ನಮ್ಮ ಪರಮ ಶತ್ರು ಚೀನಾಗೆ ಬುದ್ದಿ ಕಲಿಸಲು ಇದೇ ಸಕಾಲ

ಈ ಸುದ್ದಿಯನ್ನು ಶೇರ್ ಮಾಡಿ

ನಮ್ಮ ನಿಜವಾದ ಶತ್ರು ಪಾಕಿಸ್ತಾನ ಎಂದು ಎಲ್ಲರೂ ಅಂದುಕೊಂಡಿರುತ್ತೇವೆ. ಆದರೆ, ನಿಜವಾದ ಶತ್ರು ಚೀನಾ..! ಹಲವಾರು ಬಾರಿ ಭಾರತದ ಮೇಲೆ ಆರ್ಥಿಕವಾಗಿ, ರಾಜಕೀಯವಾಗಿ ಅಲ್ಲದೆ ಸೇನೆಯನ್ನು ಬಳಸಿಕೊಂಡು ದಾಳಿ ಮಾಡುವ ಚೀನಾ ನರಿಬುದ್ಧಿಗೆ ಪ್ರತ್ಯುತ್ತರ ನೀಡಬೇಕಾದ ಪರಿಸ್ಥಿತಿ ಈಗ ಎದುರಾಗಿದೆ.

ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಪಾಕಿಸ್ತಾನ ಹಾಗೂ ಚೀನಾ ಗಡಿಗಳಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧರೊಬ್ಬರು ತಮ್ಮ ಅನಿಸಿಕೆಯನ್ನು ಈ ಸಂಜೆಯೊಂದಿಗೆ ಹಂಚಿಕೊಂಡಿದ್ದು ಹೀಗೆ…

ಯಾವ ಸಂದರ್ಭದಲ್ಲೂ ನಾವು ಚೀನಾವನ್ನು ನಂಬಲು ಸಾಧ್ಯವಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಕಳೆದ 1962ರಲ್ಲೂ ಇದೇ ರೀತಿ ದಂಡೆತ್ತಿ ಬಂದಿದ್ದ ಚೀನಾ ನಮ್ಮ ಹಿಮಾಚಲ ಪ್ರದೇಶದ ಕೆಲ ಭೂ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು.

ಅಕ್ಟೋಬರ್ 20 ರಿಂದ ನವೆಂಬರ್ 21ರ ವರೆಗೆ ಒಂದು ತಿಂಗಳ ಕಾಲ ನಡೆದ ಯುದ್ಧದಲ್ಲಿ ಭಾರತೀಯ ಯೋಧರು ಕೆಚ್ಚೆದೆಯಿಂದ ಹೋರಾಟ ನಡೆಸಿದರೂ ಚೀನಾದ ಕುತಂತ್ರ ಹಾಗೂ ಕೆಲ ರಾಷ್ಟ್ರಗಳ ಚಿತಾವಣೆಯಿಂದ ನಾವು ನಮ್ಮ ಭೂಮಿಯನ್ನು ಬಿಟ್ಟುಕೊಡಬೇಕಾಗಿತ್ತು.

ಆದರೆ, ಈಗ ಪರಿಸ್ಥಿತಿಯೇ ಬೇರೆ ಇದೆ. ಭಾರತದ ಆರ್ಥಿಕತೆಗೆ ಪೆಟ್ಟು ಕೊಡಲು ಪಾಕಿಸ್ತಾನವನ್ನು ಬಳಸಿಕೊಂಡು ಕೋಟಾನೋಟುಗಳನ್ನು ಸರಬರಾಜು ಮಾಡುವುದರ ಜತೆಗೆ ಶಸ್ತ್ರಾಸ್ತ್ರಗಳನ್ನೂ ನೀಡುತ್ತಿವೆ. ಇದು ಹಲವು ಬಾರಿ ಸಾಬೀತು ಕೂಡ ಆಗಿದೆ.

ಇತ್ತೀಚೆಗೆ ಜಾಗತಿಕವಾಗಿ ತನ್ನ ಪ್ರಾಬಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ಭಾರೀ ಸಂಚಲನ ಸೃಷ್ಟಿಸಿ ಉತ್ಪಾದನಾ ವಲಯವನ್ನು ಹೆಚ್ಚಿಸಿರುವ ಚೀನಾ ಎಲ್ಲ ಏಷ್ಯಾ ಸೇರಿದಂತೆ ಎಲ್ಲ ರಾಷ್ಟ್ರಗಳಲ್ಲೂ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ತಂತ್ರಗಾರಿಕೆ ನಡೆಸುತ್ತಿದೆ.

ಭಾರತ ನೆರೆರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕೆಂದು ಬಯಸಿದರೆ, ಚೀನಾ ಅದಕ್ಕೆ ವಿರುದ್ಧವಾಗಿ ಶ್ರೀಲಂಕಾ, ನೇಪಾಳ, ಮಲೇಷಿಯಾ, ಮಯನ್ಮಾರ್ ಸೇರಿದಂತೆ ಹಲವು ರಾಷ್ಟ್ರಗಳನ್ನು ಎತ್ತಿ ಕಟ್ಟಿ ಸಂಬಂಧ ಹಾಳುಮಾಡುವ ಪ್ರಯತ್ನವನ್ನು ಮುಂದುವರಿಸಿಕೊಂಡು ಬಂದಿದೆ.

ಪ್ರಸ್ತುತ ಭಾರತ ಜಾಗೃತವಾಗಿ ಚೀನಾಗೆ ತಕ್ಕ ಶಾಸ್ತಿ ಮಾಡಬೇಕಾದರೆ ಅವರ ಉತ್ಪನ್ನಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಅದರಲ್ಲಿ ಅಗ್ಗ ಹಾಗೂ ಕಳಪೆ ಗುಣಮಟ್ಟದ ಆಟಿಕೆಗಳು ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಬಗ್ಗೆ ಅತಿ ಹೆಚ್ಚು ಗಮನ ಹರಿಸಬೇಕಿದೆ.

ಲಡಾಖ್‍ನಲ್ಲಿ ನಡೆದಿರುವ ಸೈನಿಕರ ಘರ್ಷಣೆ ಘಟನೆ ಅಂದುಕೊಂಡಂತೆ ನಡೆದಿಲ್ಲ. ಅಲ್ಲಿ ಭಾರತದ ಶಾಂತಿ ಸ್ವಭಾವವನ್ನು ಕೆರಳಿಸುವ ದುಸ್ಸಾಹಸ ಮಾಡಲಾಗಿದೆ ಎಂಬುದು ಬಹಿರಂಗಗೊಂಡಿದೆ. ಪಾಕಿಸ್ತಾನದ ಪಾಪಿ ಕೃತ್ಯಗಳನ್ನು ನೋಡಿ ನಮ್ಮ ರಕ್ತ ಕುದಿಯುತ್ತದೆಯೋ ಅದೇ ರೀತಿ ಹಿಂಬದಿಯಿಂದ ಬೆನ್ನಿಗೆ ಚೂರಿ ಹಾಕಿ ಭಾರತವನ್ನು ದುರ್ಬಲ ಮಾಡುವ ಪ್ರಯತ್ನ ನಡೆಸುವ ಚೀನಾವೇ ನಮ್ಮ ಶತ್ರು ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ.

Facebook Comments