2ನೇ ಟೆಸ್ಟ್ : ಭಾರತಕ್ಕೆ 8 ವಿಕೆಟ್‍ಗಳ ಭರ್ಜರಿ ಗೆಲುವು, ಸರಣಿ ಸಮಬಲ

ಈ ಸುದ್ದಿಯನ್ನು ಶೇರ್ ಮಾಡಿ

ಮೆಲ್ಬೋರ್ನ್, ಡಿ.29- ಬಾರ್ಡರ್-ಗವಾಸ್ಕರ್ ಟ್ರೋಫಿಯ 2ನೇ ಟೆಸ್ಟ್ ಅನ್ನು 8 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ರವಾಸಿ ಭಾರತ ತಂಡ ಸರಣಿಯನ್ನು 1-1 ರಲ್ಲಿ ಸಮವಾಗಿಸಿದೆ. ಪಂದ್ಯ ಗೆಲ್ಲಲು ಕೇವಲ 70 ರನ್‍ಗಳ ಗುರಿಯನ್ನು ಹೊಂದಿದ್ದ ಭಾರತ ಎರಡು ವಿಕೆಟ್ ಕಳೆದುಕೊಂಡು ಗೆಲುವನ್ನು ದಾಖಲಿಸಿದೆ. ನಾಲ್ಕನೇ ದಿನದ ಆರಂಭದಲ್ಲಿ ಮಯಾಂಕ್ ಅಗರ್‍ವಾಲ್ (5) ಮತ್ತು ಚೇತೇಶ್ವರ್ ಪೂಜಾರ (3) ಅವರ ವಿಕೆಟ್ ಕಳೆದುಕೊಂಡು ಒಂದು ರೀತಿ ಭಯದ ವಾತಾವರಣದಲ್ಲಿದ್ದ ತಂಡವನ್ನು ನಾಯಕ ಅಜಿಂಕ್ಯ ರಹಾನೆ ಮತ್ತು ಶುಭ್‍ಮನ್ ಗಿಲ್ ಗೆಲುವಿನತ್ತ ಮುನ್ನಡೆಸಿದರು.

ಅಡಿಲೇಡ್‍ನಲ್ಲಿ ನಡೆದ ಪ್ರಥಮ ಪಿಂಕ್ ಬಾಲ್ ಟೆಸ್ಟ್ಲ್‍ನಲ್ಲಿ 2ನೇ ಇನ್ನಿಂಗ್ಸ್‍ನಲ್ಲಿ ಭಾರತ ತಂಡ ಕೇವಲ 36 ರನ್‍ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಂಡಿತ್ತು. ಕಳೆಪೆ ಪ್ರದರ್ಶನದಿಂದ ಅತಿ ಕಡಿಮೆ ರನ್‍ಗಳಲ್ಲಿ ಸೋತು ದಾಖಲೆ ನಿರ್ಮಿಸಿದ್ದ ಭಾರತ ತಂಡಕ್ಕೆ ಮೊದಲ ಟೆಸ್ಟ್ ಆಘಾತ ತಂದಿತ್ತು.

ನಂತರ ಬ್ಯಾಟಿಂಗ್‍ಗೆ ಇಳಿದ ನಾಯಕ ಅಜಿಂಕ್ಯ ರಹಾನೆ 27 ರನ್ ಗಳಿಸಿದರೆ, ಆರಂಭಿಕ ಬ್ಯಾಟ್ಸ್‍ಮನ್ ಶುಭ್‍ಮನ್ ಗಿಲ್ 35 ರನ್ ಗಳಿಸುವ ಮೂಲಕ 2ನೇ ಟೆಸ್ಟ್ ಗೆಲುವನ್ನು ದಾಖಲಿಸಿದರು. ಆ ಮೂಲಕ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿ ಜೀವಂತವಾಗಿರಿಸಿಕೊಂಡರು.

2ನೇ ಟೆಸ್ಟ್‍ನಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಮೊಹಮ್ಮದ್ ಸಿರಾಜ್ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನಸೆಳೆದರು. ಅವರು 37 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಜಸ್‍ಪ್ರಿತ್ ಬುಮ್ರಾ 54 ರನ್ ನೀಡಿ 2 ವಿಕೆಟ್ ಪಡೆದರು. ಸ್ಪಿನ್ನರ್ ರವೀಂದ್ರ ಜಡೇಜಾ (2/28) ಹಾಗೂ ರವಿಚಂದ್ರನ್ ಅಶ್ವಿನ್ 71 ರನ್ ನೀಡಿ 2 ವಿಕೆಟ್ ಪಡೆದರು.

ಸ್ಕೋರ್ ವಿವರ: ಆಸ್ಟ್ರೇಲಿಯಾ: 103.1 ಓವರ್‍ಗಳಲ್ಲಿ 195 ಮತ್ತು 200 (ಸಿ.ಗ್ರೀನ್ 45, ಎಂ. ವೇಡ್ 40, ಎಂ. ಲಾಬುಸ್ಚಾಗ್ನೆ 28) ಬೌಲಿಂಗ್: ಸಿರಾಜ್ 3,37, ಜಡೇಜಾ 2/28, ಬುಮ್ರಾ 2/54.
ಭಾರತ: 326 ಮತ್ತು 70 (2 ವಿಕೆಟ್ 15.5 ಓವರ್ಸ್), ಶುಭ್‍ಮನ್ ಗಿಲ್ 35, ಎ. ರಹಾನೆ 27 (ಔಟಾಗದೆ). ಬೌಲಿಂಗ್: ಎಂ. ಸ್ಟಾರ್ಕ್ 1/20, ಪಿ. ಕಮ್ಮಿನ್ಸ್ 1/22.

Facebook Comments