ಮಳೆಗೆ ಮುಳುಗಿದ ಮುತ್ತಿನನಗರಿ, ಹಲವು ಪ್ರದೇಶಗಳು ಸಂಪೂರ್ಣ ಜಲಾವೃತ

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಅ.18- ಮೂರು ದಿನಗಳ ಹಿಂದಷ್ಟೇ ಭಾರೀ ಮಳೆಯಿಂದ ಸಾವು-ನೋವು ಮತ್ತುಅಪಾರ ಹಾನಿಗೆ ಒಳಗಾಗಿದ್ದ ತೆಲಂಗಾಣ ರಾಜಧಾನಿ ಹೈದರಾಬಾದ್‍ಗೆ ಮತ್ತೆ ವರುಣಾಘಾತವಾಗಿದೆ.  ಮುತ್ತಿನ ನಗರಿಯಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅನೇಕ ಪ್ರದೇಶಗಳು ಜಲಾವೃತವಾಗಿದ್ದು, ಜನ ಜೀವನ ಅಧ್ವಾನವಾಗಿದೆ.

ಮಳೆಯಿಂದಾಗಿ ಹಲವಡೆ ನೀರು ನಿಂತಿದ್ದು, ಮನೆಗಳು ಮತ್ತು ವಾಹನಗಳು ಭಾಗಶಃ ಮುಳುಗಡೆಯಾಗಿವೆ. ಅನೇಕ ಕಾರುಗಳು ನೀರಿನಲ್ಲಿ ತೇಲುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ನಿನ್ನೆರಾತ್ರಿ ಪೂರಾ ಸುರಿದಧಾರಾಕಾರ ಮಳೆಯಿಂದಾಗಿ ಬಾಲಪುರಕೆರೆ ಏರಿ ಒಡೆದು ಬಾಬಾನಗರ ಬಿ-ಬ್ಲಾಕ್ ಮತ್ತು ಸುತ್ತಮುತ್ತ ಪ್ರದೇಶಗಳಿಗೆ ನೀರು ನುಗ್ಗಿದ್ದು, ಅನೇಕ ಸ್ಥಳಗಳು ಜಲಾವೃತವಾಗಿವೆ.

ಕೋಡಿ ಒಡೆದ ಕೆರೆಯಿಂದ ನೀರು ರಭಸವಾಗಿ ನುಗ್ಗಿದ ಪರಿಣಾಮ ಹಫೀಜ್ ಬಾಬಾ ನಗರ್, ಓಮರ್ ಕಾಲೋನಿ, ನಬೀಲ್ ಕಾಲೋನಿ, ಪೂಲ್‍ಭಾಗ್, ಇಂದಿನಾನಗರ, ಶಿವಾಜಿನಗರ, ರಾಜೀವ್‍ನಗರ ಹಾಗೂ ಸುತ್ತಮತ್ತಲಿನ ತಗ್ಗುಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ.  ಹೈದರಾಬಾದ್‍ನ ಕೆಲವೆಡೆ ನಿನ್ನೆ 157 ಮಿ.ಮೀ.ಗಳಷ್ಟು ಗರಿಷ್ಠ ಮಳೆಯಾಗಿದೆ.

ಕಳೆದ ಮೂರು ದಿನಗಳ ಹಿಂದೆ ಹೈದರಾಬಾದ್ ಸೇರಿದಂತೆ ಅವಿಭಜಿತಆಂಧ್ರಪ್ರದೇಶದಲ್ಲಿ (ತೆಲಂಗಾಣ ಮತ್ತು ಆಂಧ್ರ) ಭಾರೀ ಮಳೆಯಿಂದಾಗಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟು ಕೆಲವರು ಕಣ್ಮರೆಯಾಗಿದ್ದಾರೆ.

ತಗ್ಗು ಪ್ರದೇಶಗಳಲ್ಲಿ ನೀರಿನಲ್ಲಿ ಸಿಲುಕಿರುವ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ಹೈದರಾಬಾದ್ ಪೊಲೀಸ್‍ಆಯುಕ್ತ ಅಂಜನಿ ಕುಮಾರ್ ತಿಳಿಸಿದ್ದಾರೆ.

Facebook Comments