ಬಿಗ್ ನ್ಯೂಸ್ : ಪೊಲೀಸರಿಗೆ ಶರಣಾದ ಐಎಂಎ ಜುವೆಲರ್ಸ್ ನ 7 ಮಂದಿ ನಿರ್ದೇಶಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಜೂ. 12 : ಐಎಂಎ ಜುವೆಲರ್ಸ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ 7 ಮಂದಿ ನಿರ್ದೇಶಕರು ಪೊಲೀಸರ ಮುಂದೆ ಶರಣಾಗಿದ್ದಾರೆ.

ಬುಧವಾರ ಸಂಜೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರ ಮುಂದೆ ಐಎಂಎ ಕಂಪನಿಯ ಏಳು ನಿರ್ದೇಶಕರು ಶರಣಾಗಿದ್ದಾರೆ. ನಿಜಾಮುದ್ದೀನ್, ನಾಸಿರ್ ಹುಸೇನ್, ನವೀದ್ ಅಹ್ಮದ್, ಅರ್ಶದ್ ಖಾನ್, ವಾಸಿಮ್, ಅನ್ಸರ್ ಪಾಷಾ, ದಾದಾ ಪೀರ್ ಶರಣಾದ ಆರೋಪಿಗಳು.

ಸದ್ಯಕ್ಕೆ ನ್ಯಾಯಾಲಯ ಕಲಾಪ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕೋರಮಂಗಲದ ಎನ್​ಜಿವಿ ಬಡಾವಣೆಯಲ್ಲಿರುವ 4ನೇ ಎಸಿಎಂಎಂ ನ್ಯಾಯಾಧೀಶರ ಮನೆಗೆ ಆರೋಪಿಗಳನ್ನು ಹಾಜರುಪಡಿಸಿ ಬಳಿಕ ಪೊಲೀಸ್ ಕಸ್ಟಡಿ ಪಡೆದುಕೊಳ್ಳುವ ಸಾಧ್ಯತೆಯಿದೆ.

ಪೊಲೀಸರ ಎದುರು ಶರಣಾದ ಈ 7 ಮಂದಿ ವಂಚನೆಯ ಹಿಂದೆ ಹಾಗೂ ಮನ್ಸೂರ್​ ಖಾನ್​ ಕಾಣೆಯಾಗಿರುವ ಹಿಂದೆ ತಮ್ಮದೇನೂ ಪಾತ್ರವಿಲ್ಲ. ಯಾವುದೇ ರೀತಿಯ ತನಿಖೆಗೆ ಸಹಕರಿಸಲು ತಾವು ಸಿದ್ಧ ಎಂದು ಡಿಸಿಪಿ ಎದುರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಡಿಸಿಪಿ ರಾಹುಲ್ ಕುಮಾರ್ ಮಾತನಾಡಿ, ಐಎಂಎ ಪ್ರಕರಣ ಸಂಬಂಧ ಕಂಪನಿಯ 7 ನಿರ್ದೇಶಕರನ್ನು ಅರೆಸ್ಟ್ ಮಾಡಿದ್ದೇವೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ.ಜೊತೆಗೆ ಐಎಂಎ ಮಾಲೀಕರಿಗೆ ಸೇರಿದ 2 ಕಾರುಗಳನ್ನು ಜಪ್ತಿ ಮಾಡಿದ್ದೇವೆ ಎಂದರು.

ಹಗರಣದಲ್ಲಿ ಬಂಧಿತ ನಿರ್ದೇಶಕರ ಪಾತ್ರವೇನು? ಹೂಡಿಕೆದಾರರಿಗೆ ವಂಚಿಸಲು ಇವರ ಕೈವಾಡಗಳೇನು? ಸೇರಿದಂತೆ ಇನ್ನಿತರ ಮಾಹಿತಿಗಳ ಬಗ್ಗೆ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಆದರೆ, ಐಎಂಎ ಮಾಲೀಕ ಮನ್ಸೂರ್ ಖಾನ್ ನಾಪತ್ತೆಯಾಗಿದ್ದಾನೆ. ಇನ್ನು ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಟಿ ತಿನಿಖೆ ವಹಿಸಿದ್ದು, ಈಗಾಗಲೇ ತನಿಖಾ ತಂಡವು ಸಹ ರಚನೆಯಾಗಿದೆ.

ಬಹುಕೋಟಿ ವಂಚನೆ ಆರೋಪ ಪ್ರಕರಣ ಸಂಬಂಧ ರಾಜ್ಯ ಸರಕಾರವು ಬುಧವಾರ ಡಿಐಜಿ ಬಿ.ಆರ್.ರವಿಕಾಂತೇಗೌಡ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚನೆ ಮಾಡಿ, ಆದೇಶ ಹೊರಡಿಸಿದೆ.

ಪ್ರಸ್ತುತ ಅಗ್ನಿಶಾಮಕ ದಳದ ಡಿಐಜಿಯಾಗಿ ಸೇವೆ ಸಲ್ಲಿಸುತ್ತಿರುವ ಬಿ.ಆರ್.ರವಿಕಾಂತೇಗೌಡ, ಅಪರಾಧ ವಿಭಾಗದ ಡಿಸಿಪಿ ಎಸ್.ಗಿರೀಶ್, ಬೆಂಗಳೂರು ಸಿಟಿ ಸಿಸಿಬಿ ವಿಭಾಗ ಎಸಿಪಿ ಬಾಲರಾಜು, ಬೆಂಗಳೂರು ಸಿಐಡಿ ವಿಭಾಗದ ಡಿವೈಎಸ್ಪಿ ಕೆ.ರವಿಶಂಕರ್, ರಾಜ್ಯ ಗುಪ್ತಚರ ದಳದ ಡಿವೈಎಸ್ಪಿ ರಾಜಾ ಇಮಾಮ್ ಖಾಸಿಮ್.

