ಹೊಟೇಲ್, ಪ್ರವಾಸೋದ್ಯಮ ಇತರ ಅಗತ್ಯ ಕ್ಷೇತ್ರಗಳ ಸಾಲ ಮರುಪಾವತಿ ಅವಧಿ ಮತ್ತಷ್ಟು ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.1- ಡೆಡ್ಲಿ ಕೊರೊನಾ ವೈರಸ್ ಹಾವಳಿಯಿಂದ ಭಾರೀ ಸಂಕಷ್ಟಕ್ಕೆ ಸಿಲುಕಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಹೊಟೇಲ್, ಪ್ರವಾಸೋದ್ಯಮ ಸೇರಿದಂತೆ ಆತಿಥ್ಯ ವಲಯ ಮತ್ತು ಇತರ ಅಗತ್ಯ ಕ್ಷೇತ್ರಗಳ ಸಾಲ ಮರುಪಾವತಿ ಅವಧಿಯನ್ನು ಮತ್ತಷ್ಟು ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ನಿಟ್ಟಿನಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಜತೆ ಮಹತ್ವದ ಸಮಾಲೋಚನೆ ನಡೆಸಿ ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಕೊರೊನಾ ಪಿಡುಗಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎರಡನೆ ಬಾರಿಗೆ ವಿಸ್ತರಿಸಿರುವ ಸಾಲ ಮರುಪಾವತಿ ಅವಧಿ ಆಗಸ್ಟ್ 31ರ ವರೆಗೆ ಜಾರಿಯಲ್ಲಿದೆ. ಆದರೆ, ಹೊಟೇಲ್, ಪ್ರವಾಸೋದ್ಯಮ ಸೇರಿದಂತೆ ಆತಿಥ್ಯ ವಲಯ ಈ ಪಿಡುಗಿನಿಂದ ಭಾರೀ ಸಂಕಷ್ಟಕ್ಕೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ವಿತ್ತ ಸಚಿವರು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಆತಿಥ್ಯ ವಲಯ ಮತ್ತು ಇತರ ಪ್ರಮುಖ ಕ್ಷೇತ್ರಗಳಿಗೆ ಮತ್ತೊಮ್ಮೆ ಸಾಲದ ಹೊರೆಯನ್ನು ಇನ್ನೂ ಕೆಲಕಾಲ ಇಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಹೊಟೇಲ್, ಪ್ರವಾಸೋದ್ಯಮ ಸೇರಿದಂತೆ ಆತಿಥ್ಯ ವಲಯ ಕೊರೊನಾ ಹಾವಳಿಯಿಂದ ಶೇ.90ರಷ್ಟು ತೀವ್ರ ಹಾನಿಗೆ ಒಳಗಾಗಿದ್ದು, 45 ದಶಲಕ್ಷ ಜನರ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಕಸಿದುಕೊಂಡಿದ್ದು ತೀವ್ರ ಸಂಕಷ್ಟಕ್ಕೆ ಒಳಗಾಗಿದೆ.

ಭಾರತ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್‍ಸಿಸಿಐ) ನಿಯೋಗ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಆತಿಥ್ಯ ವಲಯ, ಕೈಗಾರಿಕೆ ಸೇರಿದಂತೆ ಕೆಲವು ಪ್ರಮುಖ ಕ್ಷೇತ್ರಗಳು ಈಗಲೂ ತೀವ್ರ ಆರ್ಥಿಕ ಸಂಕಷ್ಟದಲ್ಲೇ ಮುಂದುವರಿದಿದ್ದು, ಇನ್ನೂ ಕೆಲಕಾಲ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕೆಂದು ಮನವಿ ಮಾಡಿತ್ತು.

ಈ ಮನವಿಗೆ ಸ್ಪಂದಿಸಿದ ವಿತ್ತ ಸಚಿವರು ಈ ಸಂಬಂಧ ತಾವು ಆರ್‍ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಕೆಲವೊಂದು ಸೂಚನೆಗಳನ್ನು ನೀಡಿರುವುದಾಗಿ ತಿಳಿಸಿದರು.

ಅದೇ ರೀತಿ ಕೈಗಾರಿಕೆಗಳಿಗಾಗಿ ಸಾಲ ಪುನರ್‍ರಚನೆ ಯೋಜನೆ ಬಗ್ಗೆಯೂ ತಾವು ಗಹನ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಬ್ಯಾಂಕ್‍ಗಳ ವಿರೋಧ: ಆದರೆ, ಸಾಲ ಮರುಪಾವತಿ ಮತ್ತು ಇಎಂಐ (ಮಾಸಿಕ ಸಮಾನ ಕಂತು) ಪಾವತಿ ಅವಧಿಯನ್ನು ಮತ್ತೆ ವಿಸ್ತರಿಸುವುದಕ್ಕೆ ಬ್ಯಾಂಕ್‍ಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿರುವುದರಿಂದ ಇಎಂಐ ಪಾವತಿ ಮಾಡುವ ಸಾಮಥ್ರ್ಯ ಉಳ್ಳವರು ಸಹ ಇದರ ದುರ್ಲಾಭ ಪಡೆಯುತ್ತಿದ್ದಾರೆ. ಇದರಿಂದ ಬ್ಯಾಂಕ್‍ಗಳಿಗೆ ಕೋಟ್ಯಂತರ ರೂ. ಆರ್ಥಿಕ ಹೊರೆಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮತ್ತೆ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬಾರದು ಎಂದು ಈಗಾಗಲೇ ಆರ್‍ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರಿಗೆ ಮನವಿ ಮಾಡಿದ್ದಾರೆ.

ಈ ಎಲ್ಲ ಅಂಶಗಳನ್ನೂ ಪರಿಗಣಿಸಿರುವ ಕೇಂದ್ರ ಹಣಕಾಸು ಸಚಿವಾಲಯವು ಆತಿಥ್ಯ ವಲಯ ಮತ್ತು ಇತರ ಆದ್ಯತಾ ಕ್ಷೇತ್ರಗಳಿಗೆ ಒಳಪಟ್ಟು ಕೆಲವು ನಿಯಮ ಷರತ್ತುಗಳೊಂದಿಗೆ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸುವ ಬಗ್ಗೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Facebook Comments

Sri Raghav

Admin