ಮಕ್ಕಳ ರಕ್ಷಣೆಗೆ ತಂಬಾಕು ತೆರಿಗೆ ಹೆಚ್ಚಿಸಲು ಜಿಎಸ್‌ಟಿ ಮಂಡಳಿಗೆ ಸಿಎಫ್‌ಟಿಎಫ್‌ಕೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ. 15,  ಜಿಎಸ್‌ಟಿ ಮಂಡಳಿಯ 45ನೇ ಸಭೆ ಹಿನ್ನೆಲೆಯಲ್ಲಿ ಕನ್ಸೋರ್ಟಿಯಂ ಫಾರ್ ಟೊಬ್ಯಾಕೋ ಫ್ರೀ ಕರ್ನಾಟಕ (ಸಿಎಫ್‌ಟಿಎಫ್‌ಕೆ) ಮತ್ತು ತಂಬಾಕು ನಿಯಂತ್ರಣಕ್ಕಾಗಿ ದುಡಿಯುತ್ತಿರುವ ಸಂಸ್ಥೆಗಳು ಎಲ್ಲ ತಂಬಾಕು ಉತ್ಪನ್ನಗಳ ಮೇಲಿರುವ ಪರಿಹಾರ ಸೆಸ್ ಹೆಚ್ಚಿಸಿ ದುರ್ಬಲ ವರ್ಗದವರಿಗೆ, ವಿಶೇಷವಾಗಿ ಮಕ್ಕಳಿಗೆ, ತಂಬಾಕು ಉತ್ಪನ್ನಗಳು ಕೈಗೆಟುಕದಂತೆ ಮಾಡಬೇಕು ಎಂದು ಜಿಎಸ್‌ಟಿ ಮಂಡಳಿಯನ್ನು ಒತ್ತಾಯಿಸಿವೆ. ಕನ್ಸೋರ್ಟಿಯಂ ಫಾರ್ ಟೊಬ್ಯಾಕೋ ಫ್ರೀ ಕರ್ನಾಟಕ ಪ್ರತಿನಿಧಿಗಳು ವಾಣಿಜ್ಯ ತೆರಿಗೆಗಳ ಆಯುಕ್ತೆ ಶಿಖಾ ಮತ್ತು ಮುಖ್ಯಮಂತ್ರಿಗಳ ಕಾರ್ಯದರ್ಶಿ ಪೊನ್ನುರಾಜ್ ಅವರನ್ನು ಭೇಟಿ ಮಾಡಿ ತಂಬಾಕು ತೆರಿಗೆ ಹೆಚ್ಚಳ ಮತ್ತು ತಂಬಾಕು ಸೇವನೆಯನ್ನು ತಗ್ಗಿಸಲು ಇರುವ ತುರ್ತು, ಹಾಗು ಇದರಿಂದ ಸರ್ಕಾರ ಹೇಗೆ ಆದಾಯ ಕ್ರೋಡೀಕರಿಸಿ ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಎದುರಿಸಬಹುದು ಎಂಬ ಕುರಿತು ಚರ್ಚೆ ನಡೆಸಿದ್ದಾರೆ.

ಈ ವಿಚಾರವನ್ನು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಲು ಬೆಂಬಲ ಕೋರಿ ಸಿಎಫ್‌ಟಿಎಫ್‌ಕೆ ಮುಖ್ಯಮಂತ್ರಿ ಶ್ರೀ. ಬಸವರಾಜ ಬೊಮ್ಮಾಯಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ. ಐ ಎಸ್ ಎನ್ ಪ್ರಸಾದ್ ಅವರಿಗೂ ಪತ್ರ ಬರೆದಿದೆ. ಸೆಪ್ಟೆಂಬರ್ 17, 2021 ರಂದು ಲಕ್ನೋ ನಲ್ಲಿ ನಿಗದಿಯಾಗಿರುವ ಜಿಎಸ್‌ಟಿ ಮಂಡಳಿ ಸಭೆ ಭಾರತಕ್ಕೆ ಕೋವಿಡ್ ಅಪ್ಪಳಿಸಿದ ನಂತರ ನಡೆಯುತ್ತಿರುವ ಮೊದಲ ಭೌತಿಕ ಸಭೆಯಾಗಿದ್ದು, ಮಂಡಳಿ ‘ಪರಿಹಾರ ಸೆಸ್’ ಕುರಿತು ಚರ್ಚೆ ನಡೆಸಲಿದೆ ಎಂದು ಹೇಳಲಾಗಿದೆ.

