ಸ್ವಾತಂತ್ರ್ಯೋತ್ಸವಕ್ಕೆ ರಾಜಧಾನಿ ಬೆಂಗಳೂರಲ್ಲಿ ಭಾರಿ ಬಂದೋಬಸ್ತ್, ಸೆಲ್ಫಿಗೆ ನಿಷೇಧ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.13- ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ 73ನೇ ಸ್ವಾತಂತ್ರ್ಯೋತ್ಸವದ ಭದ್ರತೆಗಾಗಿ 1906 ಪೊಲೀಸರನ್ನು ನಿಯೋಜಿಸಲಾಗಿದ್ದು, ಕಡ್ಡಾಯವಾಗಿ ಸೆಲ್ಫಿಯನ್ನು ನಿಷೇಧಿಸಲಾಗಿದೆ. ನಗರದ ಮಾಣಿಕ್‍ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಪೂರ್ವ ತಯಾರಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರಾದ ಭಾಸ್ಕರ್‍ರಾವ್ ತಿಳಿಸಿದರು.

ಪೂರ್ವ-ಪಶ್ಚಿಮ ವಿಭಾಗದ ಇಬ್ಬರು ಹೆಚ್ಚುರಿ ಪೊಲೀಸ್ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು, 11 ಮಂದಿ ಡಿಸಿಪಿಗಳು, 23 ಎಸಿಪಿಗಳು, 78 ಇನ್ಸ್‍ಪೆಕ್ಟರ್‍ಗಳು, 175 ಪಿಎಸ್‍ಐಗಳು, 221 ಎಎಸ್‍ಐಗಳು, 1108 ಮಂದಿ ಹೆಡ್‍ಕಾನ್ಸ್‍ಟೇಬಲ್ ಮತ್ತು ಕಾನ್‍ಸ್ಟೇಬಲ್‍ಗಳು, 77 ಮಹಿಳಾ ಪೊಲೀಸ್ ಸಿಬ್ಬಂದಿ,150 ಮಂದಿ ಸಾದಾ ಉಡುಪಿನಲ್ಲಿರುವ ಪೊಲೀಸರು ಸೇರಿದಂತೆ 1906ಮಂದಿ ಪೊಲೀಸ್ ಸಿಬ್ಬಂದಿ ಹಾಗೂ ಹೋಮ್‍ಗಾರ್ಡ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಹೇಳಿದರು.

ಕೆಎಸ್‍ಆರ್‍ಪಿ ಮತ್ತು ಸಿಎಆರ್‍ನ 10 ತುಕಡಿಗಳು ಭಯೋತ್ಪಾದನೆ ನಿಗ್ರಹ ಮತ್ತು ವಿಪತ್ತು ನಿರ್ವಹಣೆಯ ಗರುಡಾ ಪಡೆ, ತುರ್ತು ಸ್ಪಂದನಾ ಪಡೆ, ರ್ಯಾಪಿಡ್ ಆ್ಯಕ್ಸನ್ ಪೊರ್ಸ್ ಸೇರಿದಂತೆ ಸಾಕಷ್ಟು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಯಾವುದೇ ಆತಂಕ ಪಡೆದ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗುಪ್ತಚರ ಇಲಾಖೆಯಿಂದ ನಿರ್ದೇಶನ ಬಂದಿದೆ. 24 ತುಕಡಿಗಳನ್ನಾಗಿ ವಿಭಾಗಿಸಿ ಭದ್ರತೆ ಯೋಜಿಸಲಾಗಿದೆ. ಅರಿತವಾದ ಆಯುಧಗಳು, ಮದ್ಯ, ಮಾದಕ ವಸ್ತುಗಳು, ಸ್ಫೋಟಕಗಳು, ಮೊಬೈಲ್, ಕ್ಯಾಮೆರಾ, ರೇಡಿಯೋ, ಕೊಡೆಗಳು, ಬಿಡಿ, ಸಿಗರೇಟ್, ಬೆಂಕಿಪೊಟ್ಟಣ, ಕಪ್ಪು ವಸ್ತ್ರ, ತಿಂಡಿ, ತಿನಿಸುಗಳು, ಬಾವುಟಗಳು ಸೇರಿದಂತೆ ಅಸುರಕ್ಷತೆ ಎಂದು ಭಾವಿಸಲಾಗುವ ವಸ್ತುಗಳನ್ನು ತರುವವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದರು.

ಈ ಬಾರಿ ಸ್ವಾತಂತ್ರ ದಿನಾಚರಣೆಯಲ್ಲಿ ಗೋವಾ ಪೊಲೀಸರು ನಮ್ಮ ಪರೇಡ್‍ನಲ್ಲಿ ಭಾಗವಹಿಸಲಿದ್ದಾರೆ. ನಮ್ಮ ಪೊಲೀಸರು ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳ ಪರೇಡ್‍ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸೆಲ್ಫಿ ಹಾವಳಿಯಿಂದಾಗಿ ಕಾರ್ಯಕ್ರಮಕ್ಕೆ ಅಡಚಣೆಯಾಗಲಿದೆ. ಹಾಗಾಗಿ ಕಡ್ಡಾಯವಾಗಿ ಪೋಟೋಗ್ರಫಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಸ್ವಯಂ ನಿಯಂತ್ರಣದ ಮೂಲಕ ಸಹಕರಿಸಬೇಕೆಂದು ಭಾಸ್ಕರ್‍ರಾವ್ ಮನವಿ ಮಾಡಿದರು.

