ಇಂಡಿಯಾ ಇನ್ ಡೇಂಜರ್ : ಒಂದೇ ದಿನ 8,171 ಕೊರೋನಾ ಪಾಸಿಟಿವ್, 204 ಜನ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 2-ದೇಶಾದ್ಯಂತ ಕಿಲ್ಲರ್ ಕೋವಿಡ್-19 ವೈರಸ್ ರಣಕೇಕೆ ಮತ್ತಷ್ಟು ತೀವ್ರಗೊಂಡಿದ್ದು 24 ತಾಸುಗಳ ಅವಧಿಯಲ್ಲಿ ಮತ್ತೆ ಅಧಿಕ ಪ್ರಮಾಣದ 8,171 ಮಂದಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 204 ರೋಗಿಗಳು ಬಲಿಯಾಗಿದ್ದಾರೆ.  ಈ ನಡುವೆ ರೋಗ ಪೀಡಿತರಲ್ಲಿ ಶೇ.48.07ರಷ್ಟು ಚೇತರಿಕೆ, ಗುಣಮುಖ ಕಂಡು ಬಂದಿದ್ದು, 97,581 ಮಂದಿ ಆತಂಕದಿಂದ ಪಾರಾಗಿದ್ದಾರೆ.

ದೇಶಾದ್ಯಂತ ಲಾಕ್‍ಡೌನ್ ಸಡಿಲಿಕೆಯಾಗುತ್ತಿದ್ದಂತೆ ಕಿಲ್ಲರ್ ಕೊರೊನಾ ವೈರಸ್ ಏರುಗತಿಯಲ್ಲಿ ದಾಳಿ ಮುಂದುವರಿಸಿದೆ. ಹೆಮ್ಮಾರಿ ನಿಗ್ರಹಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಹೋರಾಟ ನಡೆಸುತ್ತಿದ್ದರೂ ಹೆಮ್ಮಾರಿಯ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ಜೂನ್ ತಿಂಗಳ ಎರಡನೇ ದಿನವೂ ಆತಂಕಕಾರಿ ಮಟ್ಟದಲ್ಲಿ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ.

ಈವರೆಗೆ ಮೃತರ ಸಂಖ್ಯೆ 5,600 ಹಾಗೂ ರೋಗಪೀಡಿತರ ಸಂಖ್ಯೆ 1.98 ಲಕ್ಷ ದಾಟಿದ್ದು, ನಾಳೆ ವೇಳೆಗೆ ದೇಶದಲ್ಲಿ ಸೋಂಕು ಬಾಧಿತರ ಸಂಖ್ಯೆ 2 ಲಕ್ಷ ತಲುಪುವ ಆತಂಕವಿದೆ. ದೇಶದಲ್ಲಿ ಸತತ 12 ದಿನ 6,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೇ 7,000ಕ್ಕೂ ಅಧಿಕ ಪಾಸಿಟಿವ್ ಕೇಸ್‍ಗಳು ಪತ್ತೆಯಾದ ಐದನೇ ದಿನವಾಗಿದ್ದು ದೇಶದ ಗಂಭೀರ ಸ್ಥಿತಿಗೆ ಸಾಕ್ಷಿಯಾಗಿದೆ.

ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ ಸತತ ಮೂರನೇ ದಿನ 8,300ಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾಗಿದೆ. 24 ತಾಸುಗಳ ಅವಧಿಯಲ್ಲಿ 8,171 (ಭಾನುವಾರ 8,932, ಶನಿವಾರ 8,380, ಶುಕ್ರವಾರ 7.964, ಗುರುವಾರ 7,466, ಬುಧವಾರ 6,566 ಮಂಗಳವಾರ 6,387, ಸೋಮವಾರ 6,535, ಭಾನುವಾರ 6,977, ಶನಿವಾರ 6,767, ಶುಕ್ರವಾರ 6,654, ಮತ್ತು ಗುರುವಾರ 6,088 ಕೇಸ್‍ಗಳು) ಜನರಿಗೆ ಸೋಂಕು ದೃಢಪಟ್ಟಿದೆ.

