ಪತ್ನಿ ಹಾಗೂ ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಪಾಪಿ ತಂದೆ, ಮೂವರ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.21- ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪಾಪಿ ತಂದೆಯೇ ಪತ್ನಿ ಹಾಗೂ ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ , ತಾನೂ ಬೆಂಕಿ ಹಚ್ಚಿಕೊಂಡ ಪರಿಣಾಮ ತಂದೆ ಹಾಗೂ ಮಕ್ಕಳಿಬ್ಬರು ಸಾವನ್ನಪ್ಪಿ, ಪತ್ನಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಕಾಟನ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಭಕ್ಷಿ ಗಾರ್ಡನ್ ನಿವಾಸಿಯಾದ ಮುರುಳಿ(45), ಮಕ್ಕಳಾದ ಕಾವೇರಿ(21), ಶ್ರೀಕಾಂತ್(15) ಸಾವನ್ನಪ್ಪಿದ್ದಾರೆ. ಪತ್ನಿ ಗೀತಾ(42)ರ ಸ್ಥಿತಿ ಚಿಂತಾಜನಕವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್.ಬಿ ಈ ಸಂಜೆಗೆ ತಿಳಿಸಿದ್ದಾರೆ.

ಮುರುಳಿಯವರ ಮತ್ತೊಬ್ಬ ಮಗ ಕಾರ್ತಿಕ್ ಪಕ್ಕದ ಮನೆಯಲ್ಲಿ ಮಲಗಿದ್ದರಿಂದ ದುರಂತದಿಂದ ಪಾರಾಗಿದ್ದಾನೆ. ಮುರುಳಿ ಬಡಗಿ ಕೆಲಸ ಮಾಡಿಕೊಂಡಿದ್ದರೆ ಪತ್ನಿ ಗೀತಾ ಹೂವು ಕಟ್ಟಿ ಮಾರಿ ಜೀವನ ನಿರ್ವಹಿಸುತ್ತಿದ್ದರು. ಮಗಳು ಕಾವೇರಿ ಬಿಕಾಂ ವ್ಯಾಸಂಗ ಮುಗಿಸಿದ್ದರು. ಮಗ 9ನೇ ತರಗತಿ ಓದುತ್ತಿದ್ದ.

ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತಿತ್ತು ಎನ್ನಲಾಗಿದೆ. ಕುಡಿತದ ಚಟ ಅಂಟಿಸಿಕೊಂಡಿದ್ದ ಮುರುಳಿ ಸರಿಯಾಗಿ ಕೆಲಸಕ್ಕೆ ಹೋಗದೆ ಕುಡಿದುಬಂದು ಪತ್ನಿ ಜೊತೆ ಜಗಳವಾಡಿ ಹಣಕ್ಕಾಗಿ ಪೀಡಿಸುತ್ತಿದ್ದ. ತಂದೆಯ ವರ್ತನೆಯಿಂದ ಮಕ್ಕಳೂ ಸಹ ಬೇಸತ್ತಿದ್ದರು.

ರಾತ್ರಿ ಕೂಡ ದಂಪತಿ ನಡುವೆ ಜಗಳವಾಗಿದೆ. ಇದೇ ಕೋಪಕ್ಕೆ ಮುರುಳಿ ಮನೆಯವರೆಲ್ಲರನ್ನು ಸಾಯಿಸಲು ನಿರ್ಧರಿಸಿ ಮಲಗಿದ್ದ ಪತ್ನಿ, ಮಕ್ಕಳ ಮೇಲೆ ಇಂದು ಮುಂಜಾನೆ ಪೆಟ್ರೋಲ್ ಸುರಿದು , ಆತನೂ ಸುರಿದುಕೊಂಡು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಬೆಂಕಿ ಮನೆಯನ್ನು ಆವರಿಸಿದೆ. ಅಕ್ಕಪಕ್ಕದವರು ಬೆಂಕಿಯನ್ನು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಬೆಂಕಿಯನ್ನು ನಂದಿಸಿ ಸುಟ್ಟ ಗಾಯಗಳಾಗಿದ್ದ ನಾಲ್ವರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮುರುಳಿ ಹಾಗೂ ಮಕ್ಕಳಿಬ್ಬರು ಸಾವನ್ನಪ್ಪಿದ್ದಾರೆ. ಕಾಟನ್‍ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಎಫ್‍ಎಸ್‍ಎಲ್ ತಂಡ ಆಗಮಿಸಿ ಪರಿಶೀಲನೆ ನಡೆಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದೆ.

Facebook Comments

Sri Raghav

Admin