ಧೂಮಪಾನ ಮತ್ತು ಇತರೆ ತಂಬಾಕು ಸೇವನೆಯನ್ನು ತಗ್ಗಿಸಲು ಇರುವ ಪರಿಣಾಮಕಾರಿ ನೀತಿಗಳಲ್ಲಿ ತಂಬಾಕು ತೆರಿಗೆ ಹೆಚ್ಚಳ ಕೂಡ ಒಂದಾಗಿದ್ದು, ಮಕ್ಕಳ ವಿಚಾರದಲ್ಲಿ ಇದು ವಿಶೇಷವಾಗಿ ಅನ್ವಯವಾಗುತ್ತದೆ. ಇತ್ತೀಚಿನ ಗ್ಲೋಬಲ್ ಯೂಥ್ ಟೊಬ್ಯಾಕೊ ಸರ್ವೆ (GYTS) ಪ್ರಕಾರ ಶೇ. 38 ರಷ್ಟು ಸಿಗರೇಟ್, ಶೇ. 47 ರಷ್ಟು ಬೀಡಿ, ಮತ್ತು ಶೇ. 52 ರಷ್ಟು ಹೊಗೆರಹಿತ ತಂಬಾಕು ಬಳಕೆದಾರರು ತಮ್ಮ ಹತ್ತನೇ ವರ್ಷದ ಹುಟ್ಟುಹಬ್ಬಕ್ಕೂ ಮೊದಲೇ ತಂಬಾಕು ಬಳಕೆಯ ಚಟಕ್ಕೆ ಬಿದ್ದಿದ್ದರು.

ಜುಲೈ 2017 ರಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗಿನಿಂದ ತಂಬಾಕು ತೆರಿಗೆಗಳಲ್ಲಿ ಹೇಳಿಕೊಳ್ಳುವಂತ ಏರಿಕೆಯಾಗಿಲ್ಲ. ವರ್ಷಗಳು ಕಳೆದಂತೆ ಎಲ್ಲ ತಂಬಾಕು ಉತ್ಪನ್ನಗಳು ಹೆಚ್ಚು ಕೈಗೆಟುಕುವಂತಾಗಿವೆ. ಸಿಗರೇಟ್‌ಗಳಿಗೆ ಕೇವಲ 52.7%, ಬೀಡಿಗಳಿಗೆ 22% ಮತ್ತು ಹೊಗೆರಹಿತ ತಂಬಾಕು ಉತ್ಪನ್ನಗಳಿಗೆ 63.8%ರಷ್ಟು ಒಟ್ಟು ತೆರಿಗೆ ಹೊರೆ (ಅಂತಿಮ ಚಿಲ್ಲರೆ ಬೆಲೆಯಲ್ಲಿ (ಎಂಆರ್ ಪಿ) ತೆರಿಗೆಯ ಭಾಗ) ವಿಧಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಅವುಗಳ ಚಿಲ್ಲರೆ ಬೆಲೆಯ ಕನಿಷ್ಠ ಶೇ. 75% ರಷ್ಟು ತೆರಿಗೆ ಹೊರೆ ವಿಧಿಸಬೇಕೆಂಬ ಶಿಫಾರಸ್ಸಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ತೆರಿಗೆ ಹೆಚ್ಚಳದ ಮೂಲಕ ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಿಸುವುದು ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಇರುವ ಅತ್ಯಂತ ಪರಿಣಾಮಕಾರಿ ನೀತಿ. ದುಬಾರಿ ತಂಬಾಕು ಬೆಲೆ ಕೊಳ್ಳುವ ಶಕ್ತಿಯನ್ನು ಕುಗ್ಗಿಸಿ, ತಂಬಾಕನ್ನು ತ್ಯಜಿಸಲು ಪ್ರೋತ್ಸಾಹಿಸುತ್ತದೆ ಮತ್ತು ವ್ಯಸನಿಗಳಲ್ಲಿ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ತಂಬಾಕು ಬಳಕೆದಾರರಲ್ಲದವರು ಅದರ ಬಳಕೆಯನ್ನು ಪ್ರಾರಂಭಿಸುವುದನ್ನು ತಡೆಗಟ್ಟುತ್ತದೆ.

