ಐಐಟಿಪಿಎಲ್‍ನಿಂದ ಕ್ಯಾಥ್ ಲ್ಯಾಬ್ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

lಬೆಂಗಳೂರು,ಅ.26- ಉತ್ತಮ ಗುಣಮಟ್ಟದ ಕೈಗೆಟುಕುವ ದರದ ಕಾರ್ಡಿಯಾಕ್ ಲ್ಯಾಬ್ ಅನ್ನು ಹೊಂದಬೇಕೆಂಬ ಭಾರತದ ಕನಸು ಇದೀಗ ನನಸಾಗಿದೆ. ಇದನ್ನು ಸಾಕಾರಗೊಳಿಸುತ್ತಿರುವ ಐಐಟಿಪಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ಗೌರವ್ ಅಗರ್‍ವಾಲ್ ಮತ್ತು ಅವರ ಯುವ ತಂಡಕ್ಕೆ ಜಯದೇವ ಇನ್‍ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರೀಸರ್ಚ್‍ನ ನಿರ್ದೇಶಕ ಡಾ.ಸಿ.ಎನ್. ಮಂಜು ನಾಥ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ನಗರದ ಇನ್ನೋವೇಷನ್ ಇಮೇಜಿಂಗ್ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್ (ಐಐಟಿಪಿಎಲ್) ಪ್ರಾರಂಭಿಸಿರುವ ಕ್ಯಾಥಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಕೀಯ ಸಾಧನಗಳ ಉತ್ಪಾದನೆ ಕ್ಷೇತ್ರದಲ್ಲಿ ಐಐಟಿಪಿಎಲ್ ಒಂದು ಇನ್‍ವೋಲ್ಯೂಶನ್ ಜೆವಿ ಕಂಪನಿಯಾಗಿದೆ. ಈ ಕಂಪನಿಯು ಕ್ಯಾಥಲ್ಯಾಬ್, ಪಿನಾಕಲ್ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಇದು ನ್ಯೂಯಾರ್ಕ್‍ನ ವಿಜೆ ಟೆಕ್ನಾಲಾಜೀಸ್, ಜರ್ಮನಿ ಮತ್ತು ಭಾರತದ ಎಕ್ಸ್-ಆಲಾ ಎಕ್-ರೇ ಪ್ರಮೋಟರ್ಸ್ ಹಾಗೂ ಹೊಸ ದೆಹಲಿಯ ಇನ್‍ವೋಲ್ಯೂಶನ್ ಹೆಲ್ತ್‍ಕೇರ್‍ನ ಒಂದು ಜಂಟಿ ಸಹಭಾಗಿತ್ವದ ಕಂಪನಿಯಾಗಿದೆ ಎಂದರು.

ಕೇಂದ್ರ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಕ್ಯಾಥ್ ಲ್ಯಾಬ್‍ನಂತಹ ವೈದ್ಯಕೀಯ ಸಾಧನಗಳ ಆವಿಷ್ಕಾರವು ನಮ್ಮ ದೇಶವು ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಆಮದು ಮಾಡಿಕೊಂಡ ಸಾಧನಗಳ ಬೆಲೆಯಲ್ಲಿಯೂ ಹೆಚ್ಚಳವಿರುತ್ತದೆ. ಭಾರತದಲ್ಲಿ ಕ್ಯಾಥ್‍ಲ್ಯಾಬ್‍ಗಳಿಗೆ ಹೆಚ್ಚು ಅಗತ್ಯತೆ ಇದೆ ಎಂದರು.

ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಲ್ಲಿ ರಾಜ್ಯದಲ್ಲಿ ಕ್ಯಾಥ್ ಲ್ಯಾಬ್‍ಗಳನ್ನು ಉತ್ಪಾದನೆ ಮಾಡುವ ಐಐಟಿಪಿಎಲ್ ಘಟಕ ಆರಂಭವಾಗುತ್ತಿರುವುದಕ್ಕೆ ನನಗೆ ಸಂತಸವೆನಿಸುತ್ತಿದೆ. ಇದು ಮೇಡ್-ಇನ್-ಇಂಡಿಯಾದ ಕೈಗೆಟುಕುವ ಕ್ಯಾಥ್ ಲ್ಯಾಬ್ ಆಗಿದ್ದು, ಅನನ್ಯವಾದ ವಿನ್ಯಾಸವನ್ನು ಒಳಗೊಂಡಿರುತ್ತದೆ. ಇದು ಭಾರತದ ಎಲ್ಲಾ ರಾಜ್ಯಗಳ ಎಲ್ಲಾ ಜಿಲ್ಲೆಗಳ ಬೇಡಿಕೆಯನ್ನು ಈಡೇರಿಸುತ್ತದೆ. ಈ ದಿಸೆಯಲ್ಲಿ ಕಾರ್ಯನಿರತವಾಗಿರುವ ಯುವ ಐಐಟಿಪಿಎಲ್ ತಂಡಕ್ಕೆ ನಾನು ಯಶಸ್ಸನ್ನು ಕೋರುತ್ತಿದ್ದೇನೆ ಎಂದು ತಿಳಿಸಿದರು.

ಐಐಟಿಪಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ಗೌರವ್ ಅಗರ್‍ವಾಲ್ ಮಾತನಾಡಿ, ಅಂತಾರಾಷ್ಟ್ರೀಯ ಗುಣಮಟ್ಟದ ಯಂತ್ರ ಗಳೊಂದಿಗೆ ಕ್ಯಾಥ್‍ಲ್ಯಾಬ್ ಅನ್ನು ತಯಾರಿಸುವ ಘಟಕವನ್ನು ಸ್ಥಾಪನೆ ಮಾಡಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ. ಈ ವಿಸ್ತರಣೆಯೊಂದಿಗೆ ಮಾರಣಾಂತಿಕವಾದ ಕಾರ್ಡಿಯೋವಾಸ್ಕುಲರ್ ಕಾಯಿಲೆಯ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ.

ಈ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಬಹುದಾಗಿದೆ ಮತ್ತು ಸಾವಿನ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಬೆಳವಣಿಗೆಯೊಂದಿಗೆ ನಾವು ಮೇಕ್ ಇನ್ ಇಂಡಿಯಾ ಉಪಕ್ರಮದ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದ್ದೇವೆ. ಇದೇ ರೀತಿಯ ನಮ್ಮ ಸೇವೆಗಳನ್ನು ಮುಂಬರುವ ವರ್ಷಗಳಲ್ಲಿ ವಿದೇಶಗಳಿಗೂ ವಿಸ್ತರಣೆ ಮಾಡುವ ಯೋಜನೆಯನ್ನು ಹೊಂದಿದ್ದೇವೆ ಎಂದು ತಿಳಿಸಿದರು. ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಎಂಟಿಝಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ.ಜಿತೇಂದ್ರ ಶರ್ಮಾ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments