ಐಎಂಎ ಜ್ಯುವೆಲ್ಸ್ ಮಳಿಗೆ ನುಗ್ಗಿದ ಎಸ್‍ಐಟಿ ಟೀಮ್, ಚಿನ್ನ-ಬೆಳ್ಳಿ ಲೆಕ್ಕಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.20- ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರದಲ್ಲಿರುವ ಐಎಂಎ ಜ್ಯುವೆಲ್ಸ್ ಮಳಿಗೆಯ ಬೀಗ ತೆಗೆದು ಇಂದು ಎಸ್‍ಐಟಿ ಪರಿಶೀಲನೆ ನಡೆಸಿದೆ.  ಡಿಸಿಪಿ ಗಿರೀಶ್ ಅವರ ನೇತೃತ್ವದಲ್ಲಿ ಸುಮಾರು 50 ಮಂದಿಯ ಅಧಿಕಾರಿಗಳ ತಂಡ ಜ್ಯುವೆಲ್ಸ್ ಮಳಿಗೆಗೆ ಭೇಟಿ ನೀಡಿ ನಾಲ್ಕು ಹಂತಸ್ತಿನ ಕಟ್ಟಡವನ್ನು ಪರಿಶೀಲಿಸಿದೆ.

ಜ್ಯುವೆಲ್ಸ್ ಮಳಿಗೆಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳು ಎಷ್ಟಿವೆ ಎಂಬುದನ್ನು ಲೆಕ್ಕ ಹಾಕಲಾಗುತ್ತಿದೆ ಹಾಗೂ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಸಂಜೆ ವೇಳೆಗೆ ಸಕ್ಕಿರುವ ಚಿನ್ನಾಭರಣಗಳ ಮೌಲ್ಯ ಗೊತ್ತಾಗಲಿದೆ.

ಇಂದು ಬೆಳಗ್ಗೆಯೇ ಎಸ್‍ಐಟಿ ಅಧಿಕಾರಿಗಳ ತಂಡ ಜ್ಯುವೆಲರಿ ಅಂಗಡಿಯ ಬಾಗಿಲು ತೆರೆದು ಒಳಹೋಗಿ ಪರಿಶೀಲನೆ ಕೈಗೊಂಡಿದೆ. ನಾಲ್ಕು ಬಾಕ್ಸ್‍ಗಳನ್ನು ಮಳಿಗೆಯೊಳಗೆ ತೆಗೆದುಕೊಂಡು ಹೋಗಿದ್ದು, ಚಿನ್ನಾಭರಣ ಮತ್ತು ದಾಖಲೆಗಳನ್ನು ಅದರಲ್ಲಿ ಇಟ್ಟಿದ್ದಾರೆ.

ಪರಿಶೀಲನೆ ನಿಮಿತ್ತ ಮಳಿಗೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೆ ಜಯನಗರದಲ್ಲಿರುವ ಐಎಂಎ ಜ್ಯುವೆಲ್ಸ್ ಮಳಿಗೆ ಮತ್ತು ವಂಚಕ ಮೊಹಮ್ಮದ್ ಮನ್ಸೂರ್ ಖಾನ್‍ನ ವಿಚ್ಛೇಧಿತ ಮೂರನೇ ಪತ್ನಿ ಮನೆ ಮೇಲೆ ಎಸ್‍ಐಟಿ ದಾಳಿ ಮಾಡಿ ಒಟ್ಟು 33 ಕೋಟಿ ರೂ. ಮೌಲ್ಯದ ಆಭರಣಗಳನ್ನು ಎಸ್‍ಐಟಿ ವಶಪಡಿಸಿಕೊಂಡಿದೆ.

ಖಾನ್‍ಗೆ ಸೇರಿದ್ದು ಎನ್ನಲಾದ ಜಮೀನು, ಶಾಲೆಯ ದಾಖಲಾತಿ, ಅಪಾರ್ಟ್‍ಮೆಂಟ್, ವಾಣಿಜ್ಯ ಕಟ್ಟಡ ಸೇರಿ ಸುಮಾರು 26 ಚರಾಸ್ತಿಗಳನ್ನು ಎಸ್‍ಐಟಿ ಈಗಾಗಲೇ ಪತ್ತೆಹಚ್ಚಿದೆ. ಈ ನಡುವೆ ದುಬೈನಲ್ಲಿ ಅಡಗಿರುವ ಪ್ರಕರಣದ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್‍ನನ್ನು ಬೆಂಗಳುರು ನಗರಕ್ಕೆ ಕರೆತರಲು ಎಸ್‍ಐಟಿ ಪ್ರಯತ್ನ ಮಾಡುತ್ತಿದೆ.

Facebook Comments