ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಚಿವ ಆನಂದ್ ಸಿಂಗ್‍ ತಲೆದಂಡ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.14-ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ವಿವಾದ ಕುರಿತಂತೆ ಎರಡು ದಿನದೊಳಗೆ ವರದಿ ನೀಡಬೇಕೆಂದು ಬಿಜೆಪಿ ಕೇಂದ್ರ ವರಿಷ್ಠರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸೂಚಿಸಿದ್ದಾರೆ.  ಇನ್ನೊಂದು ಮೂಲಗಳ ಪ್ರಕಾರ ವಿವಾದ ದಿನದಿಂದ ದಿನಕ್ಕೆ ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿರುವುದರಿಂದ ಆನಂದ್ ಸಿಂಗ್ ತಲೆದಂಡವಾದರೂ ಅಚ್ಚರಿ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಈ ನಡುವೆ ಆನಂದ್ ಸಿಂಗ್‍ಗೆ ಅರಣ್ಯ ಖಾತೆ ನೀಡಿರುವುದಕ್ಕೆ ಪ್ರತಿಪಕ್ಷಗಳು, ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧಕ್ತವಾಗುತ್ತಿರುವುದರಿಂದ ಅವರ ಖಾತೆ ಬದಲಾವಣೆ ಮಾಡುವ ಬಗ್ಗೆಯೂ ಸಿಎಂ ಚಿಂತನೆ ನಡೆಸಿದ್ದಾರೆ.  ನಿವೃತ್ತ ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಸಂತೋಷ್ ಹೆಗಡೆ ಸರ್ಕಾರಕ್ಕೆ ನೀಡಿದ್ದ ವರದಿಯಲ್ಲಿ ಆನಂದ್ ಸಿಂಗ್ ಹೆಸರು ಕೂಡ ಇತ್ತು. ಎಸ್‍ಬಿ ಮಿನರಲ್ಸ್ ಕಂಪನಿಯ ಮಾಲೀಕರು ಆಗಿರುವ ಅವರು ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲಿಗೆ ಹೋಗಿಬಂದಿದ್ದರು.

ಇದೀಗ ಸಿಎಂ ಯಡಿಯೂರಪ್ಪನವರು ತಮ್ಮ ಸಂಪುಟದಲ್ಲಿ ಆನಂದ್ ಸಿಂಗ್‍ಗೆ ಅತ್ಯಂತ ಪ್ರಮುಖ ಎನಿಸಿದ ಅರಣ್ಯ ಖಾತೆಯನ್ನು ನೀಡಿ ವಿವಾದಕ್ಕೆ ಸಿಲುಕಿದ್ದಾರೆ.
ಸೋಮವಾರದಿಂದ ಜಂಟಿ ಆಧಿವೇಶನ ಆರಂಭವಾಗಲಿದ್ದು, ನಂತರ ಮಾ.5ರಂದು ಬಜೆಟ್ ಮಂಡನೆಯಾಗಲಿದೆ. ಪ್ರತಿಪಕ್ಷಗಳು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಬಹುದೆಂಬ ಆತಂಕ ಕಾಡುತ್ತಿದೆ.

ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವರನ್ನು ಸಂಪುಟಕ್ಕೆ ತೆಗೆದುಕೊಂಡರೆ ರಾಷ್ಟ್ರ ಮಟ್ಟದಲ್ಲೂ ಬಿಜೆಪಿ ಮುಜುಗರಕ್ಕೆ ಸಿಲುಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಆನಂದ್ ಸಿಂಗ್ ಮೇಲಿನ ಆರೋಪಗಳ ಕುರಿತು ವಿಸ್ತೃತ ವರದಿ ನೀಡುವಂತೆ ವರಿಷ್ಠರು ಸೂಚನೆ ಕೊಟ್ಟಿದ್ದಾರೆ.  ಎಸ್‍ಬಿ ಮಿನರಲ್ಸ್ ಗಣಿ ಕಂಪನಿಯ ಮಾಲೀಕರಾಗಿರುವ ಆನಂದ್ ಸಿಂಗ್ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 719 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಸಂತೋಷ್ ಹೆಗಡೆ ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು.

ಗಣಿ ಗುತ್ತಿಗೆ ಪ್ರದೇಶದ ಹೊರಗೆ ಗಣಿಗಾರಿಕೆ ನಡೆಸಿರುವ ಅವರ ಮೇಲೆ ಅರಣ್ಯ ಅಪರಾಧ ಪ್ರಕರಣ(ಎಫ್‍ಒಸಿ)ದ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.  ಇದೇ ಪ್ರಕರಣದಲ್ಲಿ ಹಿಂದೊಮ್ಮೆ ಅವರನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ಬಂಧಿಸಿತ್ತು. ಇಷ್ಟೆಲ್ಲ ಆರೋಪ ಹೊತ್ತಿರುವ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಅಗತ್ಯವಾದರೂ ಇತ್ತೇ ಎಂಬ ಮೂಲ ಪ್ರಶ್ನೆಯನ್ನು ಹೈಕಮಾಂಡ್ ಮುಂದಿಟ್ಟಿದೆ.

ನಾಳೆಯೊಳಗೆ ಅವರ ಪ್ರಕರಣದ ಕುರಿತು ವರದಿ ನೀಡಬೇಕು. ಕಾನೂನು ತಜ್ಞರ ಜೊತೆ ಚರ್ಚಿಸಿ ನಮ್ಮ ತೀರ್ಮಾನವನ್ನು ಹೇಳುತ್ತೇವೆ ಎಂದು ವರಿಷ್ಠರು ಬಿಎಸ್‍ವೈಗೆ ತಿಳಿಸಿದ್ದಾರೆ.
ಇದೀಗ ಯಡಿಯೂರಪ್ಪನವರು ಆನಂದ್ ಸಿಂಗ್ ಮೇಲೆ ದಾಖಲಾಗಿರುವ ಪ್ರಕರಣಗಳು, ನ್ಯಾಯಾಲಯದಿಂದ ತಂದಿರುವ ತಡೆಯಾಜ್ಞೆ, ಪ್ರಕರಣದ ಸ್ಥಿತಿಗತಿ ಬಗ್ಗೆ ವರದಿಯನ್ನು ನೀಡಲಿದ್ದಾರೆ.

Facebook Comments