ಭಾರತದಲ್ಲಿ 24 ತಾಸುಗಳಲ್ಲಿ 44,684 ಕೊರೊನಾ ಪಾಸಿಟಿವ್ ಕೇಸ್, 520 ಡೆತ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ನ.14-ದೇಶದಲ್ಲಿ ಡೆಡ್ಲಿ ಕೊರೊನಾ ವೈರಸ್ ಆರ್ಭಟದ ಇಳಿಮುಖದ ಸೂಚನೆಗಳು ಕಂಡುಬರುತ್ತಿದ್ದು, ದಿನನಿತ್ಯದ ಪಾಸಿಟಿವ್ ಕೇಸ್, ಸಾವು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ದೇಶದ ಜನತೆ ಕೊಂಚ ನಿರಾಳವಾಗುವಂತೆ ಮಾಡಿದೆ.  ಆದಾಗ್ಯೂ ಹೆಮ್ಮಾರಿ ಸಂಪೂರ್ಣವಾಗಿ ದೇಶದಿಂದ ತೊಲಗುವ ತನಕ ಜನರು ಮುನ್ನೆಚ್ಚರಿಕೆ ವಹಿಸಿ ಜವಾಬ್ದಾರಿಯಿಂದ ನಡೆದುಕೊಳ್ಳುವ ಅಗತ್ಯವಿದೆ.

ಸಕ್ರಿಯ ಪ್ರಕರಣಗಳಲ್ಲಿ ಸತತ ಮೂರನೇ ದಿನ 5 ಲಕ್ಷಕ್ಕಿಂತ ಕಡಿಮೆ ಇಳಿದಿದೆ. ಅಲ್ಲದೇ ದಿನನಿತ್ಯದ ಪಾಸಿಟಿವ್ ಕೇಸ್‍ಗಳ ಸಹ 50,000ಕ್ಕಿಂತ ಕಡಿಮೆ ಪ್ರಮಾಣದಲ್ಲೇ ಮುಂದುವರಿದಿದೆ. ಸಾವಿನ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ಇದೇ ವೇಳೆ ಭಾರತದಲ್ಲಿನ ಒಟ್ಟು ಕೋವಿಡ್-19 ರೋಗಿಗಳ ಸಂಖ್ಯೆ 88 ಲಕ್ಷ ಸನಿಹವಿದ್ದು, ಈವರೆಗೆ 1.29 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಸಮಾಧಾನಕರ ಸಂಗತಿ ಎಂದರೆ 81.63 ಲಕ್ಷಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿ/ಚೇತರಿಸಿಕೊಂಡು ಸಾವಿನ ಬಲೆಯಿಂದ ಪಾರಾಗಿದ್ದಾರೆ.
ಇಂದು ಬೆಳಗ್ಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 44,684 ಪಾಸಿಟಿವ್ ಕೇಸ್‍ಗಳು ವರದಿಯಾಗಿವೆ. ಮೊನ್ನೆ ಇದೇ ಅವಧಿಯಲ್ಲಿ 44,879 ಹೊಸ ಸೋಂಕು ಪ್ರಕರಣಗಳು ವರದಿಯಾಗಿತ್ತು.

ದಿನನಿತ್ಯದ ಸಾವು ಪ್ರಕರಣದಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದು, 24 ತಾಸುಗಳ ಅವಧಿಯಲ್ಲಿ 520 ರೋಗಿಗಳು ಸಾವಿಗೀಡಾಗಿದ್ದಾರೆ ಮೊನ್ನೆ 547 ಜನರು ಬಲಿಯಾಗಿದ್ದರು. ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 88 ಲಕ್ಷ ದಾಟುತ್ತಿರುವುದು ಜನರಲ್ಲಿ ಆತಂಕ ಮುಂದುವರಿಯುವಂತೆ ಮಾಡಿದೆ.
ಈವರೆಗೆ ಗುಣಮುಖರಾದ ರೋಗಿಗಳ ಸಂಖ್ಯೆ 81.63 ಲಕ್ಷ ದಾಟಿದೆ. ಚೇತರಿಕೆ ಪ್ರಮಾಣ ಶೇ.93.04ಕ್ಕೆ ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.47ರಷ್ಟು ತಗ್ಗಿದ್ದು, ಜನರಲ್ಲಿ ನಿರಾಳತೆ ಮೂಡಿಸಿದೆ..

