ಐಎಂಎ ವಂಚನೆ ಪ್ರಕರಣ : ಇದುವರೆಗೆ 66 ಕೋಟಿ ಮೌಲ್ಯದ ಮಾಲು ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.26- ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಕಂಪನಿ ಆಭರಣ ಮಳಿಗೆಗಳ ಶೋಧ ನಡೆಸಿರುವ ಎಸ್‍ಐಟಿ ಇದುವರೆಗೂ ನಗದು ಸೇರಿದಂತೆ 66 ಕೋಟಿ ಬೆಲೆಯ ಚಿನ್ನಾಭರಣ, ವಜ್ರದ ಆಭರಣ, ಬೆಳ್ಳಿ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ಅವರು ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡುತ್ತಿದ್ದ ಅವರು, ಆರೋಪಿ ಮಹಮ್ಮದ್ ಮನ್ಸೂರ್ ಖಾನ್‍ಗೆ ಸೇರಿದವು ಎನ್ನಲಾದ ವಾಣಿಜ್ಯ ಕಟ್ಟಡಗಳು, ಜಮೀನುಗಳು, ಸ್ಕೂಲ್ ಪ್ರಾಪರ್ಟಿ, ಅಪಾರ್ಟ್‍ಮೆಂಟ್ ಸೇರಿದಂತೆ ಒಟ್ಟಾರೆ 26 ಸ್ಥಿರಾಸ್ತಿಗಳನ್ನು ಎಸ್‍ಐಟಿ ಈವರೆಗೂ ಗುರುತಿಸಿ ತನಿಖೆಯನ್ನು ಚುರುಕುಗೊಳಿಸಿದೆ ಎಂದು ವಿವರಿಸಿದರು.

ಜೂ.17ರಂದು ಪ್ರಕರಣದ ಆರೋಪಿ ಮಹಮ್ಮದ್ ಮನ್ಸೂರ್ ಖಾನ್‍ಗೆ ಸೇರಿದ ಜಯನಗರದ 11ನೇ ಮುಖ್ಯರಸ್ತೆಯ ಐಎಂಎ ಜ್ಯುವೆಲರ್ಸ್ ಕಚೇರಿಯ ಕಟ್ಟಡದಲ್ಲಿ ಎಸ್‍ಐಟಿ ಶೋಧನೆ ನಡೆಸಿ 13 ಕೋಟಿ ಮೌಲ್ಯದ 43 ಕೆಜಿ ಚಿನ್ನಾಭರಣ, 17.6 ಕೋಟಿ ಮೌಲ್ಯದ 5864 ಕ್ಯಾರೆಟ್ ಡೈಮಂಡ್, 1.5 ಕೋಟಿ ಮೌಲ್ಯದ 520 ಕೆಜಿ ಬೆಳ್ಳಿ ಮತ್ತು 1.5 ಕೋಟಿ ಮೌಲ್ಯದ ಸಿಲ್ವರ್ ಡೈಮಂಡ್‍ಗಳನ್ನು ವಶಕ್ಕೆ ಪಡೆದಿದೆ.

ತದನಂತರ ಮನ್ಸೂರ್ ಖಾನ್ ವಿಚ್ಛೇಧಿತ 3ನೇ ಪತ್ನಿ ಮನೆ ಮೇಲೆ ದಾಳಿ ಮಾಡಿ 39.5 ಲಕ್ಷ ಮೌಲ್ಯದ 1,503.7 ಗ್ರಾಂ ಚಿನ್ನಾಭರಣ, 1.5 ಕೆ.ಜಿ. ಬೆಳ್ಳಿ, 2.69 ಲಕ್ಷ ನಗದು ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ40 ಲಕ್ಷ ಎಂದು ಅಂದಾಜಿಸಲಾಗಿದೆ.

