ಐ ಲವ್ ಯು 50ರ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ನಲ್ಲಿ ಸಾಲು ಸಾಲಾಗಿ ಚಿತ್ರಗಳು ಬರ್ತಾನೇ ಇವೆ. ಆದರೆ, ಗೆಲುವಿನ ನಗೆ ಬೀರುವ ಚಿತ್ರಗಳು ಮಾತ್ರ ಬೆರಳೆಣಿಕೆ. ಬಿಡುಗಡೆಯಾಗುವ ಬಹುತೇಕ ಚಿತ್ರಗಳು ಎರಡರಿಂದ ಮೂರು ವಾರಗಳಲ್ಲಿ ಚಿತ್ರಮಂದಿರಗಳಿಂದ ಹೊರಹೋಗುತ್ತವೆ. ಎಲ್ಲಿ ಗಟ್ಟಿತನ ಚಿತ್ರದಲ್ಲಿ ಕಾಣುತ್ತದೋ ಅಂತಹ ಚಿತ್ರಗಳು ಯಶಸ್ಸಿನ ಹಾದಿಯತ್ತ ಸಾಗುತ್ತವೆ.

ಆ ನಿಟ್ಟಿನಲ್ಲಿ ಈ ವರ್ಷ ಉಪೇಂದ್ರ ಹಾಗೂ ಆರ್.ಚಂದ್ರು ಕಾಂಬಿನೇಷನ್‍ನಲ್ಲಿ ಹೊರಬಂದ ಮೊದಲ ಚಿತ್ರ ಐ ಲವ್ ಯು ಈಗ 50 ದಿನಗಳನ್ನು ದಾಟಿ ಮುನ್ನುಗ್ಗುತ್ತಿದೆ. ಐವತ್ತರ ಸಂಭ್ರಮವನ್ನು ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರೂ ಆದ ಆರ್.ಚಂದ್ರು ಇತ್ತೀಚೆಗೆ ಸರಳವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಚಿತ್ರಕ್ಕಾಗಿ ದುಡಿದ ಎಲ್ಲರಿಗೂ ಸ್ಮರಣ ಫಲಕವನ್ನು ವಿತರಿಸಿದರು.

ನಂತರ ಚಂದ್ರು ಮಾತನಾಡುತ್ತ ಈ ಸಿನಿಮಾ ಹುಟ್ಟಿದ್ದು, ಯಶಸ್ಸು ಕಂಡಿದ್ದು, ಎಲ್ಲವನ್ನು ನೆನಪು ಮಾಡಿಕೊಂಡರು. ಈ ಯಶಸ್ಸಿಗೆ ಚಿತ್ರಕ್ಕಾಗಿ ದುಡಿದ ಎಲ್ಲರೂ ಕಾರಣರು, ಅಲ್ಲದೆ ಚಿತ್ರದ 100ನೇ ದಿನದ ಕಾರ್ಯಕ್ರಮವನ್ನು ಕೂಡ ಅದ್ಧೂರಿಯಾಗಿ ನಡೆಸಲು ಪ್ಲಾನ್ ಮಾಡಿದ್ದೇವೆ. ತಮಿಳಿನಲ್ಲಿ ಶಿವ-ಅಜಿತ್ ಜೋಡಿಯಲ್ಲಿ ಸತತವಾಗಿ ಐದು ಚಿತ್ರಗಳು ತೆರೆಕಂಡಿದೆ.

ಅದೇ ರೀತಿ ನಾನು ಉಪೇಂದ್ರ ಅವರ ಜತೆಗೂ ಒಂದರ ಹಿಂದೊಂದರಂತೆ ಚಿತ್ರಗಳನ್ನು ಮಾಡುವ ಬಯಕೆ ಇದೆ ಎಂದು ಹೇಳಿದರು. ನಟ ಉಪೇಂದ್ರ ಮಾತನಾಡಿ ಜನರೆಲ್ಲಾ ಲವ್ ಯು ಅಂತ ಈ ಸಿನಿಮಾವನ್ನು ಇಲ್ಲಿಯವರೆಗೂ ತೆಗೆದುಕೊಂಡು ಬಂದಿದ್ದಾರೆ.

