ವೈರಿಗಳನ್ನು ಎದುರಿಸಲು ವಾಯುಪಡೆ ಸಾಮರ್ಥ್ಯ ವೃದ್ಧಿ ಅನಿವಾರ್ಯ: ಐಎಎಫ್ ಮುಖ್ಯಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Dhanova--01
ನವದೆಹಲಿ, ಸೆ.12- ವೈರಿಗಳ ದಾಳಿಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯ ವಾಯುಪಡೆ (ಐಎಎಫ್) ಸಾಮಥ್ರ್ಯವನ್ನು ವೃದ್ಧಿಗೊಳಿಸಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದು ಐಎಎಫ್ ಮುಖ್ಯಸ್ಥ ಏರ್‍ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಹೇಳಿದ್ದಾರೆ.
ಭಾರತ ಎದುರಿಸುತ್ತಿರುವ ಗಂಭೀರ ಆತಂಕವನ್ನು ವಿಶ್ವದ ಯಾವುದೇ ದೇಶವು ಎದುರಿಸುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಭಾರತೀಯ ವಾಯುಪಡೆಯ ಶಕ್ತಿ-ಸಾಮಥ್ರ್ಯ ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ರಾಜಧಾನಿ ದೆಹಲಿಯಲ್ಲಿ ಇಂದು ನಡೆದ ಐಎಎಫ್‍ನ ಶಕ್ತಿ ಸಾಮಥ್ರ್ಯ ವಿನ್ಯಾಸ-2035 ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದರು.
ಎದುರಾಳಿಗಳು ಮತ್ತು ವೈರಿ ರಾಷ್ಟ್ರಗಳ ಉದ್ದೇಶಗಳು ದಿನ ಬೆಳಗಾಗುವುದರೊಳಗೆ ಬದಲಾಗುತ್ತವೆ. ಹೀಗಾಗಿ ತನ್ನ ಶಕ್ತಿ ಮಟ್ಟವನ್ನು ವೃದ್ಧಿಸಿಕೊಳ್ಳುವುದು ಐಎಎಫ್‍ಗೆ ಹಿಂದೆಂದಿಗಿಂತಲೂ ಈಗ ಅನಿವಾರ್ಯವಾಗಿದೆ ಎಂಬ ಗಂಭೀರ ವಾಸ್ತವ ಸಂಗತಿಯನ್ನು ಅವರು ತಿಳಿಸಿದರು. ಭಾರತದ ನೆರೆಹೊರೆ ದೇಶಗಳು ಸುಮ್ಮನೆ ಕುಳಿತಿಲ್ಲ. ಚೀನಾದಂಥ ದೇಶಗಳು ತನ್ನ ವಾಯುಪಡೆ ಸಾಮಥ್ರ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿದೆ ಎಂಬುದನ್ನು ಸಹ ಅವರು ಆತಂಕದಿಂದಲೇ ಹೇಳಿದರು.

ಭಾರತೀಯ ವಾಯುಪಡೆ ಸಾಮಥ್ರ್ಯ ಹೆಚ್ಚಿಸಲು ಕೇಂದ್ರ ಸರ್ಕಾರ ರಫೇಲ್ ಯುದ್ಧ ವಿಮಾನಗಳನ್ನು ಹೊಂದುತ್ತಿದೆ ಹಾಗೂ ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಐಎಎಫ್ ಮುಖ್ಯಸ್ಥರು ತಿಳಿಸಿದರು. ಎರಡು ರಫೇಲ್ ಜೆಟ್ ಸ್ಕ್ವಾಡ್ರನ್‍ಗಳ ಖರೀದಿಯನ್ನು ಸಮರ್ಥಿಸಿಕೊಂಡ ಅವರು, ಇದೇ ರೀತಿಯ ವ್ಯವಹಾರಗಳು ಈ ಹಿಂದೆ ನಡೆದಿರುವ ಉದಾಹರಣೆಗಳಿವೆ ಎಂದು ಉಲ್ಲೇಖಿಸಿದರು.

Facebook Comments

Sri Raghav

Admin