ಇದರ ಜೊತೆಗೆ ತಿಲಕ್‍ನಗರದ ಎಸ್‍ಆರ್‍ಕೆ ಗಾರ್ಡನ್‍ನಲ್ಲಿ ಹೊಂದಿರುವ 1.20 ಕೋಟಿ ಮೌಲ್ಯದ ಅಪಾರ್ಟ್‍ಮೆಂಟ್‍ನ ದಾಖಲಾತಿಗಳನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.  ಜೂ.20ರಂದು ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐಎಂಎ ಜ್ಯುವೆಲರಿ ಅಂಗಡಿ ಶೋಧನೆ ಮಾಡಿ ಲಾಕರ್‍ಗಳಲ್ಲಿ ಸಂಗ್ರಹಿಸಿಡಲಾಗಿದ್ದ 8.5 ಕೋಟಿ ಮೌಲ್ಯದ 30 ಕೆಜಿ ಕ್ಯಾರೆಟ್ ವಜ್ರಾಭರಣ ಮತ್ತು 2 ಕೋಟಿ ಮೌಲ್ಯದ 450 ಕೆಜಿ ಬೆಳ್ಳಿ ವಸ್ತುಗಳನ್ನು ಎಸ್‍ಐಟಿ ವಶಕ್ಕೆ ಪಡೆದಿದ್ದು, ಇವುಗಳ ಮೌಲ್ಯ20 ಕೋಟಿ ಎಂದು ಅಂದಾಜಿಸಲಾಗಿದೆ.

ಜೂ.24ರಂದು ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐಎಂಎ ಗೋಲ್ಡ್ ಮತ್ತು ಐಎಂಎ ಜ್ಯುವೆಲರಿ ಮಳಿಗೆಗಳ ಮೇಲೆ ದಾಳಿ ನಡೆಸಿ, ಐಎಂಎ ಗೋಲ್ಡ್ ಮಳಿಗೆಯಲ್ಲಿದ್ದ 41 ಕೆಜಿ 302 ಗ್ರಾಂ ತೂಕದ ಚಿನ್ನಾಭರಣ, 71 ಕೆಜಿ ಬೆಳ್ಳಿಯ ಗಟ್ಟಿ, 5.60 ಲಕ್ಷ ಹಣ ವಶಕ್ಕೆ ಪಡೆದಿದೆ.

ಅಲ್ಲದೆ ಮತ್ತೆ ಈ ಮಳಿಗೆಯಲ್ಲಿ ಶೋಧ ನಡೆಸಿ 320 ಗ್ರಾಂ ಚಿನ್ನಾಭರಣ 14.5ಕ್ಯಾರೆಟ್ ಡೈಮಂಡ್, 60ಕ್ಯಾರೆಟ್ ಹರಳು, 470 ಗ್ರಾಂ ಬೆಳ್ಳಿವಸ್ತುಗಳು, 7.85 ಲಕ್ಷ ನಗದು ಸೇರಿದಂತೆ ಒಟ್ಟು ಮೌಲ್ಯ 24.85 ಲಕ್ಷ ಮೌಲ್ಯ ಎಂದು ಅಂದಾಜಿಸಲಾಗಿದ್ದು, ಇದರ ಜೊತೆಗೆ .32 ರಿವಾಲ್ವರ್ 58 ಗುಂಡುಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.

ನಿನ್ನೆ ತಿಲಕ್‍ನಗರದ ಐಎಂಎ ಗೋಲ್ಡ್ ಮತ್ತು ಯಶವಂತಪುರದ ಮಳಿಗೆಗಳ ಮೇಲೆ ಎಸ್‍ಐಟಿ ಶೋಧ ಮುಂದುವರೆಸಿ 83.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದೆ.

ತಿಲಕ್‍ನಗರದ ಮಳಿಗೆಯಿಂದ 41.60 ಲಕ್ಷ ಬೆಲೆಯ 1 ಕೆಜಿ 300 ಗ್ರಾಂ ಚಿನ್ನಾಭರಣ, 2.20 ಲಕ್ಷ ರೂ. ಮೌಲ್ಯದ 1.5 ಕೆಜಿ ಬೆಳ್ಳಿ ವಸ್ತುಗಳು ಹಾಗೂ 2 ಸಾವಿರ ನಗದು ವಶಪಡಿಸಿಕೊಂಡರೆ, ಯಶವಂತಪುರ ಮಳಿಗೆಯಿಂದ 31.04 ಲಕ್ಷ ಬೆಲೆಯ 970 ಗ್ರಾಂ ಚಿನ್ನದ ಆಭರಣ, 8.40 ಲಕ್ಷ ಬೆಲೆಯ 21 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದೆ.  ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