ಬದ್ಧ ವೈರಿಗಳನ್ನು ಬಗ್ಗು ಬಡಿದು ಗೆಲುವಿನ ನಾಗಾಲೋಟ ಮುಂದುವರಿಸಿದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

ಮಾಂಚೆಸ್ಟರ್, ಜೂ. 17: ಮ್ಯಾಂಚೆಸ್ಟರ್ ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಸಾಂಪ್ರದಾಯಿಕ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ.

ಈ ಮೂಲಕ ಏಕದಿನ ವಿಶ್ವಕಪ್ ನಲ್ಲಿ ಸತತ 7ನೇ ಬಾರಿಗೆ ಪಾಕಿಸ್ತಾನದ ವಿರುದ್ಧ ಗೆಲುವು ದಾಖಲಿಸಿದೆ. ಮಳೆಯಿಂದ ಎರಡು ಬಾರಿ ಸ್ಥಗಿತಗೊಂಡಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದನ್ವಯ 89 ರನ್ ಗಳ ಅಂತರದಿಂದ ಜಯ ಗಳಿಸಿದೆ.

ಪ್ರಸಕ್ತ ಸಾಲಿನ ವಿಶ್ವಕಪ್‌ನಲ್ಲಿ ಆಡಿರುವ ನಾಲ್ಕನೇ ಪಂದ್ಯದಲ್ಲಿ ಮೂರನೇ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಒಟ್ಟು ಏಳು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಅತ್ತ ಐದನೇ ಪಂದ್ಯದಲ್ಲಿ ಮೂರನೇ ಸೋಲಿಗೆ ಶರಣಾಗಿರುವ ಪಾಕಿಸ್ತಾನ ಕೇವಲ ಮೂರು ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಪಾಕಿಸ್ತಾನ ವಿರುದ್ಧ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 336 ರನ್ ಗಳಿಸಿ ಪಾಕಿಸ್ತಾನಕ್ಕೆ 337 ರನ್ ಗಳ ಬೃಹತ್ ಟಾರ್ಗೆಟ್ ನೀಡಿತ್ತು.

ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಹಾಗೂ ಕೆ. ಎಲ್ .ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 136 ರನ್ ಜೊತೆಯಾಟ ನೀಡಿತು. ರಾಹುಲ್ 57 ರನ್ ಸಿಡಿಸಿ ಔಟಾದರೆ ರೋಹಿತ್ ಶರ್ಮಾ 24ನೇ ಹಾಗೂ ಈ ವಿಶ್ವಕಪ್ ಟೂರ್ನಿಯಲ್ಲಿ 2ನೇ ಶತಕ ದಾಖಲಿಸಿದರು.

ರೋಹಿತ್ 140 ರನ್ ಸಿಡಿಸಿ ಔಟಾದ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಕೊಹ್ಲಿ ಅರ್ಧ ಸೆಂಚುರಿ ಸಿಡಿಸಿ ಮಿಂಚುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 11,000 ರನ್ ಸಿಡಿಸಿದ ಸಾಧನೆ ಮಾಡಿದರು.

ಇತ್ತ ಬೌಂಡರಿ ಸಿಕ್ಸರ್ ಮೂಲಕ ಆರ್ಭಟಿಸಿದ ಹಾರ್ದಿಕ್ 19 ಎಸೆತದಲ್ಲಿ 26 ರನ್ ಸಿಡಿಸಿ ಔಟಾದರು. ಎಂ.ಎಸ್.ಧೋನಿಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ವಿರಾಟ್ ಕೊಹ್ಲಿ 77 ರನ್ ಸಿಡಿಸಿ ಔಟಾದರೆ ನಂತರ ಬಂದ ವಿಜಯ್ ಶಂಕರ್ ಅಜೇಯ 15 ರನ್ ಹಾಗೂ ಕೇದಾರ್ ಜಾಧವ್ ಅಜೇಯ 9 ರನ್ ಸಿಡಿಸಿದರು. ಈ ಮೂಲಕ ಭಾರತ 5 ವಿಕೆಟ್ ನಷ್ಟಕ್ಕೆ ಒಟ್ಟು 336 ರನ್ ಗಳಿಸಿತು.

ಬೃಹತ್ ಮೊತ್ತ ಬೆನ್ನಟ್ಟಿದ ಪಾಕಿಸ್ತಾನದ ಆರಂಭ ಉತ್ತಮವಾಗಿರಲಿಲ್ಲ. ಭಾರತೀಯ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ನಿಖರ ದಾಳಿ ಸಂಘಟಿಸಿದರು.

ಈ ನಡುವೆ ಪಾಕಿಸ್ತಾನ 35 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದ ಸಂದರ್ಭದಲ್ಲಿ ಮಳೆ ಸುರಿದಿದ್ದರಿಂದ ಪಂದ್ಯಕ್ಕೆ ಮಗದೊಮ್ಮೆ ಅಡಚಣೆಯಾಯಿತು.