ಆಗಿನ ಕಾಲದಲ್ಲಿ ಹೆಚ್ಚೆಂದರೆ 30 ಸೆಂಟರ್‍ಗಳಲ್ಲಿ ಒಂದು ಚಿತ್ರ ಬಿಡುಗಡೆಯಾಗುತ್ತಿತ್ತು. ಈಗ ಏಕಕಾಲಕ್ಕೆ 300ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ತೆರೆಗೆ ಬರುತ್ತಿರುವುದರಿಂದ ಎರಡು ವಾರ ಪ್ರದರ್ಶನ ಕಂಡರೆ ಸಾಕು ಆ ಸಿನಿಮಾ ಗೆದ್ದಂತೆ. ಅಂಥದ್ದರಲ್ಲಿ ಚಂದ್ರು ಪ್ರಯತ್ನದ ಈ ಚಿತ್ರ 50ನೇ ದಿನವನ್ನೂ ದಾಟಿ ಮುನ್ನಡೆದಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.

ಒಂದು ಚಿತ್ರದಿಂದ ನಿರ್ಮಾಪಕರಿಗೆ ಲಾಭ ಬಂದರೆ ಸಾಲದು, ಆ ಚಿತ್ರದ ವಿತರಕ, ಪ್ರದರ್ಶಕರಿಗೆ ದುಡ್ಡು ಬಂದು, ಪ್ರೇಕ್ಷಕ ಖುಷಿ ಪಟ್ಟರೆ ಅದು ಚಿತ್ರದ ನಿಜವಾದ ಗೆಲುವು ಎಂದರಲ್ಲದೆ ನಾನು ಜನರ ಬಳಿಗೆ ಆಡಳಿತ ತರಬೇಕೆಂದು ಪ್ರಜಕೀಯ ಪಕ್ಷವನ್ನು ಹುಟ್ಟಿ ಹಾಕಿದೆ. ರಾಜಕೀಯ ನನಗೆ ಗೊತ್ತಿಲ್ಲ. ಅಧಿಕಾರವನ್ನು ನಾಡಿನಿಂದ ಪ್ರಜೆಗಳಿಗೆ ಒಪ್ಪಿಸೋದು ನಮ್ಮ ಪಕ್ಷದ ಧ್ಯೇಯವಾಗಿದೆ.ಎಂದು ಹೇಳಿದರು.

ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ ಮತ್ತು ಆನಂದ್ ಗುರೂಜಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರದ ಕಲಾವಿದರು, ತಂತ್ರಜ್ಞರು ಹಾಗೂ ಮಾಧ್ಯಮದವರಿಗೆ ಸ್ಮರಣ ಫಲಕಗಳನ್ನು ವಿತರಣೆ ಮಾಡಿದರು. ಮಾಜಿ ಸಚಿವ ರೇವಣ್ಣ ಮಾತನಾಡಿ, ಆರ್. ಚಂದ್ರು ತಮ್ಮ ಪುತ್ರನಿಗೆ ಮತ್ತೊಂದು ಚಿತ್ರವನ್ನು ಮಾಡಿಕೊಡುತ್ತಿರುವುದಾಗಿ ಪ್ರಕಟಿಸಿದರು. ಐ ಲವ್ ಯು ಚಿತ್ರದ ನಾಯಕಿ ಸೋನುಗೌಡ, ಸಂಗೀತ ನಿರ್ದೇಶಕರಾದ ಡಾ.ಕಿರಣ್ ತೋಟಂಬೈಲು, ಲಹರಿ ವೇಲು, ವಿತರಕ ಮೋಹನದಾಸ್ ಪೈ, ಹಿನ್ನೆಲೆ ಸಂಗೀತವನ್ನು ಮಾಡಿದ ಗುರುಕಿರಣ್, ಮೋಹನ್ ಮುಂತಾದವರು ಉಪಸ್ಥಿತರಿದ್ದರು. ಈ ಸಲವೂ ನಾಯಕಿ ರಚಿತಾ ರಾಮ್ ಬಂದಿರಲಿಲ್ಲ.

ಐ ಲವ್ ಯು ಚಿತ್ರ ಎಲ್ಲ ಕೇಂದ್ರಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಯಶಸ್ವಿ 100ನೆ ದಿನದತ್ತ ಮುನ್ನುಗ್ಗುತ್ತಿದೆ.

Facebook Comments