ ಸುಳಿವಿನ ಮೇರೆಗೆ ತನಿಖೆ ನಡೆಸಿದ ಪೊಲೀಸರಿಗೆ ಪತಿಯ ಹತ್ಯೆಗೆ ಪತ್ನಿಯೇ ಮುಹೂರ್ತ ಇಟ್ಟಿರುವ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.