ವಿಶ್ವಕಪ್‍ ಕ್ರಿಕೆಟ್ : ನಂ.1 ಸ್ಥಾನಕ್ಕೇರಲು ಕೊಹ್ಲಿ ಪಡೆ ಕಾತರ

ಈ ಸುದ್ದಿಯನ್ನು ಶೇರ್ ಮಾಡಿ

ಟೌನ್‍ಟನ್ ,ಜೂ.12- ವಿಶ್ವಕಪ್‍ನಲ್ಲಿ ಅಜೇಯರಾಗಿ ಉಳಿದಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಲಿದ್ದು ನಂಬರ್ 1 ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಕಿವೀಸ್ ಹೋರಾಟ ನಡೆಸಿದರೆ, ಅಗ್ರಸ್ಥಾಯಿ ಆಗಲು ವಿರಾಟ್ ಪಡೆ ಕಾತರದಿಂದಿದೆ.

ವಿಶ್ವಕಪ್‍ನ ಅಭ್ಯಾಸ ಪಂದ್ಯದಲ್ಲಿ ಕೇನ್ ವಿಲಿಯಮ್ಸ್ ತಂಡದ ಎದುರು ಸೋತಿರುವ ಭಾರತ ಅದಕ್ಕೆ ಪ್ರತೀಕಾರ ಹೇಳಲು ಲೆಕ್ಕಾಚಾರ ಹಾಕುತ್ತಿದೆ.
ಬ್ಯಾಟಿಂಗ್ ಮಾಂತ್ರಿಕ ಶಿಖರ್‍ಧವನ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದರೆ ತಂಡದ ಬ್ಯಾಟಿಂಗ್ ಕುಸಿಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಾಯಕ ವಿರಾಟ್‍ಕೊಹ್ಲಿ, ಕೆ.ಎಲ್.ರಾಹುಲ್, ಮಹೇಂದ್ರಸಿಂಗ್ ಧೋನಿ ಹೊತ್ತಿದ್ದು ಕಿವೀಸ್‍ನ ಆಕ್ರಮಣಕಾರಿ ಬೌಲರ್‍ಗಳಾದ ಟ್ರೆಂಟ್ ಬೋಲ್ಟ್, ನಿಶೀಮ್, ಫ್ಯಾರ್‍ಗ್ಯೂರ್ಸನ್, ಬೋಲ್ಟ್, ಹೆನ್ರಿಯನ್ನು ಎದುರಿಸುವುದಕ್ಕಾಗಿ ನೆಟ್ಸ್‍ನಲ್ಲಿ ಕಠಿಣ ಪರಿಶ್ರಮ ನಡೆಸಿದ್ದಾರೆ.

ಭಾರತದ ಬೌಲಿಂಗ್ ಪಡೆಯು ಬಲಿಷ್ಠವಾಗಿದ್ದು 5 ಬಾರಿ ವಿಶ್ವಚಾಂಪಿಯನ್ಸ್ ಆಗಿರುವ ಆಸ್ಟ್ರೇಲಿಯಾವನ್ನು ಮಣಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಜಸ್‍ಪ್ರೀತ್‍ಬೂಮ್ರಾ, ಭುವನೇಶ್ವರ್, ಯಜುವೇಂದ್ರ ಚಹಾಲ್ ಕಿವೀಸ್‍ನ ಬ್ಯಾಟಿಂಗ್ ಬೆನ್ನೆಲುಬಾಗಿರುವ ಕಾಲಿನ್ ಮುನ್ರೊ, ಗುಪ್ಟಿಲ್, ಕೇನ್ ವಿಲಿಯಮ್ಸ್, ಟ್ರೇಲರ್ ಅನ್ನು ಕಟ್ಟಿ ಹಾಕುವತ್ತ ಗಮನ ಹರಿಸಿದ್ದಾರೆ.

ರಾಹುಲ್- ರೋಹಿತ್ ಮೋಡಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್‍ಮನ್ ಆದ ಶಿಖರ್‍ಧವನ್ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಹಿತ್ ಹಾಗೂ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದು, ಪ್ರಸ್ತುತ ವಿಶ್ವಕಪ್‍ನಲ್ಲಿ ರನ್‍ನ ಹೊಳೆ ಹರಿಸುತ್ತಿರುವ ಈ ಆಟಗಾರರು ನಾಳೆಯ ಪಂದ್ಯದಲ್ಲೂ ದೊಡ್ಡ ಇನ್ನಿಂಗ್ಸ್ ಕಟ್ಟುವ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದಾರೆ.

ಪಂತ್- ಶಂಕರ್ ಪಾದಾರ್ಪಣೆ..? : ಶಿಖರ್‍ಧವನ್ ಗಾಯಗೊಂಡಿರುವುದರಿಂದ ತಂಡವನ್ನು ಕೂಡಿಕೊಂಡಿರುವ ಯುವ ವಿಕೆಟ್‍ಕೀಪರ್ ರಿಷಭ್‍ಪಂತ್ ಹಾಗೂ ಅಲೌಂಡರ್ ವಿಜಯ್‍ಶಂಕರ್ ಅವರು ವಿಶ್ವಕಪ್‍ನಲ್ಲಿ ಪಾದಾರ್ಪಣೆ ಮಾಡಲು ಹಾತೊರೆಯುತ್ತಿದ್ದು ಅವರು ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೋ ಅಥವಾ ಅನುಭವಿ ಆಟಗಾರ ದಿನೇಶ್‍ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆಯುವರೋ ಎಂಬುದನ್ನು ಕಾದು ನೋಡಬೇಕಾಗಿದೆ.