“ಬೀಡಿ ಅತ್ಯಂತ ವ್ಯಾಪಕವಾಗಿ ಬಳಕೆಯಲ್ಲಿರುವ ಮತ್ತು ಅಗ್ಗದ ತಂಬಾಕು ಪದಾರ್ಥವಾಗಿದೆ. ತಂಬಾಕು ಬಳಕೆದಾರರಲ್ಲದವರು ತಂಬಾಕಿನ ಚಟಕ್ಕೆ ಬೀಳದಿರಲು, ಈಗಾಗಲೇ ಅದರ ಚಟಕ್ಕೆ ದಾಸರಾಗಿರುವವರನ್ನು ತಂಬಾಕು ತ್ಯಜಿಸಲು ಉತ್ತೇಜಿಸಲು ಮತ್ತು ಅರೋಗ್ಯ ವ್ಯವಸ್ಥೆ ಪೂರೈಕೆಗೆ ಅಗತ್ಯವಿರುವ ಹಣಕಾಸನ್ನು ಹೊಂದಿಸಲು ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ಹೇರಲು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುತ್ತದೆ. ಇಷ್ಟು ವರ್ಷಗಳ ಕಾಲ ಪರಿಹಾರ ಸೆಸ್ ವ್ಯಾಪ್ತಿಯಿಂದ ಹೊರಗುಳಿದಿದ್ದ ಬೀಡಿಯ ಮೇಲೆ ಪರಿಹಾರ ಸೆಸ್ ವಿಧಿಸಬೇಕು.

ಎಲ್ಲ ತಂಬಾಕು ಉತ್ಪನ್ನಗಳ (ಬೀಡಿ, ಸಿಗರೇಟ್ ಮತ್ತು ಜಗಿಯುವ ತಂಬಾಕು) ಮೇಲೆ ಸೆಸ್ ಹೆಚ್ಚಿಸುವುದರಿಂದ ಅವುಗಳನ್ನು ಕೊಂಡುಕೊಳ್ಳುವ ಶಕ್ತಿ ಕುಗ್ಗುತ್ತದೆ ಮತ್ತು ಇದರಿಂದ ತಂಬಾಕು ಎಂಬ ಹಾನಿಕಾರಕ ಪದಾರ್ಥದ ಸೇವನೆಯೇ ಕಡಿಮೆಯಾಗಿ ಸಾರ್ವಜನಿಕರ, ವಿಶೇಷವಾಗಿ ಯುವಜನರ ಮತ್ತು ದುರ್ಬಲರ ಅರೋಗ್ಯ ವೃದ್ಧಿಯಾಗಬಹುದು ಎಂಬ ಆಶಾಭಾವನೆಯಿದೆ. ಅರೋಗ್ಯ ಪೂರೈಕೆಗೆ ಅಗತ್ಯ ಸಂಪನ್ಮೂಲಗಳ ಕೊರತೆಯಿರುವ ವ್ಯವಸ್ಥೆಗಳಲ್ಲಿ ಸಾರ್ವಜನಿಕ ಹಣಕಾಸನ್ನು ವರ್ಧಿಸಲು ಹಾನಿಕಾರಕ ಮತ್ತು ಐಷಾರಾಮಿ ವಸ್ತುಗಳ ಮೇಲೆ ತೆರಿಗೆ ವಿಧಿಸುವುದು ಹಲವು ತಂತ್ರಗಳಲ್ಲಿ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದೆ,” ಎನ್ನುತ್ತಾರೆ ಬೆಂಗಳೂರು ಮೂಲದ ಸಾರ್ವಜನಿಕ ಅರೋಗ್ಯ ಸಂಶೋಧಕ ಮತ್ತು ಪ್ರತಿಪಾದಕ ಡಾ. ಉಪೇಂದ್ರ ಭೋಜಾನಿ.