ಕರ್ನಾಟಕ ಲೋಕಾಯುಕ್ತ ವಿಭಾಗದ ಡಿವೈಎಸ್ಪಿ ಅಬ್ದುಲ್ ಖಾದರ್, ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಸಿ.ಆರ್.ಗೀತಾ, ಬೆಂಗಳೂರು ಬಿಡಿಎ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಎಲ್.ವೈ.ರಾಜೇಶ್, ಸಿಸಿಬಿ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಅಂಜನ್ ಕುಮಾರ್, ಎಸ್ಸಿಆರ್‌ಬಿಯ ಇನ್‌ಸ್ಪೆಕ್ಟರ್ ಎನ್.ತನ್ವೀರ್ ಅಹ್ಮದ್ ಹಾಗೂ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಕೆ.ಶೇಖರ್ ಸಿಟ್ ತನಿಖಾ ತಂಡದಲ್ಲಿದ್ದಾರೆ.

# ಸಣ್ಣ ಉದ್ಯಮಗಳು ಬಲಿಪಶು :
ಐಎಂಎ ಜ್ಯುವೆಲ್ಲರಿ ಮಹಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇ.60 ರಷ್ಟು ದೂರುದಾರರು ಮಹಿಳೆಯರೇ ಆಗಿದ್ದಾರೆ ಎನ್ನುವ ವಿಚಾರ ಗೊತ್ತಾಗಿದೆ. ಇವರ ನಂತರದ ಸ್ಥಾನದಲ್ಲಿ ನಿವೃತ್ತ ನೌಕರರು, ಸಣ್ಣ ಉದ್ಯಮಿಗಳು ಹಾಗೂ ನಿರುದ್ಯೋಗಿಗಳೇ ಬಲಿಪಶುಗಳಾಗಿದ್ದಾರೆ.

ಕಡಿಮೆ ಹಣ ಹೂಡಿಕೆ ಮಾಡಿ, ಹೆಚ್ಚು ಬಡ್ಡಿ ಪಡೆಯಿರಿ…ಹೀಗೆ ಅಂಗೈಯಲ್ಲಿ ಆಕಾಶ ತೋರಿಸಿರುವ ಐಎಂಎ ಜ್ಯುವೆಲ್ಲರಿ ಶಾಪ್ ವಂಚನೆ ಪ್ರಕರಣದಲ್ಲಿ ಹೆಚ್ಚು ಹಣ ಕಳೆದುಕೊಂಡಿರುವವರು ಮಹಿಳೆಯರೇ ಎಂಬ ವಿಚಾರ ಇದೀಗ ಬಯಲಾಗಿದೆ.

ಐಎಂಎ ಜ್ಯುವೆಲ್ಲರಿ ಕಚೇರಿ ಎದುರುಗಡೆ ಸೇರಿದ ಮಹಿಳೆಯರು.ಕಂಪನಿ ವಿರುದ್ದ ದೂರು ನೀಡುತ್ತಿರುವವರಲ್ಲಿ ಶೇ.60ಕ್ಕೂ ಹೆಚ್ಚಿನ ಪಾಲು ಮಹಿಳೆಯರದ್ದೇ ಆಗಿದೆ! ನಂತರದ ಸ್ಥಾನದಲ್ಲಿ ನಿವೃತ್ತ ನೌಕರರು, ಇನ್ನುಳಿದಂತೆ ಸಣ್ಣ ಉದ್ಯಮಿಗಳು ಹಾಗೂ ನಿರುದ್ಯೋಗಿಗಳೇ ವಂಚಕರ ಬಲೆಗೆ ಬಿದ್ದಿರುವ ಅಂಶ ಗೊತ್ತಾಗಿದೆ.

ಕಡಿಮೆ ಅವಧಿಗೆ ಹೆಚ್ಚು ಲಾಭಾಂಶದ ಆಸೆಗೆ ಕಟ್ಟುಬಿದ್ದ ಜನರು ಕಷ್ಟಪಟ್ಟು ದುಡಿದ ದುಡ್ಡನ್ನು ಐಎಂಎನಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ.ಐಎಂಎನಲ್ಲಿ ಜನ ಕೇವಲ ಹಣ ಮಾತ್ರ ಹೂಡಿಕೆ ಮಾಡಿಲ್ಲ. ಚಿನ್ನಾಭರಣಗಳನ್ನೂ ಅಡವಿಟ್ಟು ಸಾಕಷ್ಟು ಜನ ಸಾಲ ಪಡೆದಿದ್ದರು ಎಂಬ ವಿಚಾರವೂ ತಿಳಿದುಬಂದಿದೆ.

ಕಂಪನಿ ವಿರುದ್ದ ಇದುವರೆಗೆ ಒಟ್ಟು 14 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಅವುಗಳಲ್ಲಿ 300 ರಿಂದ 400 ಜನ ಚಿನ್ನಾಭರಣಗಳನ್ನು ಗಿರವಿ ಇಟ್ಟವರಿದ್ದಾರೆ. ಅಡವಿಟ್ಟ ಚಿನ್ನ ಲಾಕರ್​ನಲ್ಲಿದ್ದು ದೂರುದಾರರು ಶೇ 4 ರಿಂದ 5% ರಷ್ಟು ಬಡ್ಡಿ ಕಟ್ಟುತ್ತಿದ್ದರು ಎನ್ನಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin