ಕಾಮುಕರ ಎನ್‌ಕೌಂಟರ್‌ಗೆ ದೇಶಾದ್ಯಂತ ಸಂಭ್ರಮ, ಗಣ್ಯಾತಿಗಣ್ಯರ ಪ್ರಶಂಸೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಹೈದರಾಬಾದ್, ಡಿ.6-ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕಗ್ಗೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಎನ್‍ಕೌಂಟರ್‍ನಲ್ಲಿ ಹೊಡೆದುರುಳಿಸಿರುವ ತೆಲಂಗಾಣ ಪೊಲೀಸರ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಇಂದು ಬೆಳಗ್ಗೆಯೇ ಈ ಸುದ್ದಿ ತಿಳಿಯುತ್ತಿದ್ದಂತೆ ಹೈದರಾಬಾದ್, ದೆಹಲಿ, ಮುಂಬೈ, ಕರ್ನಾಟಕ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮಹಿಳೆಯರು ಸಂಭ್ರಮಾಚರಣೆ ಮಾಡಿದರು.

ಹಲವೆಡೆ ಪಟಾಕಿ ಸಿಡಿಸಿ, ಡೋಲು ವಾದ್ಯಗಳನ್ನು ಬಡಿಯುತ್ತ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದ ದೃಶ್ಯ ಕಂಡುಬಂತು. ಅನೇಕ ಕಡೆ ಮಹಿಳೆಯರು ಪೊಲೀಸರಿಗೆ ರಕ್ಷಾಬಂಧನ ಕಟ್ಟಿ ಮೆಚ್ಚುಗೆ ಸೂಚಿಸಿದರು. ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಇಂತಹ ಶಿಕ್ಷೆಯಾಗಬೇಕು. ಅವರಿಗೆ ಕಲ್ಲುಗಳಿಂದ ಹೊಡೆದು ಅಥವಾ ಜೀವಂತ ಸುಟ್ಟು ಶಿಕ್ಷೆ ನೀಡಬೇಕೆಂಬ ಮಾತುಗಳು ಕೇಳಿಬಂದವು.

ಅತ್ಯಾಚಾರಿ ಹಂತಕರಿಗೆ ತಕ್ಕ ಶಾಸ್ತಿಯಾಗಿದೆ. ಹಂತಕರನ್ನು ಎನ್‍ಕೌಂಟರ್ ಮೂಲಕ ಕೊಂದಿರುವುದು ಆಕೆಯ ಆತ್ಮಕ್ಕೆ ಶಾಂತಿ ದೊರಕಿದಂತಾಗಿದೆ ಮತ್ತು ನೊಂದ ಕುಟುಂಬ ನ್ಯಾಯ ಒದಗಿಸಿಕೊಟ್ಟಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗಣ್ಯಾತಿಗಣ್ಯರ ಸ್ವಾಗತ: ಎನ್‍ಕೌಂಟರ್‍ನಲ್ಲಿ ನಾಲ್ವರನ್ನು ಹೊಡೆದುರುಳಿಸಿರುವುದನ್ನು ಗಣ್ಯಾತಿಗಣ್ಯರು ಚಿತ್ರ ತಾರೆಯರು, ಕ್ರೀಡಾ ಕ್ಷೇತ್ರದ ಖ್ಯಾತನಾಮರು ಸೇರಿದಂತೆ ಅನೇಕರು ಸ್ವಾಗತಿಸಿದ್ದಾರೆ. ಟಾಲಿವುಡ್ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಟ್ವೀಟ್ ಮಾಡಿ, ಬೆಳಗ್ಗೆ ಎದ್ದ ಕೂಡಲೇ ನ್ಯಾಯದೇವತೆ ಸೇವೆಯ ಸುದ್ದಿ ತಿಳಿದು ಅಪಾರ ಸಂತಸವಾಯಿತು. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಿದೆ ಎಂದಿದ್ದಾರೆ.

ಜೂನಿಯರ್ ಎನ್‍ಟಿಆರ್ ಸಹ ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ.ಸಜ್ಜನರ್ ನೇತೃತ್ವದ ಪೊಲೀಸ್ ಕಾರ್ಯಾಚರಣೆಯನ್ನು ಸ್ವಾಗತಿಸಿದ್ದಾರೆ. ಇದು ಅತ್ಯಾಚಾರಿ ಹಂತಕರಿಗೆ ಎಚ್ಚರಿಕೆಯ ಪಾಠವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಚಿತ್ರನಟಿ ರಕೂಲ್ ಪ್ರೀತ್‍ಸಿಂಗ್, ನಟ ಶ್ರೀಕಾಂತ್ ಮೊದಲಾದವರು ಪಶುವೈದ್ಯೆ ಆತ್ಮಕ್ಕೆ ಶಾಂತಿ ದೊರೆತಂತಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯಿಸಿ, ತೆಲಂಗಾಣ ಪೊಲೀಸರ ಕಾರ್ಯಾಚರಣೆಯನ್ನು ಸ್ವಾಗತಿಸಿದ್ದಾರೆ. ಅತ್ಯಾಚಾರಿ ಹಂತಕರಿಗೆ ಇದೇ ರೀತಿ ಕ್ರಮಕೈಗೊಳ್ಳಲು ಉತ್ತರ ಪ್ರದೇಶ ಮತ್ತು ದೆಹಲಿ ಪೊಲೀಸರು ಮುಂದಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಎನ್‍ಕೌಂಟರ್‍ನ್ನು ಸ್ವಾಗತಿಸಿದರಾದರೂ, ಇಂತಹ ಕಾನೂನು ಕ್ರಮಗಳು ದುರುಪಯೋಗವಾಗಬಾರದು ಎಂಬ ಸಲಹೆಯನ್ನೂ ನೀಡಿದ್ದಾರೆ.
ಅತ್ಯಾಚಾರಿಗಳಿಗೆ ಆರು ತಿಂಗಳೊಳಗೆ ನೇಣುಗಂಬ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಳ್, ಕಾಮುಕರಿಗೆ ತಕ್ಕ ಶಿಕ್ಷೆಯಾಗಿದೆ. ಇಂತಹ ಕ್ರೂರ ಕೃತ್ಯ ಎಸಗಿರುವವರಿಗೆ ಇದು ಎಚ್ಚರಿಕೆ ಪಾಠವಾಗಿದೆ ಎಂದು ತಿಳಿಸಿದ್ದಾರೆ.

ನಿರ್ಭಯಾ ಅವರ ತಾಯಿ ಪ್ರತಿಕ್ರಿಯಿಸಿ, ಅತ್ಯಾಚಾರಿ ಹಂತಕರಿಗೆ ಅತ್ಯಂತ ಕಡಿಮೆ ಸಮಯದಲ್ಲಿ ದೇವರು ಶಿಕ್ಷೆ ಕೊಟ್ಟಿರುವುದನ್ನು ನಾನು ಸ್ವಾಗತಿಸುತ್ತೇನೆ. ನನ್ನ ಮಗಳ ಸಮಾನಳಾದ ಪಶುವೈದ್ಯೆ ಪ್ರಕರಣದಲ್ಲಿ ತೆಲಂಗಾಣ ಪೊಲೀಸರ ಕ್ರಮವನ್ನು ಪ್ರಶಂಸನೀಯ ಎಂದು ಹೇಳಿದ್ದಾರೆ.

Facebook Comments