ಐಎಂಎ ಹಗರಣ: ಇಬ್ಬರು ಐಪಿಎಸ್ ಅಧಿಕಾರಿಗಳ ವಿಚಾರಣೆ..!

ಈ ಸುದ್ದಿಯನ್ನು ಶೇರ್ ಮಾಡಿ

ಸಂಸ್ಥೆಗೆ ಸಹಕಾರ ನೀಡಿದ ಆರೋಪದ ಮೇಲೆ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ಪೊಲೀಸರನ್ನು ವಿಚಾರಣೆಗೊಳ ಪಡಿಸುವ ಸಾಧ್ಯತೆ ಇದೆ. ಕಾನ್‍ಸ್ಟೆಬಲ್, ಸಬ್‍ಇನ್‍ಸ್ಪೆಕ್ಟರ್‍ಗಳಿಂದ ಹಿಡಿದು ಆಗಿನ ಜಂಟಿ ಆಯುಕ್ತರವರೆಗೂ ಹಲವಾರು ಮಂದಿಯ ಹೆಸರುಗಳು ಪ್ರಕರಣದಲ್ಲಿ ಕೇಳಿಬಂದಿದೆ. ಆಗಿನ ಡಿಸಿಪಿ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳ ಹೆಸರನ್ನು ಪಟ್ಟಿ ಮಾಡಿಕೊಳ್ಳಲಾಗಿದ್ದು, ಅವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ.

ಸದ್ಯಕ್ಕೆ ಬಂಧಿತರಾಗಿರುವ ರೋಷನ್ ಬೇಗ್ ಅವರ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆ ನಡೆಸಲಾಗುತ್ತಿದೆ. ತನಿಖೆ ಒಂದು ಹಂತಕ್ಕೆ ಬಂದ ಬಳಿಕ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಐಎಂಎ ಹಗರಣದಲ್ಲಿ ಸುಮಾರು 2900 ಕೋಟಿ ರೂ.ಗಳ ಹೂಡಿಕೆಯಾಗಿದ್ದು, ಅದರಲ್ಲಿ 1500 ಕೋಟಿ ರೂ.ಗಳು ಲಾಭಾಂಶದ ರೂಪದಲ್ಲಿ ಹೂಡಿಕೆದಾರರಿಗೆ ವಾಪಸ್ ಸಂದಾಯವಾಗಿದೆ. ಇನ್ನು 1400 ಕೋಟಿ ರೂ.ಗಳನ್ನು ಠೇವಣಿದಾರರಿಗೆ ನೀಡಬೇಕಿದೆ. ಈವರೆಗೂ ಬಂತ ಆರೋಪಿಗಳ ಪೈಕಿ ಮನ್ಸೂರ್ ಆಲಿಖಾನ್, ಆಗಿನ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಕಾರಿ ದಿವಂಗತ ವಿಜಯ್‍ಶಂಕರ್, ಉಪವಿಭಾಗಾಧಿಕಾರಿ ನಾಗರಾಜ್, ಕಂದಾಯ ಇಲಾಖೆ ಅಧಿಕಾರಿ ಸೇರಿದಂತೆ ಇತರರ ಆಸ್ತಿಗಳ ಮುಟ್ಟುಗೋಲಿನಿಂದ 475 ಕೋಟಿ ರೂ.ಗಳ ಆಸ್ತಿಯನ್ನು ಕ್ರೋಢೀಕರಿಸಲಾಗಿದೆ.

ಈಗ ರೋಷನ್‍ಬೇಗ್ ಬಂಧನದಿಂದ ಅವರ ಆಸ್ತಿ ಕೂಡ ಜಪ್ತಿಯಾಗುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ಅಕಾರಿಗಳು ಮತ್ತು ಸಿಬ್ಬಂದಿಗಳ ಆಸ್ತಿ ಜಪ್ತಿಯಾಗುವ ನಿರೀಕ್ಷೆಗಳಿವೆ. ಒಂದು ವೇಳೆ ಈ ಎಲ್ಲರ ಆಸ್ತಿಗಳು ಜಪ್ತಿಯಾದರೆ ಒಟ್ಟು ಆಸ್ತಿಯ ಮೌಲ್ಯ ಸಾವಿರ ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಲಾಗಿದೆ.

ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ದೋಷಾರೋಪಣ ಪಟ್ಟಿ ಸಲ್ಲಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವುದಕ್ಕಿಂತಲೂ ಹೆಚ್ಚಿನದಾಗಿ ಹಣ ಕಳೆದುಕೊಂಡ ಠೇವಣಿದಾರರಿಗೆ ನ್ಯಾಯ ಕೊಡಿಸಲು ಆದ್ಯತೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಪಿಗಳ ಆಸ್ತಿಗಳನ್ನು ಜಪ್ತಿ ಮಾಡಿ ವಂಚನೆಗೊಳಗಾದವರಿಗೆ ನ್ಯಾಯ ಕೊಡಿಸುವುದು ಪ್ರಥಮ ಆದ್ಯತೆಯಾಗಿದೆ. ನಂತರ ಕ್ರಿಮಿನಲ್ ವಂಚನೆ ಪ್ರಕರಣದಲ್ಲಿ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಹಗರಣದಲ್ಲಿ ಭಾಗಿಯಾಗಿರುವ ಬಹುತೇಕ ಆರೋಪಿಗಳು ಸಿಬಿಐ ಕುಣಿಕೆಯಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲಿಯೂ ಅಬ್ಬರ, ಆಡಂಬರ ಮಾಡದೆ ಸದ್ದಿಲ್ಲದಂತೆ ತನಿಖೆ ನಡೆಸುತ್ತಿರುವ ಸಿಬಿಐ ಹೊಂಚು ಹಾಕಿ ಒಬ್ಬೊಬ್ಬರನ್ನೇ ಕಾನೂನಿನ ಉರುಳಿಗೆ ಎಳೆದು ತರುತ್ತಿದೆ.

ವಂಚನೆ ನಡೆದ ಸಂದರ್ಭದಲ್ಲಿ ಅಕಾರದಲ್ಲಿದ್ದ ಪ್ರಭಾವಿ ರಾಜಕಾರಣಿಗಳನ್ನು ಖೆಡ್ಡಾಕ್ಕೆ ಕೆಡವಲು ಭಾರೀ ಪ್ರಯತ್ನಗಳು ನಡೆದಿವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನ ಪ್ರಭಾವಿ ನಾಯಕರಿಗೆ ಐಎಂಎ ಹಗರಣ ಮಗ್ಗಲು ಮುಳ್ಳಾಗುವ ಸಾಧ್ಯತೆ ಇದೆ.

Facebook Comments