ಟೆಸ್ಟ್ ಚಾಂಪಿಯನ್ಸ್ ಫೈನಲ್ಸ್’ಗೇರಲು ಭಾರತ ಕಾತರ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಫೆ.4- ಆಸೀಸ್ ನಾಡಿನಲ್ಲಿ ಕೆಚ್ಚೆದೆಯ ಆಟ ಪ್ರದರ್ಶಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದ ಕೊಹ್ಲಿ ಹುಡುಗರು ಈಗ ತವರಿನಲ್ಲೇ ಇಂಗ್ಲೆಂಡ್ ತಂಡವನ್ನು ಮಣಿಸಿ ಟೆಸ್ಟ್ ಚಾಂಪಿಯನ್ಸ್ ಫೈನಲ್ಸ್‍ಗೇರಲು ಕಾತರಿಸುತ್ತಿದೆ. ಈಗಾಗಲೇ ಕೇನ್‍ವಿಲಿಯಮ್ಸ್ ನಾಯಕತ್ವದ ನ್ಯೂಜಿಲ್ಯಾಂಡ್ ತಂಡವು ಟೆಸ್ಟ್ ಚಾಂಪಿಯನ್ಸ್ ಫೈನಲ್‍ಗೆ ಮೊದಲ ತಂಡವಾಗಿ ಲಗ್ಗೆ ಇಟ್ಟಿದ್ದು, ಉಳಿದಿರುವ ಒಂದು ಸ್ಥಾನಕ್ಕೆ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಪೈಪೋಟಿ ಏರ್ಪಟ್ಟಿದೆ.

ಭಾರತ ತಂಡವು ಇಂಗ್ಲೆಂಡ್ ಸರಣಿಯನ್ನು 2-0 ಅಥವಾ 3-1 ರಿಂದ ಗೆದ್ದರೆ ಸುಲಭವಾಗಿ ಫೈನಲ್ ಪ್ರವೇಶಿಸಲಿದೆ, ಒಂದು ವೇಳೆ ಇಂಗ್ಲೆಂಡ್ 4-0 ಯಿಂದ ವಿರಾಟ್ ಕೊಹ್ಲಿ ಪಡೆಯನ್ನು ಮಣಿಸಿದರೆ ಆಗ ಫೈನಲ್‍ಗೇರಲು ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ.

13ನೆ ಸರಣಿ ಗೆಲ್ಲುವುದೇ ಭಾರತ..?
ದೇಶಿಯ ಪಿಚ್‍ಗಳಲ್ಲಿ ಗೆಲುವಿನ ಸವಿಯನ್ನೇ ಹೆಚ್ಚಾಗಿ ಸವಿದಿರುವ ಭಾರತ ತಂಡವು ಇದುವರೆಗೂ ತವರಿನಲ್ಲಿ 9 ವರ್ಷಗಳಲ್ಲಿ 12 ಸರಣಿಗಳನ್ನು ಗೆದ್ದು ಬೀಗಿದ್ದು, ಈಗ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಗೆದ್ದು 13ನೆ ಸರಣಿ ಗೆಲ್ಲಲು ಕೊಹ್ಲಿ ಬಾಯ್ಸ್ ರೆಡಿಯಾಗಿದ್ದಾರೆ.

ಇಂಗ್ಲೆಂಡ್‍ಗೆ ಮಿಶ್ರಫಲ:
ಜೋ ರೂಟ್ ನಾಯಕತ್ವದಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿರುವ ಏಕದಿನ ಕ್ರಿಕೆಟ್‍ನ ವಿಶ್ವಚಾಂಪಿಯನ್ಸ್ ಆಗಿರುವ ಇಂಗ್ಲೆಂಡ್ ಕಳೆದ ಕೆಲವು ಸರಣಿಗಳಲ್ಲಿ ಗೆಲುವಿನ ಓಟ ಮುಂದುವರಿಸಿದ್ದು ಈಗ ಭಾರತ ವಿರುದ್ಧವೂ ಟೆಸ್ಟ್ ಗೆಲ್ಲುವ ಲೆಕ್ಕಾಚಾರದಲ್ಲಿ ಮುಳುಗಿದೆ.

2012ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್, ಟೀಂ ಇಂಡಿಯಾವನ್ನು 2-1 ರಿಂದ ಸೋಲಿಸಿದ್ದರೆ, 2016-17ರಲ್ಲಿ ಭಾರತ ತಂಡದ ವಿರುದ್ಧ 4-0ಯಿಂದ ಹೀನಾಯ ಸೋಲು ಕಂಡಿರುವುದರಿಂದ ಆ ತಂಡವು ಗೆಲುವು, ಸೋಲಿನ ಮಿಶ್ರಫಲ ಅನುಭವಿಸಿದೆ. ನಾಲ್ಕು ವರ್ಷಗಳ ನಂತರ ಭಾರತ ದ ನೆಲದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದ್ದು ಗೆಲುವು ಪಡೆಯಲು ಕೊಹ್ಲಿ, ರೂಟ್ ಪಡೆಗಳು ಜಿದ್ದಾಜಿದ್ದಿನ ಹೋರಾಟ ನಡೆಸಲಿವೆ.

ಬಲಿಷ್ಠ ಭಾರತ:
ಆಸ್ಟ್ರೇಲಿಯಾ ಸರಣಿ ಗೆದ್ದ ಸಂಭ್ರಮದಲ್ಲಿರುವ ಕೊಹ್ಲಿ ಹುಡುಗರು ದೇಶಿಯ ಪಿಚ್‍ಗಳಲ್ಲಿ ಬಲಿಷ್ಠ ತಂಡವೆಂದೆನಿಸಿದೆ. 2013ರಿಂದ ಇದುವರೆಗೂ ಭಾರತ ತಂಡವು ದೇಶಿ ನೆಲದಲ್ಲಿ ಆಡಿರುವ 34 ಟೆಸ್ಟ್ ಪಂದ್ಯಗಳಲ್ಲಿ 28 ಗೆಲುವು, 5 ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದ್ದರೆ ಸೋತಿರುವುದು ಕೇವಲ ಒಂದೇ ಪಂದ್ಯದಲ್ಲಿ.

ಭಾರತ- ಇಂಗ್ಲೆಂಡ್ ಬಲಾಬಲ:
ಒಟ್ಟು ಪಂದ್ಯ:122
ಭಾರತ ಗೆಲುವು:26
ಇಂಗ್ಲೆಂಡ್ ಜಯ:47
ಡ್ರಾ:49

Facebook Comments