ಐಸಿಯು ಬೆಡ್ ಸಿಗದೆ ಹಾರಿಹೋಯ್ತು ಪ್ರಾಣ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.16- ಕೊರೊನಾ ಮಹಾಮಾರಿ ಅಂಕೆ ಮೀರಿ ವ್ಯಾಪಿಸುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಿಗುತ್ತಿಲ್ಲ. ಐಸಿಯುಗಳು ಭರ್ತಿಯಾಗಿವೆ. ಕೊರೊನಾ ಪಾಸಿಟಿವ್ ರೋಗಿಗಳು ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನಿನ್ನೆ ಸಣ್ಣ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಸೇರಿ ಕೊರೊನಾ ಪಾಸಿಟಿವ್ ದೃಢಪಟ್ಟು ನಗರದ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ಅವಕಾಶ ಸಿಗದೆ ಕೇವಲ ಆರು ಗಂಟೆಯಲ್ಲಿ ಪ್ರಾಣ ಬಿಡಬೇಕಾದ ದುರಂತ ಘಟನೆ ಸಿಲಿಕಾನ್ ಸಿಟಿಯ ಹನುಮಂತನಗರದ ಗವಿಪುರಂ ಗುಟ್ಟಳ್ಳಿಯಲ್ಲಿ ನಡೆದಿದೆ.

ಶಿವಾಜಿರಾವ್ (55) ಮೃತಪಟ್ಟವರು. ಇವರು ಮಧುಮೇಹದ ತೊಂದರೆಯಿಂದ ಬಳಲುತ್ತಿದ್ದು, ಉಸಿರಾಟದ ತೊಂದರೆಯಿಂದ ನಿನ್ನೆ ಮನೆ ಸಮೀಪದ ಆಸ್ಪತ್ರೆಗೆ ಬಂದಿದ್ದಾರೆ. ಇವರನ್ನು ತಪಾಸಣೆಗೊಳಪಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ. ಕೂಡಲೇ ನಿಮಗೆ ಚಿಕಿತ್ಸೆ ಅಗತ್ಯವಿದೆ.

ತುರ್ತು ತೀವ್ರ ನಿಗಾ ಘಟಕ ಇರುವ ಆಸ್ಪತ್ರೆಗೆ ದಾಖಲಾಗಬೇಕು ಎಂದು ಹೇಳಿದ್ದಾರೆ. ತಕ್ಷಣ ಅವರ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಲು ಮುಂದಾದರು. ನಗರದ ಯಾವ ಆಸ್ಪತ್ರೆ ಹುಡುಕಿದರೂ ತುರ್ತು ನಿಗಾಘಟಕದಲ್ಲಿ ಬೆಡ್‍ಗಳು ಇಲ್ಲ. ತಡರಾತ್ರಿ 12 ಗಂಟೆವರೆಗೆ ಹತ್ತಿಪ್ಪತ್ತು ಆಸ್ಪತ್ರೆಗಳಲ್ಲಿ ಇವರನ್ನು ಅಡ್ಮಿಟ್ ಮಾಡಲು ಪ್ರಯತ್ನ ನಡೆಸಿದ್ದಾರೆ. ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‍ಗಳೆಲ್ಲ ಭರ್ತಿಯಾಗಿವೆ. 2 ಗಂಟೆವರೆಗೂ ಐಸಿಯು ಬೆಡ್ ಸಿಗಲಿಲ್ಲ.

ಆರೇಳು ಗಂಟೆವರೆಗೂ ಇವರ ಮಕ್ಕಳು, ಅಳಿಯಂದಿರು ತಮಗೆ ಗೊತ್ತಿರುವವರೆಲ್ಲರನ್ನೂ ದೂರವಾಣಿ ಮೂಲಕ ಸಂಪರ್ಕಿಸಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಿಕೊಡುವಂತೆ ಅಂಗಲಾಚಿದರು. ಯಾವ ಆಸ್ಪತ್ರೆ ಕೇಳಿದರೂ ಬೆಡ್‍ಗಳು ಖಾಲಿ ಇಲ್ಲ. ಎಲ್ಲ ಬೆಡ್‍ಗಳಲ್ಲೂ ಕೊರೊನಾ ಸೋಂಕಿತರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಕಡೆಗೆ ಯಲಹಂಕ ಸಮೀಪದ ಯಾವುದೋ ಒಂದು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಇವರ ಪ್ರಾಣಪಕ್ಷಿ ಹಾರಿಹೋಗಿದೆ.

ಸಕಾಲದಲ್ಲಿ ಇವರಿಗೆ ಚಿಕಿತ್ಸೆ ದೊರೆತಿದ್ದರೆ ಇವರು ಬದುಕುಳಿಯುತ್ತಿದ್ದರು. ಕೊರೊನಾ ಮಹಾಮಾರಿ ಅಷ್ಟು ತೀಕ್ಷ್ಣವಾಗಿ ವ್ಯಾಪಿಸುತ್ತಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ಭರ್ತಿಯಾಗಿವೆ. ಸರ್ಕಾರ ವೆಂಟಿಲೇಟರ್ ಕೊರತೆ ಇಲ್ಲ, ಆಕ್ಸಿಜನ್ ಕೊರತೆ ಇಲ್ಲ, ಐಸಿಯು ಬೆಡ್‍ಗಳ ಕೊರತೆ ಇಲ್ಲ ಎಂದು ಹೇಳುತ್ತಿದೆ. ಆದರೆ, ನಿನ್ನೆ ಶಿವಾಜಿರಾವ್ ಅವರನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಅವರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಲು ಸಾಧ್ಯವಾಗದೆ ಕೇವಲ 6 ಗಂಟೆ ಅವಧಿಯಲ್ಲಿ ಕೊನೆಯುಸಿರೆಳೆಯಬೇಕಾಯಿತು.

ಇಂದು ಅಂತ್ಯಸಂಸ್ಕಾರ ನಡೆಸಲು ಚಿತಾಗಾರದ ಮುಂದೆಯೂ ಕೂಡ 4ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಅವರ ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಇಂತಹ ಪರಿಸ್ಥಿತಿ ಇನ್ನಾರಿಗೂ ಬರಬಾರದೆಂದರೆ ಜನ ಎಚ್ಚರ ವಹಿಸಬೇಕು. ಸರ್ಕಾರದ ಆರೋಗ್ಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಜರ್ ಬಳಕೆ ಮಾಡಬೇಕು. ಬೆಂಗಳೂರಿನಂತಹ ಬೆಂಗಳೂರಿನಲ್ಲಿಯೇ ಎಷ್ಟೆಲ್ಲ ಹೈಟೆಕ್ ಆಸ್ಪತ್ರೆಗಳಿದ್ದರೂ ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರೆ ಜೀವ ಕಳೆದುಕೊಳ್ಳಬೇಕಾಗುತ್ತದೆ… ಎಚ್ಚರ ವಹಿಸಿ…

ಜೀವ ಅಮೂಲ್ಯವಾದುದು. ಕ್ಷಣಮಾತ್ರದಲ್ಲಿ ಜೀವ ಕಳೆದುಕೊಂಡರೆ ಅವಲಂಬಿತರೆಲ್ಲ ಅನಾಥರಾಗಬೇಕಾಗುತ್ತದೆ. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಮುನ್ನೆಚ್ಚರಿಕೆ ಕ್ರಮಗಳ ಮೂಲಕ ನಾವು ಆರೋಗ್ಯವಾಗಿರೋಣ. ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡೋಣ.

Facebook Comments