ಸಾಂಕ್ರಾಮಿಕ ರೋಗ ಉಲ್ಬಣದಲ್ಲಿ ನಿರಂತರ 12 ದಿನದ ಭಾರೀ ಜಿಗಿತ ಇದಾಗಿದೆ. ಅಲ್ಲದೇ ಕಳೆದ 12 ದಿನಗಳಲ್ಲಿ 10 ದಿವಸಗಳಿಂದಲೂ 6,500ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ. ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 204 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 5,598ಕ್ಕೇರಿದೆ . ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 1,98,706 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇಂದು ಮಧ್ಯರಾತ್ರಿಯೊಳಗೆ ಸಾವಿನ ಸಂಖ್ಯೆ ಸುಮಾರು 5,800 ಮತ್ತು ಸೋಂಕಿತರ ಪ್ರಮಾಣ 2 ಲಕ್ಷ ದಾಟುವ ಆತಂಕವೂ ಇದೆ. ನಿನ್ನೆ ಬೆಳಗ್ಗೆ 8 ಗಂಟೆಯಿಂದ 24 ಗಂಟೆಗಳ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 204 ಮಂದಿಯನ್ನು ಕಿಲ್ಲರ್ ಕೊರೊನಾ ಬಲಿ ತೆಗೆದುಕೊಂಡಿದೆ.

ಮಹಾರಾಷ್ಟ್ರದಲ್ಲಿ 76, ದೆಹಲಿ 50, ಗುಜರಾತ್ 25, ತಮಿಳುನಾಡು 11, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ತಲಾ 8, ತೆಲಂಗಾಣ 6, ರಾಜಸ್ತಾನ ಮತ್ತು ಉತ್ತರ ಪ್ರದೇಶ ತಲಾ 4, ಬಿಹಾರ ಮತ್ತು ಜಮ್ಮು-ಕಾಶ್ಮೀರ ತಲಾ 3, ಆಂಧ್ರಪ್ರದೇಶ 2, ಹರಿಯಾಣ, ಕರ್ನಾಟಕ, ಕೇರಳ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಒಂದು ಸಾವು ಪ್ರಕರಣ ವರದಿಯಾಗಿದೆ.

ಈವರೆಗೆ ಸಂಭವಿಸಿರುವ 5,598 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿ ಈವರೆಗೆ 2,362 ಮಂದಿ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿಯೂ ಭಾರೀ ಏರಿಕೆ ಕಂಡುಬಂದಿದೆ.  ಎರಡನೇ ಸ್ಥಾನದಲ್ಲಿರುವ ಗುಜರಾತ್‍ನಲ್ಲಿ 1,063 ಸಾವುಗಳು ಸಂಭವಿಸಿವೆ.

ನಂತರದ ಸ್ಥಾನಗಳಲ್ಲಿ ದೆಹಲಿ (523), ಮಧ್ಯಪ್ರದೇಶ (358), ಪಶ್ಚಿಮ ಬಂಗಾಳ (335), ಉತ್ತರ ಪ್ರದೇಶ (217), ರಾಜಸ್ಥಾನ (198), ತಮಿಳುನಾಡು (184), ತೆಲಂಗಾಣ (88), ಆಂಧ್ರಪ್ರದೇಶ (64), ಕರ್ನಾಟಕ(52), ಹಾಗೂ ಪಂಜಾಬ್ (45) ರಾಜ್ಯಗಳಿವೆ.

ಜಮ್ಮು-ಕಾಶ್ಮೀರ 31, ಬಿಹಾರ 24, ಹರಿಯಾಣ 21, ಕೇರಳ 10, ಒಡಿಶಾ ಏಳು, ಉತ್ತರಾಖಂಡ 6, ಹಿಮಾಚಲ ಪ್ರದೇಶ ಮತ್ತು ಜರ್ಖಂಡ್ ತಲಾ 5, ಅಸ್ಸಾಂ ಮತ್ತು ಚಂಡಿಗಢ ತಲಾ ನಾಲ್ಕು, ಹಾಗೂ ಪುದುಚೇರಿ, ಛತ್ತೀಸ್‍ಗಢ ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.  ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 97,581ಕ್ಕೇರಿದೆ. ಈವರೆಗೆ 95,526 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.48.07ರಷ್ಟು ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.  ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ.

ಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಪ್ರಕರಣದಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳಲ್ಲಿ ಏಳನೇ ಸ್ಥಾನಕ್ಕೇರಿದೆ. ಒಂಭತ್ತನೇ ಸ್ಥಾನದಲ್ಲಿದ್ದ ಭಾರತ ಫ್ರಾನ್ಸ್, ಜರ್ಮನಿಯನ್ನು ಹಿಂದಿಕ್ಕೆ ಏಳನೇ ಸ್ಥಾನದಲ್ಲಿದೆ.  ಸಾಂಕ್ರಾಮಿಕ ರೋಗ ಮತ್ತು ಸಾವು ಪ್ರಕರಣಗಳ ಪ್ರಮಾಣ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವಾಗಲೇ ಸಮುದಾಯ ಸೋಂಕು ಭೀತಿಯೂ ಭಾರತೀಯರನ್ನು ಮತ್ತಷ್ಟು ಭಯಭೀತಗೊಳಿಸಿದೆ.

Facebook Comments