ಮಳೆಯಿಂದಾಗಿ ಮಗದೊಮ್ಮೆ ಅರ್ಧ ತಾಸಿಗೂ ಹೆಚ್ಚು ಹೊತ್ತು ನಷ್ಟವಾಗಿದ್ದರಿಂದ ಡಕ್ವರ್ತ್ ಲೂವಿಸ್ ನಿಮಯದಂತೆ ಪಾಕ್‌ಗೆ ಗುರಿ ಮರು ನಿಗದಿಪಡಿಸಲಾಯಿತು. ಅಲ್ಲದೆ 40 ಓವರ್‌ಗಳಲ್ಲಿ ಗೆಲುವಿಗೆ 302 ರನ್ ಗಳಿಸಬೇಕಾಗತ್ತು. ಅಂದರೆ ಅಂತಿಮ ಐದು ಓವರ್‌ಗಳಲ್ಲ ಗೆಲುವಿಗೆ 136 ರನ್ ಗಳಿಸಬೇಕಿತ್ತು.

ಅಂತಿಮವಾಗಿ 40 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 212 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನುಳಿದಂತೆ ಇಮಾದ್ ವಾಸೀ 46 ಹಾಗೂ ಶದಾಬ್ ಖಾನ್ 20 ರನ್ ಗಳಿಸಿ ಔಟಾಗದೆ ಉಳಿದರು. ಭಾರತದ ಪರ ಶಂಕರ್, ಪಾಂಡ್ಯ ಹಾಗೂ ಕುಲ್‌ದೀಪ್ ತಲಾ ಎರಡು ವಿಕೆಟುಗಳನ್ನು ಪಡೆದರು.

# ರೋಹಿತ್ ಶತಕ ಸಂಭ್ರಮ :
ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಅಜೇಯ 122 ರನ್ ಹಾಗೂ ಆಸ್ಟ್ರೇಲಿಯಾ ವಿರುದ್ಧ 57 ರನ್ ಗಳಿಸಿದ್ದ ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧವೂ ಭರ್ಜರಿ ಬ್ಯಾಟಿಂಗ್ ನಡೆಸಿದರು.

34 ಎಸೆತಗಳಲ್ಲೇ 50 ರನ್ ಪೂರೈಸಿದ ರೋಹಿತ್ 85 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ವೃತ್ತಿಯ 24ನೇ ಶತಕ, 2019ರ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿದರು.

ಸಚಿನ್ (6), ಗಂಗೂಲಿ (5) ಮತ್ತು ಶಿಖರ್ ಧವನ್ (3) ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರರಾಗಿದ್ದಾರೆ.

# ಕೊಹ್ಲಿ ದಾಖಲೆ:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದು, ಪಂದ್ಯದಲ್ಲಿ 57 ರನ್ ಗಳಿಸಿದ ಸಂದರ್ಭದಲ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 11 ಸಾವಿರ ರನ್ ಗಳಿಸಿದ ದಾಖಲೆ ಬರೆದರು.ಕೊಹ್ಲಿ 222 ಇನ್ನಿಂಗ್ಸ್ ಗಳಲ್ಲೇ ಈ ಸಾಧನೆ ಮಾಡಿದ್ದು, ಈ ಹಿಂದೆ ಸಚಿನ್ 276 ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಗಳಿಸಿದ್ದರು.

ಏಕದಿನ ಕ್ರಿಕೆಟ್‍ನಲ್ಲಿ ಕೊಹ್ಲಿ 11 ಸಾವಿರ ರನ್ ಪೂರ್ಣಗೊಳಿಸಿದ 9ನೇ ಆಟಗಾರ ಎಂಬ ಹೆಗ್ಗಳಿಕೆಯನ್ನ ಪಡೆದಿದ್ದು, ಭಾರತ ಪರ ಈ ಸಾಧನೆ ಮಾಡಿ 3ನೇ ಆಟಗಾರ ಎನಿಸಿಕೊಂಡಿದ್ದಾರೆ.ಟೀಂ ಇಂಡಿಯಾ ಪರ ಇದುವರೆಗೂ ಸಚಿನ್, ಗಂಗೂಲಿ 11 ಸಾವಿರ ರನ್ ಪೂರೈಸಿದ್ದಾರೆ.

ಸಚಿನ್ ಏಕದಿನ ಕ್ರಿಕೆಟಿನಲ್ಲಿ 18,426 ರನ್ ಸಿಡಿಸಿದ್ದರೆ, ಗಂಗೂಲಿ 11,363 ರನ್ ಗಳಿಸಿದ್ದರೆ. ಉಳಿದಂತೆ ರಿಕಿ ಪಾಟಿಂಗ್ 286 ಇನ್ನಿಂಗ್ಸ್, ಸೌರವ್ ಗಂಗೂಲಿ 288 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.ಕೊಹ್ಲಿ ಈಗಾಗಲೇ ವೇಗವಾಗಿ 10 ಸಾವಿರ ರನ್ ಸಿಡಿಸಿದ ಸಾಧನೆ ಮಾಡಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೇ ಈ ಸಾಧನೆ ಮಾಡುವ ಅವಕಾಶದಿಂದ ವಂಚಿತರಾಗಿದ್ದರು. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ 51ನೇ ಅರ್ಧ ಶತಕ ಸಿಡಿಸಿದ ಕೊಹ್ಲಿ, ಈ ಟೂರ್ನಿಯಲ್ಲಿ ಸಿಡಿಸಿದ 2ನೇ ಅರ್ಧ ಶತಕ ಇದಾಗಿದೆ.ಸಂಕ್ಷಿಪ್ತ ಸ್ಕೋರ್ :ಭಾರತ -336/5ಪಾಕಿಸ್ತಾನ : 6/0(2.1 v)

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin