ಕೊರೋನಾ ಪರೀಕ್ಷೆಗೆ ಇನ್ನು ಮುಂದೆ ಗುರುತಿನ ಚೀಟಿ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.27-ಕೊರೊನಾ ಪರೀಕ್ಷೆ ನಡೆಸುವ ವೇಳೆ ತಪ್ಪು ಮೊಬೈಲ್ ನಂಬರ್ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಇನ್ನು ಮುಂದೆ ಪರೀಕ್ಷೆ ಸಂದರ್ಭದಲ್ಲಿ ಗುರುತಿನ ಚೀಟಿ ನೀಡುವುದನ್ನು ಕಡ್ಡಾಯಗೊಳಿಸಲಿದೆ.

ಇದುವರೆಗೂ 3300ಕ್ಕೂ ಹೆಚ್ಚು ಮಂದಿ ತಪ್ಪು ಮಾಹಿತಿ ನೀಡಿ ತಲೆಮರೆಸಿಕೊಂಡಿರುವುದರಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಈ ಕ್ರಮಕ್ಕೆ ಮುಂದಾಗಿದೆ.

ಇನ್ನು ಮುಂದೆ ಕೊರೊನಾ ಪರೀಕ್ಷೆ ಸಂದರ್ಭದಲ್ಲಿ ಸರ್ಕಾರ ನೀಡಿರುವ ಯಾವುದಾದರೂ ಒಂದು ಗುರುತಿನ ಚೀಟಿ ನೀಡಲೇಬೇಕಾಗಿದೆ. ವಿಳಾಸವಿರುವ ಮತದಾರರ ಗುರುತಿನ ಚೀಟಿ, ಆಧಾರ್, ಪ್ಯಾನ್ ಕಾರ್ಡ್ ನೀಡಬೇಕಾಗುವುದು.

ಇದರ ಜೊತೆಗೆ ಮೊಬೈಲ್ ನಂಬರ್ ನೀಡಬೇಕು. ನೀವು ನೀಡುವ ಗುರುತಿನ ಚೀಟಿ ಹಾಗೂ ಮೊಬೈಲ್ ನಂಬರ್‍ಗೆ ಒಟಿಪಿ ಬಂದ ನಂತರವೇ ಕೊರೊನಾ ಪರೀಕ್ಷೆ ನಡೆಸಲಾಗುವುದು.

ಇನ್ನು ಎರಡು ದಿನಗಳಲ್ಲಿ ಐಡಿ ಕಾರ್ಡ್ ಮತ್ತು ಒಟಿಪಿ ದಾಖಲಿಸಿಕೊಳ್ಳುವ ದತ್ತಾಂಶವನ್ನು ಬಿಬಿಎಂಪಿ ಸಿದ್ದಪಡಿಸಲಿದೆ. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವವರು ಸುಳ್ಳು ಮಾಹಿತಿ ಹಾಗೂ ತಪ್ಪು ಮೊಬೈಲ್ ನಂಬರ್ ನೀಡುವುದನ್ನು ತಡೆಗಟ್ಟುವ ಉದ್ದೇಶದಿಂದ ಬಿಬಿಎಂಪಿ ಇಂತಹ ತೀರ್ಮಾನ ಕೈಗೊಂಡಿದೆ.

Facebook Comments

Sri Raghav

Admin