ಟೌನ್‍ಟನ್ ಪಿಚ್ ಬ್ಯಾಟಿಂಗ್‍ಗೆ ಹೆಚ್ಚು ಸಹಕಾರಿಯಾಗಿದ್ದು ನ್ಯೂಜಿಲೆಂಡ್ ಈಗಾಗಲೇ ಈ ಪಿಚ್‍ನಲ್ಲಿ ಆಘ್ಘಾನ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು ನಾಳಿನ ಪಂದ್ಯದಲ್ಲೂ ಭಾರತವನ್ನು ಕಟ್ಟಿಹಾಕುವ ರಣತಂತ್ರ ರೂಪಿಸಿದ್ದರೆ, ಕಿವೀಸ್ ಪಡೆಯ ಸವಾಲನ್ನು ಎದುರಿಸಿ ಹ್ಯಾಟ್ರಿಕ್ ಗೆಲುವಿನ ಸವಿಯನ್ನು ಕಾಣಲು ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಕಾತರದಿಂದಿದೆ.

ಏಕದಿನ ಒಟ್ಟು ಪಂದ್ಯಗಳು:98, ನ್ಯೂಜಿಲೆಂಡ್ ಗೆಲುವು:43, ಭಾರತ ಗೆಲುವು:49, ಟೈ:1 , ಫಲಿತಾಂಶ ರದ್ದು:5
ವಿಶ್ವಕಪ್‍ನಲ್ಲಿ : ಒಟ್ಟು ಮುಖಾಮುಖಿ:7 , ಭಾರತ ಗೆಲುವು:3, ನ್ಯೂಜಿಲೆಂಡ್:4,

1- ಜೂನ್- 1975- ಮ್ಯಾನ್‍ಚೆಸ್ಟರ್- ನ್ಯೂಜಿಲೆಂಡ್‍ಗೆ 4 ವಿಕೆಟ್‍ಗಳ ಗೆಲುವು
13-ಜೂನ್-1979- ಲೀಡ್ಸ್- ನ್ಯೂಜಿಲೆಂಡ್‍ಗೆ 8 ವಿಕೆಟ್‍ಗಳ ಗೆಲುವು
14-ಅಕ್ಟೋಬರ್-1987-ಬೆಂಗಳೂರು- ಭಾರತಕ್ಕೆ 16 ರನ್‍ಗಳ ವಿಜಯ
31 ಅಕ್ಟೋಬರ್ 1987-ನಾಗ್ಪುರ- ಭಾರತಕ್ಕೆ 9 ವಿಕೆಟ್‍ಗಳ ದಿಗ್ವಿಜಯ
12 ಮಾರ್ಚ್ 1992- ಡುನೆಡೀನ್- ನ್ಯೂಜಿಲೆಂಡ್‍ಗೆ 4 ವಿಕೆಟ್‍ಗಳ ಗೆಲುವು
12 ಜೂನ್ 1999- ನ್ಯಾಂಟಿಗ್‍ಹ್ಯಾಮ್- ನ್ಯೂಜಿಲೆಂಡ್‍ಗೆ 5 ವಿಕೆಟ್‍ಗಳ ಗೆಲುವು
14 ಮಾರ್ಚ್ 2003- ಸೆಂಚೂರಿಯನ್ -ಭಾರತಕ್ಕೆ 7 ವಿಕೆಟ್‍ಗಳ ಗೆಲುವು

ಭಾರತ:
ಗರಿಷ್ಠ ಮೊತ್ತ :329/4,  ಕನಿಷ್ಠ ಮೊತ್ತ: 88
ಅತ್ಯಧಿಕ ರನ್ : ಸಚಿನ್‍ತೆಂಡೂಲ್ಕರ್1750 ರನ್, 186 ಗರಿಷ್ಠ, 5 ಶತಕ, 8 ಅರ್ಧಶತಕ
ಗರಿಷ್ಠ ವಿಕೆಟ್: ಜವಾಗಲ್ ಶ್ರೀನಾಥ್ 51 ವಿಕೆಟ್

ನ್ಯೂಜಿಲೆಂಡ್: 
ಗರಿಷ್ಠ ಮೊತ್ತ: 349/9
ಕನಿಷ್ಠ ಮೊತ್ತ: 79

ಅತ್ಯಧಿಕ ರನ್:ನ್ಯಾಥನ್ ಆಸ್ಟ್ಲೆ-1207- 120 ಗರಿಷ್ಠ, 5 ಶತಕ, 5 ಅರ್ಧಶತಕ
ಗರಿಷ್ಠ ವಿಕೆಟ್: ಕೇಲ್ ಮಿಲ್ಸ್32 ವಿಕೆಟ್

Facebook Comments