ಅಕ್ರಮವಾಗಿ ನಾಡ ಬಂದೂಕುಗಳ ಮಾರಾಟ: ವ್ಯಕ್ತಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.19- ನಾಡಬಂದೂಕುಗಳನ್ನು ಅಕ್ರಮವಾಗಿ ತಯಾರು ಮಾಡಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ದಕ್ಷಿಣ ವಿಭಾಗದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಲಿಂಗಾಚಾರಿ (58) ಬಂಧಿತ ಆರೋಪಿ. ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ತಯಾರು ಮಾಡಿ ತನ್ನ ಬಳಿ ಸಂಗ್ರಹಿಸಿ ಟ್ಟುಕೊಂಡು ಸಾಗಾಣಿಕೆ ಮಾಡಿ ಮಾರಾಟ ಮಾಡಲು ಪ್ರಯತ್ನಿಸಿದ್ದ ಬಗ್ಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಾಧ ಎಸಗಿರುವುದರಿಂದ ಆರೋಪಿಯನ್ನು ಬಂಧಿಸಿ 11 ಸಿಂಗಲ್ ಬ್ಯಾರಲ್ ನಾಡ ಬಂದೂಕುಗಳು ಹಾಗೂ ಬಂದೂಕು ತಯಾರು ಮಾಡಲು ಬಳಕೆ ಮಾಡುತ್ತಿದ್ದ ಬಿಡಿ ಭಾಗಗಳನ್ನು ಮತ್ತು ಬಜಾಜ್ ಸಿಟಿ ಬೈಕ್ ವಶಪಡಿಸಿಕೊಂಡಿದ್ದಾರೆ.

ಫೆ.11ರಂದು ರಾತ್ರಿ ಬನಶಂಕರಿ 3ನೆ ಹಂತ, ಇಟ್ಟಮಡು, ಚಿತ್ತೂರು ಬಸ್ ನಿಲ್ದಾಣದ ಸಮೀಪವಿರುವ ರಂಗಮ್ಮ ದೇವಸ್ಥಾನದ ಬಳಿ ದ್ವಿಚಕ್ರ ವಾಹನದಲ್ಲಿ ನಾಡ ಬಂದೂಕುಗಳನ್ನು ಕಟ್ಟಿಕೊಂಡು ನಿಂತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಆತನ ಬಳಿ ಇದ್ದ ಪ್ಲಾಸ್ಟಿಕ್ ಚೀಲ ಬಿಚ್ಚಿ ಪರಿಶೀಲಿಸಿದಾಗ 2 ಸಿಂಗಲ್ ಬ್ಯಾರಲ್ ನಾಡಬಂದೂಕು ಇರುವುದು ಪತ್ತೆಯಾಗಿದೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಾಡಬಂದೂಕುಗಳನ್ನು ತಯಾರು ಮಾಡುತ್ತಿದ್ದುದು ತಿಳಿದುಬಂದಿದೆ. ಈ ಯಶಸ್ವಿ ಕಾರ್ಯಾಚರಣೆ ಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್ ಪಾಂಡೆ, ವಿವಿ ಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್‍ಮೂರ್ತಿ, ಸಿಕೆ ಅಚ್ಚುಕಟ್ಟು ಠಾಣೆ ಇನ್ಸ್‍ಪೆಕ್ಟರ್ ಜನಾರ್ದನ್, ಪಿಎಸ್‍ಐ ಮನೋಜ್‍ಕುಮಾರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಕೈಗೊಂಡಿತ್ತು.

Facebook Comments