“ಸಾಕಷ್ಟು ಜನ, ವಿಶೇಷವಾಗಿ ದುರ್ಬಲ ವರ್ಗಗಳಿಗೆ ಸೇರಿದವರು ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕ್ಯಾನ್ಸರ್ ಚಿಕಿತ್ಸೆಯ ಮೇಲೆ ಸುರಿಯುವುದನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಪ್ರತಿ ಮೂರನೇ ವ್ಯಕ್ತಿಯಲ್ಲಿ ಒಬ್ಬರು ತಂಬಾಕನ್ನು ಯಾವುದಾದರೊಂದು ರೂಪದಲ್ಲಿ ಬಳಸುತ್ತಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಈ ಪ್ರವೃತ್ತಿ ಹೀಗೆ ಮುಂದುವರೆದಲ್ಲಿ, ಪ್ರತಿ ಮೂರನೇ ವ್ಯಕ್ತಿಯಲ್ಲಿ ಒಬ್ಬರಿಗೆ ಸಾಂಕ್ರಾಮಿಕವಲ್ಲದ ಯಾವುದಾದರೊಂದು ಖಾಯಿಲೆ ತಗುಲುವ ಸಾಧ್ಯತೆಯಿದೆ. ತಂಬಾಕು ತೆರಿಗೆಯನ್ನು ಹೆಚ್ಚಿಸುವ ಮೂಲಕ, ನಾವು ಈ ಅಪಾಯಕಾರಿ ಪ್ರವೃತ್ತಿಯನ್ನು ತಡೆದು ಲಕ್ಷಾಂತರ ಜನರ ಭವಿಷ್ಯವನ್ನು ರಕ್ಷಿಸಬಹುದು. ಈಗಾಗಲೇ ನಮ್ಮನ್ನು ಕಾಡುತ್ತಿರುವ ಸಾಂಕ್ರಾಮಿಕವು ಆರೋಗ್ಯವೇ ನಮ್ಮ ಮೊದಲ ಆದ್ಯತೆ ಎಂಬ ಪಾಠವನ್ನು ಹೇಳಿದೆ. ಈ ದಿಸೆಯಲ್ಲಿ, ತಂಬಾಕು ತೆರಿಗೆಯನ್ನು ಹೆಚ್ಚಿಸುವುದು ಪ್ರಮುಖ ಹೆಜ್ಜೆಯಾಗಲಿದೆ,” ಎಂದು ಹೇಳುತ್ತಾರೆ ಪ್ರಸಿದ್ಧ ಕ್ಯಾನ್ಸರ್ ತಜ್ಞ ಮತ್ತು ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ, ಕರ್ನಾಟಕ ಸರ್ಕಾರ, ಸದಸ್ಯರಾದ ಡಾ. ವಿಶಾಲ್ ರಾವ್.

“ನಾವು ಅಧಿಕಾರಿಗಳೊಂದಿಗೆ ಚರ್ಚಿಸಿ ಮಕ್ಕಳನ್ನು ರಕ್ಷಿಸಲು ತಂಬಾಕು ತೆರಿಗೆ ಹೆಚ್ಚಳ ಹೇಗೆ ಅನಿವಾರ್ಯ ಎಂಬುದನ್ನು ತಿಳಿಸಿದ್ದೇವೆ. ಮುಖ್ಯಮಂತ್ರಿ ಶ್ರೀ. ಬಸವರಾಜ ಬೊಮ್ಮಾಯಿ ಅವರು ಇಷ್ಟು ವರ್ಷ ಜಿಎಸ್‌ಟಿ ಮಂಡಳಿಯ ಸಭೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರು ಮತ್ತು ಐಷಾರಾಮಿ ವಸ್ತುಗಳು, ತಂಬಾಕು ಮತ್ತು ಪಾನ್ ಮಸಾಲಾ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಸಭೆಯ ಮುಂದಿಟ್ಟಿದ್ದರು. ಈ ವಿಚಾರವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದು ಮಕ್ಕಳನ್ನು ತಂಬಾಕು ಚಟದಿಂದ ರಕ್ಷಿಸುತ್ತಾರೆ ಎಂಬ ಭರವಸೆಯಿದೆ. ತಂಬಾಕು ತೆರಿಗೆ ಹೆಚ್ಚಾದರೆ, ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ತಂಬಾಕು ಚಟಕ್ಕೆ ವ್ಯರ್ಥವಾಗುತ್ತಿರುವ ಹಣ ಕುಟುಂಬಗಳ ನಿರ್ವಹಣೆಗೆ ಬಳಕೆಯಾಗಬಹುದು. ಅಲ್ಲದೆ, ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸಬಹುದು,” ಎಂದು ಶ್ರೀ ಎಸ್ ಜೆ ಚಂದರ್, ಸಂಚಾಲಕರು, ಕನ್ಸೋರ್ಟಿಯಂ ಫಾರ್ ಟೊಬ್ಯಾಕೋ ಫ್ರೀ ಕರ್ನಾಟಕ, ತಿಳಿಸಿದರು.

