ಎನ್‍ಕೌಂಟರ್ ಆದ ಕೀಚಕರಿಂದ ಕರ್ನಾಟಕ, ಆಂಧ್ರದಲ್ಲೂ ಭೀಕರ ಕೃತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಡಿ.7-ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣದಲ್ಲಿ ನಿನ್ನೆ ಮುಂಜಾನೆ ಹೈದರಾಬಾದ್ ಪೊಲೀಸರಿಂದ ಎನ್‍ಕೌಂಟರ್‍ನಲ್ಲಿ ಹತರಾದ ನಾಲ್ವರು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ-ಈ ಮೂರು ರಾಜ್ಯಗಳಲ್ಲೂ ಇದೇ ರೀತಿಯ ಭೀಕರ ಕೃತ್ಯಗಳನ್ನು ಎಸಗಿರುವ ಸಾಧ್ಯತೆ ಬಗ್ಗೆ ತನಿಖೆ ಮುಂದುವರಿದಿದೆ.

ಲಾರಿ ಚಾಲಕರು ಮತ್ತು ಕ್ಲೀನರ್‍ಗಳಾಗಿದ್ದ ಮೊಹಮದ್ ಆರಿಫ್, ಶಿವ, ಚನ್ನಕೇಶವುಲು ಮತ್ತು ನವೀನ್ ಈ ಮೂರು ರಾಜ್ಯಗಳನ್ನು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆಗೈದಿರುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ತನಿಖೆ ಮುಂದುವರಿಯುತ್ತಿದೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಹೇಳಿದ್ದಾರೆ.

ಈ ಮೂರು ರಾಜ್ಯಗಳಲ್ಲೂ ನಾಪತ್ತೆಯಾದ ಮತ್ತು ಸುಟ್ಟು ಕರಕಲಾಗಿದ್ದ ಮಹಿಳೆಯರ ಶವಗಳ ಬಗ್ಗೆ ನಾವು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.  ಗ್ಯಾಂಗ್‍ರೇಪ್‍ಗೆ ಒಳಗಾಗಿ ನಂತರ ಭೀಕರವಾಗಿ ಕೊಲೆಯಾದ ಪಶುವೈದ್ಯೆ ಮತ್ತು ಎನ್‍ಕೌಂಟರ್‍ನಲ್ಲಿ ಹತರಾದ ಎಲ್ಲ ನಾಲ್ವರ ಡಿಎನ್‍ಎ ಮಾದರಿಗಳು, ವೈಜ್ಞಾನಿಕ ದತ್ತಾಂಶ ಮಾಹಿತಿ ಮತ್ತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವರದಿಯಾಗಿರುವ ಇಂಥ ಪ್ರಕರಣದ ಬಗ್ಗೆ ಮಾಹಿತಿಯನ್ನು ಪಡೆಯಲಾಗುತ್ತಿದೆ. ಅಲ್ಲದೇ ನಾಪತ್ತೆಯಾದ ಯುವತಿಯರು ಮತ್ತು ಮಹಿಳೆಯರ ವಿವರಗಳನ್ನು ಸಹ ಸಂಗ್ರಹಿಸಲಾಗುತ್ತಿದೆ. ಇವುಗಳು ಲಭಿಸಿದ ನಂತರ ಅವುಗಳನ್ನು ಕೂಲಂಕಷ ವಿಶ್ಲೇಷಣೆಗೆ ಒಳಪಡಿಸಲಾಗುವುದು. ಆನಂತರ ಈ ಪ್ರಕರಣಗಳಲ್ಲೂ ಈ ನಾಲ್ವರು ಶಾಮೀಲಾಗಿದ್ದಾರೆಯೇ ಎಂಬುದು ಖಚಿತವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಲಾರಿ ಚಾಲಕ ಮತ್ತು ಕ್ಲೀನರ್‍ಗಳಾದ ಇವರು ಆಗಾಗ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ತೆರಳುತ್ತಿದ್ದರು. ಈ ಸಂದರ್ಭಗಳಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಅವರನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ ಕೊಂದಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Facebook Comments