ದೇಶದಲ್ಲಿ ಮೃತರ ಸಂಖ್ಯೆ 1,29,188 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ನಾಳೆ ವೇಳೆಗೆ 1.30 ಲಕ್ಷ ದಾಟುವ ಸಾಧ್ಯತೆ ಇದೆ.  ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ 87,73,479ರಷ್ಟಿದ್ದು, ನಾಳೆ ವೇಳೆಗೆ 88 ಲಕ್ಷ ದಾಟುವ ಸಂಭವ ಉಂಟು.

ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ. ಅ.11ರಂದು 70 ಲಕ್ಷ ತಲುಪಿದೆ. ಅ.29ರಂದು 80 ಲಕ್ಷ ಮುಟ್ಟಿದೆ ಇನ್ನೆರಡು ದಿನಗಳಲ್ಲಿ 90 ಲಕ್ಷಕ್ಕೇರುವ ಆತಂಕವಿದೆ.

ಸಕ್ರಿಯ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದ್ದು, ಸತತ ಮೂರನೇ ದಿನ 5 ಲಕ್ಷಕ್ಕಿಂತ ಕಡಿಮೆ ಆಕ್ಟೀವ್ ಕೇಸ್‍ಗಳು ವರದಿಯಾಗಿವೆ. 24 ತಾಸುಗಳಲ್ಲಿ 4,80,719ಕ್ಕೆ ತಗ್ಗಿದೆ. ಮೊನ್ನೆ 4,84,547 ಪ್ರಕರಣಗಳು ದಾಖಲಾಗಿತ್ತು. ಇಂದು ಬೆಳಗ್ಗೆಯಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲಿವೆ. ಆದರೂ ಚೇತರಿಕೆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ರಾಜಧಾನಿ ನವದೆಹಲಿಯಲ್ಲಿ ನಿಯಂತ್ರಣದಲ್ಲಿದ್ದ ಕೋವಿಡ್-19 ವೈರಸ್ ಸೋಂಕುಗಳು ಮತ್ತೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ಸತತ 16 ದಿನಗಳಿಂದ ದಿನನಿತ್ಯ 5,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಲೇ ಇವೆ. ನಿನ್ನೆ ದಾಖಲೆ ಪ್ರಮಾಣದಲ್ಲಿ ಸುಮಾರು 8,000 ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿತ್ತು.

ಮುಂದಿನ ಎರಡು ತಿಂಗಳು ಅತ್ಯಂತ ನಿರ್ಣಾಯಕವಾಗಿದ್ದು, ಜನರು ಎಚ್ಚೆತ್ತುಕೊಂಡು ಕೊರೊನಾ ನಿಯಂತ್ರಣ ನಿಯಮಗಳನ್ನು ಪಾಲಿಸಿದರೆ ಪೀಡೆಯನ್ನು ದೇಶದಿಂದ ನಿರ್ಮೂಲನೆ ಮಾಡಬಹುದಾಗಿದೆ.  ಈ ಮಧ್ಯೆ ಐಸಿಎಂಆರ್ ದೇಶಾದ್ಯಂತ ನಿನ್ನೆ 9.29 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಿದ್ದು, ಈವರೆಗೆ 12.40 ಕೋಟಿಗೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಮಧ್ಯೆ ಡಿಸೆಂಬರ್ ವೇಳೆಗೆ ಭಾರತದಲ್ಲಿ ಆಕ್ಸ್‍ಫರ್ಡ್ ಲಸಿಕೆ ಭಾರತೀಯರಿಗೆ ಲಭ್ಯವಾಗಲಿದೆ.  ಕೊರೊನಾ ನಿಯಂತ್ರಣ ಲಸಿಕೆ ಲಭ್ಯವಾಗುವ ತನಕ ಜನರು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಹಿಂದಿಗಿಂತಲೂ ಈಗ ಅತ್ಯಂತ ಅನಿವಾರ್ಯವಾಗಿದೆ.

ಚಳಿಗಾಲ ಮತ್ತು ಹಬ್ಬದ ದಿನಗಳಲ್ಲಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕೋವಿಡ್-19 ನಿಯಂತ್ರಿಸಲು ಸಹಕರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ಇಲಾಖೆಗಳು ದೇಶದ ಜನರಿಗೆ ಪುನರಾವರ್ತಿತ ಮನವಿಗಳನ್ನು ಮಾಡುತ್ತಲೇ ಇದೆ. ಜನರೂ ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನಿಯಮಗಳನ್ನು ಪಾಲಸುವ ಹೊಣೆಗಾರಿಕೆ ವಹಿಸುವ ಅಗತ್ಯವೂ ಇದೆ.

Facebook Comments