ಸಂಚಾರ ನಿರ್ವಹಣೆ:
ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾದ ರವಿಕಾಂತೇಗೌಡ ಮಾತನಾಡಿ, ಹಳದಿ ಕಾರ್ ಪಾಸ್ ಹೊಂದಿರುವವರಿಗೆ ದ್ವಾರ ಒಂದರಲ್ಲಿ ಪ್ರವೇಶ ಪಡೆದು ಪರೇಡ್ ಮೈದಾನದ ಪಶ್ವಿಮ ಭಾಗದಲ್ಲಿ ವಾಹನ ನಿಲುಗಡೆ ಮಾಡಬೇಕು. ಬಿಳಿ ಕಾರ್ ಪಾಸ್‍ನ ಗಣ್ಯರು, ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು ದ್ವಾರ ಎರಡರಲ್ಲಿ ಪ್ರವೇಶಿಸಿ ಮೈದಾನದ ಪಶ್ಚಿಮ ಭಾಗದಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶವಿದೆ.

ಹಸಿರು ಬಣ್ಣದ ಪಾಸ್ ಹೊಂದಿರುವವರು ಶಿವಾಜಿನಗರ ಬಸ್ ನಿಲ್ದಾಣದ ಒಂದನೇ ಮಹಡಿಯಲ್ಲಿ ವಾಹನ ನಿಲ್ಲಿಸಿ ದ್ವಾರ ನಾಲ್ಕರಲ್ಲಿ ಪ್ರವೇಶ ಪಡೆಯಬೇಕು.
ಡಿಸಿಪಿ ಹಾಗೂ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳಿಗೆ ದ್ವಾರ ಮೂರರಲ್ಲಿ ಪ್ರವೇಶ ಕಲ್ಪಿಸಿ ಮೈದಾನ ಪೂರ್ವ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಕರೆತರುವ ವಾಹನಗಳಿಗೆ ಪ್ರವೇಶ ದ್ವಾರ ಒಂದರ ಬಳಿ ಮಕ್ಕಳನ್ನು ಇಳಿಸಿ ಎಂ.ಜಿ.ರಸ್ತೆ, ಅನಿಲ್‍ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದವರೆಗೂ ಉತ್ತರ ಭಾಗದಲ್ಲಿ ವಾಹನಗಳನ್ನು ನಿಲ್ಲಿಸಬಹುದು.

ದ್ವಿಚಕ್ರ ವಾಹನ ಸವಾರರು ಕಾಮರಾಜ್ ರಸ್ತೆ, ಆರ್ಮಿಪಬ್ಲಿಕ್ ಶಾಲೆ ಮುಂಭಾಗ, ಮೈನ್‍ಗಾರ್ಡ್ ರಸ್ತೆ, ಸಫಿನಾಫ್ಲಾಜಾ ಮುಂಭಾಗದಲ್ಲಿ ವಾಹನ ನಿಲುಗಡೆ ಮಾಡಿ ಪ್ರವೇಶ ದ್ವಾರ ನಾಲ್ಕಕ್ಕೆ ಕಾಲ್ನಡಿಗೆಯಲ್ಲಿ ಬರಬೇಕು.ಪಾಸ್ ಹೊಂದಿಲ್ಲದ ಕಾರು ಮಾಲೀಕರು ಶಿವಾಜಿನಗರದ ಬಸ್ ನಿಲ್ದಾಣದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ವಿವರಿಸಿದರು.

ಸ್ವಾಂತ್ರ್ಯೋತ್ಸವದ ದಿನ ಬೆಳಗ್ಗೆ 8.30ರಿಂದ 10.30ರವರೆಗೆ ಕಬ್ಬನ್‍ರಸ್ತೆಯಲ್ಲಿ ಬಿಆರ್‍ವಿ ಜೆಂಕ್ಷನ್‍ನಿಂದ ಕಾಮರಾಜ ಜಂಕ್ಷನ್‍ವರೆಗೆ ಎರಡು ದಿಕ್ಕುಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ ಎಂದು ಹೇಳಿದರು.

ಸೆಂಟ್ರಲ್‍ಸ್ಟ್ರೀಟ್, ಅನಿಲ್‍ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ. ಕಬ್ಬನ್‍ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್‍ವರೆಗೆ. ಎಂ.ಜಿ.ರಸ್ತೆ, ಅನಿಲ್‍ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ರವಿಕಾಂತೇಗೌಡ ವಿವರಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