ಸಾಲ ಮಾಡೋದ್ರಲ್ಲಿ ಹೊಸ ದಾಖಲೆ ಬರೆದ ಇಮ್ರಾನ್‍ಖಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್, ಅ.9-ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್‍ಖಾನ್ ನೇತೃತ್ವದ ಸರ್ಕಾರ ಸಾಲ ಎತ್ತುವಳಿಯಲ್ಲಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ಅಧಿಕಾರಕ್ಕೆ ಬಂದ ಕೇವಲ ಒಂದು ವರ್ಷದಲ್ಲಿ ಇಮ್ರಾನ್‍ಖಾನ್ 7509 ಶತಕೋಟಿ ರೂ.(ಪಾಕಿಸ್ತಾನ ಕರೆನ್ಸಿ) ಸಾಲ ಪಡೆದಿದ್ದಾರೆ.

ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ ಅವಧಿಯಲ್ಲಿ ಭಾರೀ ಮೊತ್ತದ ಸಾಲ ಪಡೆದ ನಿದರ್ಶನಗಳಿಲ್ಲ. ಈ ವಿಷಯದಲ್ಲಿ ಇಮ್ರಾನ್‍ಖಾನ್ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (ಎಸ್‍ಬಿಪಿ) ಪ್ರಧಾನಮಂತ್ರಿಯವರ ಕಾರ್ಯಾಲಯಕ್ಕೆ ನೀಡಿರುವ ಅಂಕಿಅಂಶಗಳಿಂದ ಪಾಕಿಸ್ತಾನದ ಬೆಟ್ಟದಷ್ಟು ಸಾಲದ ವಿವರಗಳು ಬೆಳಕಿಗೆ ಬಂದಿವೆ.

ಕಳೆದ ವರ್ಷ ಆಗಸ್ಟ್‍ನಿಂದ ಈ ವರ್ಷದ ಆಗಸ್ಟ್ ವರೆಗೆ ಇಮ್ರಾನ್ ಸರ್ಕಾರ 7509 ಶತಕೋಟಿ ರೂ. ಸಾಲ ಪಡೆದಿದೆ. ಇದರಲ್ಲಿ 2,804 ಶತಕೋಟಿ ರೂ.ಗಳು ವಿದೇಶಿ ಮೂಲದ್ದು. ಉಳಿದ 4,705 ದೇಶೀಯ ಮೂಲಗಳಿಂದ ಪಡೆದ ಪತ್ತು. ಇದರೊಂದಿಗೆ ಪಾಕಿಸ್ತಾನದ ಒಟ್ಟು ಸಾಲದ ಮೊತ್ತ 32,240 ಶತಕೋಟಿ ರೂ.ಗಳು. ಕಳೆದ ವರ್ಷ ಆಗಸ್ಟ್‍ನಲ್ಲಿ ದೇಶದ ಸಾಲದ ಮೊತ್ತ 24,732 ಶತಕೋಟಿ ರೂ.ಗಳಾಗಿತ್ತು.

ಪಾಕಿಸ್ತಾನ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ಹಣಕಾಸಿಗಾಗಿ ಹೊರ ದೇಶಗಳನ್ನು ಆಶ್ರಯಿಸುವ ದುಸ್ಥಿತಿ ತಲುಪಿದೆ. ಈ ವರ್ಷ ಪಾಕಿಸ್ತಾನ 960 ಶತಕೋಟಿ ರೂ. ಹಣವನ್ನು ತೆರಿಗೆ ರೂಪದಲ್ಲಿ ಸಂಗ್ರಹಿಸಿದೆಯಾದರೂ ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.

Facebook Comments