ದೇಶದ 40 ಕಡೆ ಐಟಿ ದಾಳಿ, ಬರೋಬ್ಬರಿ 2000 ಕೋಟಿ ಅಕ್ರಮ ಹಣ ಪತ್ತೆ…!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ ಹೈದರಾಬಾದ್, ಫೆ.14- ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧಿಕಾರಿಗಳು ರಾಜಧಾನಿ ದೆಹಲಿ, ಪುಣೆ, ಹೈದರಾಬಾದ್, ತೆಲಂಗಾಣ ಸೇರಿದಂತೆ 40 ಕಡೆ ಸತತ ದಾಳಿ ನಡೆಸಿ ಭಾರೀ ಪ್ರಮಾಣದ ತೆರಿಗೆ ವಂಚನೆ ಮತ್ತು ಇತರ ಅಕ್ರಮ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಈ ದಾಳಿ ವೇಳೆ ಸೂಕ್ತ ದಾಖಲೆ ಪತ್ರಗಳಿಲ್ಲದ 2 ಸಾವಿರ ಕೋಟಿ ರೂ. ಅಕ್ರಮ ಹಣ ವಹಿವಾಟು ಪತ್ತೆಯಾಗಿದ್ದು, ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೆಹಲಿ, ಪುಣೆ, ಹೈದರಾಬಾದ್, ತೆಲಂಗಾಣ, ವಿಶಾಖಪಟ್ಟಣ, ವಿಜಯವಾಡ, ಬೊಯನಪಲ್ಲಿ ಸೇರಿದಂತೆ ಒಟ್ಟು 40 ಕಡೆ ದಾಳಿ ನಡೆಸಲಾಗಿದ್ದು, ಗುತ್ತಿಗೆದಾರರು, ಉಪಗುತ್ತಿಗೆದಾರರು, ಉದ್ಯಮಿಗಳು ಮತ್ತು ಇತರ ಪ್ರಭಾವಿ ವ್ಯಕ್ತಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, 2 ಸಾವಿರ ಕೋಟಿ ರೂ.ಗೂ ಅಧಿಕ ಪ್ರಮಾಣದ ಅಕ್ರಮ ಹಣ ಪತ್ತೆಯಾಗಿದೆ. ಸಿಬಿಟಿಡಿ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. 40 ಕಡೆ ನಡೆದ ದಾಳಿಯಲ್ಲಿ ಮುಖ್ಯವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಪ್ರಮಾಣದ ಅಕ್ರಮಗಳು ಮತ್ತು ತೆರಿಗೆ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ಅವರ ಮಾಜಿ ಆಪ್ತ ಕಾರ್ಯದರ್ಶಿ ಪೆಂಡಿಯಾಲ ಶ್ರೀನಿವಾಸ್ ಅವರ ವಿಜಯವಾಡದಲ್ಲಿರುವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದಾಗ ಕೋಟ್ಯಂತರ ರೂ.ಗಳ ಅಕ್ರಮವನ್ನು ಪತ್ತೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಲ್ಲದೆ, ಪಿಡಿಪಿ ಅಧ್ಯಕ್ಷ ಶ್ರೀನಿವಾಸುಲು, ತೆಲುಗು ದೇಶಂ ಪಾರ್ಟಿ ಪಕ್ಷದ ನಾಯಕ ಶ್ರೀನಿವಾಸರೆಡ್ಡಿ ಮತ್ತು ಮುಖಂಡ ವಿನೋದ್‍ಕುಮಾರ್ ಅವರ ಪುತ್ರ ಬೋಯನಪಲ್ಲಿ ಶ್ರೀನಿವಾಸರಾವ್ ಅವರ ಮನೆ ಮತ್ತು ಕಚೇರಿಗಳಲ್ಲೂ ಭಾರೀ ಪ್ರಮಾಣದ ಅಕ್ರಮ ಹಣ ವಂಚನೆ ಪ್ರಕರಣ ಪತ್ತೆಯಾಗಿದೆ. ಈ ತೆರಿಗೆ ದಾಳಿಯಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜಕೀಯ ಮತ್ತು ಅಧಿಕಾರಿ ವರ್ಗದಲ್ಲಿ ಭಾರೀ ತಲ್ಲಣ ಉಂಟಾಗಿದೆ.

ಪ್ರತಿಷ್ಠಿತ ಗುತ್ತಿಗೆದಾರರು, ಉಪಗುತ್ತಿಗೆದಾರರು, ಉದ್ಯಮಿಗಳು, ಮೂಲಸೌಕರ್ಯಾಭಿವೃದ್ಧಿ ಪ್ರವರ್ತಕರು ಮತ್ತು ಉದ್ಯಮ ಕ್ಷೇತ್ರದ ಪ್ರಭಾವಿ ಮತ್ತು ಮನೆಗಳ ಮೇಲೆ ದಾಳಿ ನಡೆದಿದೆ.
ಕಳೆದ 5 ದಿನಗಳಿಂದ ಈ ದಾಳಿ ಮುಂದುವರೆ ದಿದ್ದು, ಮತ್ತಷ್ಟು ಪ್ರಭಾವಿ ವ್ಯಕ್ತಿಗಳು ತೆರಿಗೆ ಬಲೆಗೆ ಬೀಳುವ ನಿರೀಕ್ಷೆ ಇದೆ. ಇದರಲ್ಲಿ ಕೆಲವು ಹಿರಿಯ ರಾಜಕಾರಣಿಗಳು ಮತ್ತು ಉನ್ನತಾಧಿಕಾರಿಗಳ ಹೆಸರು ಸಹ ಕೇಳಿ ಬಂದಿದ್ದು, ಅವರ ಮನೆಗಳ ಮೇಲೂ ಇಂದು ಸಂಜೆ ಅಥವಾ ನಾಳೆ ದಾಳಿ ನಡೆಯುವ ಸಾಧ್ಯತೆ ಇದೆ.

Facebook Comments