ಐಸಿಯು ಬೆಡ್‍ಗಳಲ್ಲೂ ಗೋಲ್‍ಮಾಲ್, ಶೇ.50ರಷ್ಟು ದುರುಪಯೋಗ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.17-ನಗರದ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ(ಐಸಿಯು) ಬೆಡ್‍ಗಳ ದುರುಪಯೋಗ, ವಿಐಪಿಗಳದ್ದೇ ದರಬಾರು. ಜನಸಾಮಾನ್ಯರಿಗೆ ಸಿಗುತ್ತಿಲ್ಲ…. ಕೊರತೆ ಎದ್ದು ಕಾಣುತ್ತಿದೆ. ಸಚಿವರ, ಶಾಸಕರ ಪ್ರಭಾವ ಬಳಸಿಕೊಂಡು ಹಲವರು ಐಸಿಯು ಬೆಡ್‍ಗಳಿಗೆ ದಾಖಲಾದ ಪರಿಣಾಮ ಐಸಿಯು ಬೆಡ್‍ಗಳ ಕೊರತೆ ಎದುರಾಗಿದೆ. ಹಾಗಾಗಿ ಕೊರೊನಾ ಸೋಂಕಿನ ತೀವ್ರತೆ, ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಇದು ಬಿಬಿಎಂಪಿ ಅಧಿಕಾರಿಗಳೇ ಬಿಚ್ಚಿಟ್ಟ ಸತ್ಯ…. ಐಸಿಯು ಹಾಸಿಗೆಗಳ ದುರುಪಯೋಗದ ಬಗ್ಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಅವರು ಪ್ರತಿಕ್ರಿಯಿಸಿ, ಈ ಬಗ್ಗೆ ಕಾರ್ಯಾಚರಣೆ ನಡೆಸಲು ವಲಯವಾರು ಎಐಎಸ್, ಐಪಿಎಸ್ ಅಧಿಕಾರಿಗಳ ನೇತೃತ್ವದ 9 ತಂಡಗಳನ್ನು ರಚನೆ ಮಾಡಿದ್ದೇವೆ. ಪೂರ್ವ ವಲಯಕ್ಕೆ ಎರಡು ತಂಡ, ಉಳಿದ ವಲಯಗಳಿಗೆ ಒಂದೊಂದು ತಂಡಗಳನ್ನು ರಚನೆ ಮಾಡಲಾಗಿದೆ.

ಇವರು ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಲಿದ್ದಾರೆ. ಯಾರಿಗೆ ಐಸಿಯು ಬೆಡ್ ಅವಶ್ಯಕತೆ ಇರುವುದಿಲ್ಲ. ಅವರನ್ನು ಅಲ್ಲಿಂದ ಜನರಲ್ ವಾರ್ಡ್‍ಗೆ ಸ್ಥಳಾಂತರ ಮಾಡಲಿದ್ದಾರೆ ಎಂದು ಹೇಳಿದರು. ಮನೆ ಬಾಗಿಲಿಗೆ ಸ್ಕೂಲ್ ಬಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ಐಸಿಯು ಬೆಡ್‍ಗಳಲ್ಲಿ ವಿಐಪಿಗಳದ್ದೇ ದರ್ಬಾರು, ಜನಸಾಮಾನ್ಯರಿಗೆ ತುರ್ತು ಪರಿಸ್ಥಿತಿ ಇದ್ದರೂ ಐಸಿಯು ಸಿಗುತ್ತಿಲ್ಲ. ಐಸಿಯು ಅಗತ್ಯವೇ ಇಲ್ಲದಿರುವ ಕೊರೊನಾ ಸೋಂಕಿತರು ಪ್ರಭಾವ ಬಳಸಿ ಐಸಿಯು ಬೆಡ್‍ಗಳಲ್ಲಿ ದಾಖಲಾಗುತ್ತಿದ್ದಾರೆ.

ಸಾಮಾನ್ಯ ಬೆಡ್‍ಗಳಲ್ಲಿ ಇರಬೇಕಾದ ರೋಗಿಗಳು ಆತಂಕದಿಂದ ಐಸಿಯುಗೆ ದಾಖಲಾಗುತ್ತಿದ್ದಾರೆ ಮತ್ತೆ ಕೆಲವರು ಮುಂದೆ ಐಸಿಯು ಸಿಗುತ್ತೋ ಇಲ್ಲವೋ ಎಂಬ ಆತಂಕದಿಂದ ಅಲ್ಲಿ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಶೇ.50ರಷ್ಟು ಐಸಿಯು ಬೆಡ್‍ಗಳ ದುರುಪಯೋಗವಾಗುತ್ತಿದೆ. ಈ ದುರುಪಯೋಗದ ಬಗ್ಗೆ ಸರ್ಕಾರಕ್ಕೆ ವಲಯವಾರು ವರದಿಯನ್ನು ಆಯುಕ್ತರು ನೀಡಿದ್ದಾರೆ. ಹೀಗಾಗಿ ದಾಖಲೆ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದೆ.

