ಸೋಥಿ, ಬೋಲ್ಟ್ ದಾಳಿಗೆ ಕಂಗೆಟ್ಟ ಭಾರತ, ಟೆಸ್ಟ್‌ನಲ್ಲಿ ಕೊಹ್ಲಿ ಪಡೆಗೆ ಮೊದಲ ಸೋಲು

ಈ ಸುದ್ದಿಯನ್ನು ಶೇರ್ ಮಾಡಿ

ವೆಲ್ಲಿಂಗ್ಟನ್, ಫೆ.24- ನ್ಯೂಜಿಲ್ಯಾಂಡ್‍ನ ಅನುಭವಿ ಬೌಲರ್‍ಗಳಾದ ಟೀಮ್ ಸೋಥಿ ಹಾಗೂ ಟ್ರೆಂಟ್ ಬೋಲ್ಟ್‍ರ ದಾಳಿಗೆ ಕಂಗೆಟ್ಟ ಭಾರತ ಇನ್ನಿಂಗ್ಸ್ ಸೋಲು ತಪ್ಪಿಸಿಕೊಂಡರೂ 10 ವಿಕೆಟ್‍ಗಳಿಂದ ಸೋತು ಮುಖಭಂಗ ಅನುಭವಿಸಿದೆ. ಟೆಸ್ಟ್ ವಿಶ್ವಕಪ್ ಆರಂಭವಾದಾಗಿನಿಂದಲೂ ಗೆಲುವಿನ ಅಶ್ವಮೇಧ ಯಾಗ ಮಾಡುತ್ತಿದ್ದ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡವನ್ನು ಕಟ್ಟಿ ಹಾಕುವಲ್ಲಿ ಕೇನ್ ವಿಲಿಯಮ್ಸ್ ಪಡೆ ಯಶಸ್ವಿಯಾಗಿದೆ.

ಮೂರನೆ ದಿನದಾಟದ ಅಂತ್ಯಕ್ಕೆ ಅಜೆಂಕ್ಯಾ ರಹಾನೆ ಹಾಗೂ ಹನುಮವಿಹಾರಿ ಅಜೇಯರಾಗಿ ಉಳಿದಿದ್ದು ಇಂದು ಕೂಡ ಉತ್ತಮ ಜೊತೆಯಾಟ ನೀಡುವ ಬಯಕೆಯಿಂದ ಮೈದಾನಕ್ಕೆ ಇಳಿದಿತ್ತಾದರೂ ನಿನ್ನೆಯ ಮೊತ್ತಕ್ಕೆ 4 ರನ್ ಗಳಿಸಿದ ರಹಾನೆ (29 ರನ್,5 ಬೌಂಡರಿ) ಟೀಮ್ ಸೋಥಿ ಬೌಲಿಂಗ್‍ನಲ್ಲಿ ಟ್ರೆಂಟ್ ಬೋಲ್ಟ್‍ಗೆ ಕ್ಯಾಚಿ ನೀಡಿ ಮೈದಾನದ ತೊರೆದ ಬೆನ್ನಲ್ಲೇ ಹನುಮ ವಿಹಾರಿ (15 ರನ್,2 ಬೌಂಡರಿ)ರನ್ನು ಬೋಲ್ಟ್ ಕ್ಲೀನ್ ಬೋಲ್ಡ್ ಮಾಡಿದರು.

ನಂತರ ಭಾರತದ ಯುವ ಆಟಗಾರ ರಿಷಭ್‍ಪಂತ್ (25ರನ್,4 ಬೌಂಡರಿ) ಹಾಗೂ ಇಶಾಂತ್‍ಶರ್ಮಾ (12 ರನ್,2 ಬೌಂಡರಿ) ತುಸು ಹೋರಾಟ ನಡೆಸಿದ್ದರಿಂದ ತಂಡದ ಮೊತ್ತ 191 ರನ್‍ಗಳಿಗೆ ಹಿಗ್ಗಿ ಇನ್ನಿಂಗ್ಸ್ ಸೋಲು ತಪ್ಪಿಸಿಕೊಂಡಿತು. ಎರಡನೆ ಇನ್ನಿಂಗ್ಸ್‍ನಲ್ಲಿ ಗೆಲ್ಲಲು 9 ರನ್‍ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಆರಂಭಿಕ ಆಟಗಾರರಾದ ಲ್ಯಾಥಮ್ (7ರನ್, 1 ಬೌಂಡರಿ) ಹಾಗೂ ಬುಲ್‍ಡೇನ್(2 ರನ್) 1.4 ಓವರ್‍ಗಳಲ್ಲೇ ಗೆಲುವಿನ ರನ್ ಬಾರಿಸಿದಾಗ ನ್ಯೂಜಿಲ್ಯಾಂಡ್ ಬಳಗದಲ್ಲಿ ಗೆಲುವಿನ ಸಂಭ್ರಮ ಮೂಡಿತು.
ನ್ಯೂಜಿಲ್ಯಾಂಡ್ ಪರ ಟೀಮ್ ಸೋಥಿ (5 ವಿಕೆಟ್), ಟ್ರೆಂಟ್ ಬೋಲ್ಟ್ (4 ವಿಕೆಟ್), ಗ್ರ್ಯಾಂಡ್ ಹೋಂ (1 ವಿಕೆಟ್) ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್
ಭಾರತ: ಮೊದಲ ಇನ್ನಿಂಗ್ಸ್ 165, ದ್ವಿತೀಯ ಇನ್ನಿಂಗ್ಸ್: 191
ನ್ಯೂಜಿಲ್ಯಾಂಡ್: ಮೊದಲ ಇನ್ನಿಂಗ್ಸ್ 348, ದ್ವಿತೀಯ ಇನ್ನಿಂಗ್ಸ್ 9/0
ಪಂದ್ಯಶ್ರೇಷ್ಠ: ಟೀಮ್‍ಸೋಥಿ

Facebook Comments