“13-15 ವಯಸ್ಸಿನ ಅಪ್ರಾಪ್ತ ವಿದ್ಯಾರ್ಥಿಗಳ ಪೈಕಿ ಐವರಲ್ಲಿ ಒಬ್ಬರು ಯಾವುದಾದರೊಂದು ರೂಪದಲ್ಲಿ ತಂಬಾಕನ್ನು (ಧೂಮಪಾನ, ಹೊಗೆರಹಿತ ತಂಬಾಕು ಮತ್ತು ಇತರೆ) ಬಳಸುತ್ತಾರೆ ಎಂದು ಇತ್ತೀಚಿನ ಗ್ಲೋಬಲ್ ಯೂಥ್ ಟೊಬ್ಯಾಕೊ ಸರ್ವೆ (GYTS) ಸೂಚಿಸಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ತಂಬಾಕು ಉತ್ಪನ್ನಗಳು ಕೈಗೆಟುಕದಂತೆ ಮಾಡಿ ಮಕ್ಕಳನ್ನು ರಕ್ಷಿಸಬೇಕು. ಇಲ್ಲವಾದಲ್ಲಿ, ಅವರು ತಮ್ಮ ಪಾಕೆಟ್ ಮನಿ ಬಳಸಿ ತಂಬಾಕು ಉತ್ಪನ್ನಗಳೊಂದಿಗೆ ಪ್ರಯೋಗ ಮಾಡುತ್ತಾರೆ. ಹದಿಹರೆಯದಲ್ಲಿ ಮಕ್ಕಳು ವ್ಯಸನಗಳಿಗೆ ತುತ್ತಾಗುವುದರಿಂದ, ಜೀವನಪರ್ಯಂತ ತಂಬಾಕು ವ್ಯಸನಿಗಳಾಗುತ್ತಾರೆ,” ಎಂದು ಶ್ರೀ ಚಂದರ್ ಹೇಳಿದರು.

“ತಂಬಾಕು ಉತ್ಪನ್ನಗಳ, ಅದರಲ್ಲೂ ಬೀಡಿಯ ಬೆಲೆ ಸುಲಭವಾಗಿ ಕೈಗೆಟಕುವಂತಿರುವುದರಿಂದ ನಮ್ಮಂತಹ ಖಾಯಂ ಬಳಕೆದಾರರಿಗೆ ಅದರ ಬಿಸಿ ತಟ್ಟುವುದಿಲ್ಲ. ಜೀವನವನ್ನೇ ಬುಡಮೇಲು ಮಾಡುವ ತಂಬಾಕಿನ ದುಷ್ಪರಿಣಾಮಗಳನ್ನು ವರ್ಷಾನುಗಟ್ಟಲೆ ದೇಹವನ್ನು ಅದರ ಶೋಷಣೆಗೊಳಪಡಿಸಿದ ನಂತರವೇ ನಾವು ಅರಿಯುವುದು. ತಂಬಾಕು ಬಳಕೆಯಿಂದ ತೊಂದರೆಗೀಡಾಗಿ ಜೀವನದುದ್ದಕ್ಕೂ ನರಳುವ ಅನೇಕ ಕುಟುಂಬಗಳಿವೆ. ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಗಮನಾರ್ಹ ಹೆಚ್ಚಳವಾದರೆ ಅವು ಕೈಗೆಟುಕದಂತಾಗಿ ಅವುಗಳ ಬಳಕೆಯೂ ಕಡಿಮೆಯಾಗುತ್ತದೆ,” ಎಂದು ತಂಬಾಕು ಬಳಕೆಯಿಂದ ಬಾಯಿಯ ಕ್ಯಾನ್ಸರ್ ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ. ಬಸವರಾಜು ಹೇಳಿದರು.

ಭಾರತ ತಂಬಾಕು ಬಳಕೆದಾರರ ಪಟ್ಟಿಯಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿರುವುದರಿಂದ (268 ಮಿಲಿಯನ್) ತಂಬಾಕು ತೆರಿಗೆ ಹೆಚ್ಚಳ ಅತ್ಯಗತ್ಯವಾಗಿದೆ. ಪ್ರತಿವರ್ಷ 13 ಲಕ್ಷ ಮಂದಿ ತಂಬಾಕು ಸಂಬಂಧಿತ ಖಾಯಿಲೆಗಳಿಂದ ಮೃತಪಡುತ್ತಿದ್ದಾರೆ. ಭಾರತದಲ್ಲಿನ ಎಲ್ಲ ವಿಧದ ಕ್ಯಾನ್ಸರ್ ಗಳಿಗೆ ತಂಬಾಕು ಬಳಕೆ ಶೇ. 27%ರಷ್ಟು ಕಾರಣವಾಗಿದೆ. ಯಾವುದೇ ಬಗೆಯ ತಂಬಾಕು ಬಳಕೆಗೂ (ಧೂಮಪಾನ/ಜಗಿಯುವುದು) ಕೋವಿಡ್-19 ಸಂಬಂಧಿತ ಸಾವು-ನೋವುಗಳಿಗೂ ನಿಕಟ ನಂಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. 2017-18ರಲ್ಲಿ ತಂಬಾಕು ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ವ್ಯಯಿಸಿದ್ದು 177,341 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಇದು ಭಾರತದ ಜಿಡಿಪಿಯ ಶೇ. 1% ರಷ್ಟಾಗಿದೆ.

Facebook Comments