ಈ ತಂಡ ಆರೋಗ್ಯ ಸ್ಥಿತಿ ಗಂಭೀರವಿಲ್ಲ ಎಂದರೆ ಅಂತಹ ರೋಗಿಗಳನ್ನು ಸಾಮಾನ್ಯ ವಾರ್ಡ್‍ಗೆ ಸಿಫ್ಟ್ ಮಾಡಲಿದೆ. ಗಂಭೀರ ಸೋಂಕಿತರಿಗೆ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ದೊರೆಯಲಿದೆ. ಯಾವುದೇ ಪ್ರಭಾವ ಒತ್ತಡಕ್ಕೆ ಮಣಿಯದೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ. ಕೋವಿಡ್ ಸಂಖ್ಯೆ ಹೆಚ್ಚಳವಾಗದ ಹಾಗೆ ಮುನ್ನೆ ಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಅವರು, ಎಲ್ಲಾ ಕೊರೊನಾ ಸೋಂಕಿತರು ಆಸ್ಪತ್ರೆಗೆ ಸೇರುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯ ಬಹುದು. ಹಾಗೂ ಕೋವಿಡ್ ಸೆಂಟರ್ ನಲ್ಲಿಯೂ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ವಿಕ್ಟೋರಿಯ ಆಸ್ಪತ್ರೆಯಲ್ಲಿ ಬೆಡ್‍ಗಳ ಸಂಖ್ಯೆಯನ್ನು 150ರಿಂದ 500ಕ್ಕೆ ಎರಿಕೆ ಮಾಡುತ್ತಿದ್ದಾರೆ. ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್‍ನಿಂದ 4300 ಬೆಡ್‍ಗಳ ವ್ಯವಸ್ಥೆಯಾಗಿದೆ. ಬಿಬಿಎಂಪಿ ವಾರ್‍ರೂಮ್‍ಗಳಡಿ ಬೆಡ್ ವಿತರಣೆ ಮಾಡಲಾಗುತ್ತಿದೆ. ಇಂದು ಸಂಜೆಯೊಳಗೆ 10 ಕೋವಿಡ್ ಸೆಂಟರ್‍ಗಳು ಸೇವೆಗೆ ಲಭ್ಯವಾಗಲಿದೆ. ವಾರ್ಡ್‍ಗೆ 2 ಅಂಬ್ಯುಲೆನ್ಸ್ ನೀಡಲಾಗಿದೆ. ಜನರು ಖಾಸಗಿ ಆಂಬ್ಯುಲೆನ್ಸ್‍ಗೆ ಹೋಗುವ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಐಸಿಯು ಹಾಗೂ ಐಸಿಯು ವೆಂಟಿಲೇಟರ್ ಬೆಡ್ ಸಹ ನಮ್ಮಲ್ಲಿ ಇದೆ. ಅವಶ್ಯಕತೆ ಇದ್ದವರಿಗೆ ಬೆಡ್ ವ್ಯವಸ್ಥೆ ಮಾಡಲಾಗಿದೆ. ಶಿವಾಜಿನಗರದಲ್ಲಿ ಇಂದು ಚರಕ ಆಸ್ಪತ್ರೆ ಉದ್ಘಾಟನೆಯಾಗುತ್ತಿದೆ. ಇದರಲ್ಲಿ 150 ಐಸಿಯು ವೆಂಟಿಲೇಟರ್ ಬೆಡ್‍ಗಳನ್ನು ನಮ್ಮ ವ್ಯವಸ್ಥೆಯೊಳಗೆ ತರಲಾಗುತ್ತದೆ. ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಶೇ.50ರಷ್ಟು ಬೆಡ್ ಮೀಸಲಾತಿಗೆ ನೋಟಿಸ್ ನೀಡಲಾಗಿದೆ ಎಂದು ಗೌರವ್ ಗುಪ್ತ ತಿಳಿಸಿದರು.

Facebook Comments