ಪಾಕ್ ವಿರುದ್ಧ ದಿಗ್ವಿಜಯ ಕುರಿತು ನಾಯಕ ಕೊಹ್ಲಿ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಮ್ಯಾಂಚೆಸ್ಟರ್, ಜೂ.17- ಟಾಸ್ ಗೆದ್ದಿದ್ದರೆ ನಾನು ಕೂಡ ಕ್ಷೇತ್ರ ರಕ್ಷಣೆ ಆಯ್ದುಕೊಳ್ಳುತ್ತಿದ್ದೆ. ಆದರೆ ರೋಹಿತ್ ಶರ್ಮ ಅವರ ಅತ್ಯುತ್ತಮ ಆಟ ನೋಡಿ ಮತ್ತೊಮ್ಮೆ ಬೆರಗಾಗಿದ್ದೇನೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನ ವಿರುದ್ಧ 89 ರನ್‍ಗಳ ಅಂತರದಿಂದ ಜಯ ಗಳಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಾ , ರೋಹಿತ್ ಆಟವನ್ನು ಮನಸಾರೆ ಹೊಗಳಿದರು.

ಪಂದ್ಯ ಆರಂಭಕ್ಕೆ ಮುನ್ನ ನಮಗೆ ಮಳೆ ಸುರಿಯುವ ವಿಷಯ ಗೊತ್ತಿತ್ತು. ಆದ್ದರಿಂದ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಪಾಕಿಸ್ತಾನವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ನಂತರ ಗೆಲವು ಪಡೆಯಲು ನಿರ್ದಿಷ್ಟ ತಂತ್ರ ರೂಪಿಸುವುದು ನನ್ನ ಇರಾದೆಯಾಗಿತ್ತು.

ಆದರೂ ಪರವಾಗಿಲ್ಲ. ರೋಹಿತ್ ಶರ್ಮ ಮತ್ತು ಕೆ.ಎಲ್.ರಾಹುಲ್ ಅವರು ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ನಾವು ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಅಂತಿಮ 5 ಓವರ್‍ಗಳಲ್ಲಿ ಆಕ್ರಮಣಕಾರಿ ಆಟಕ್ಕೆ ಚಿಂತಿಸಿದ್ದೆವು.

ತಂಡವನ್ನು 350ರ ಗಡಿಗೆ ಮುಟ್ಟಿಸುವ ಗುರಿ ಇತ್ತು. ಆದರೂ ಸಾಧ್ಯವಾಗಲಿಲ್ಲ. ಆದರೆ ನಾವು 336 ರನ್ ದಾಖಲಿಸಿದ್ದು ನಮಗೆ ಗೆಲುವಿನ ಮೊತ್ತ ಎಂದು ಅನಿಸಿತ್ತು. ಪಾಕಿಸ್ತಾನ ಬ್ಯಾಟಿಂಗ್ ಆರಂಭದಲ್ಲಿ ಉತ್ತಮವಾಗಿತ್ತು. ಆದರೆ ಕುಲ್‍ದೀಪ್ ಯಾದವ್ ಚೆಂಡಿನ ಮೇಲೆ ಹಿಡಿತ ಸಾಧಿಸಿ ಪ್ರಮುಖ ವಿಕೆಟ್‍ಗಳನ್ನು ಕೆಡವಿದರು.

ವಿಜಯಶಂಕರ್ ಕೂಡ ಅದೃಷ್ಟ ಖುಲಾಯಿಸಿತ್ತು. ಹಾರ್ದಿಕ್ ಪಾಂಡ್ಯ ಕೂಡ ನಿರ್ಣಾಯಕ ಹಂತದಲ್ಲಿ ಎರಡು ವಿಕೆಟ್ ಉರುಳಿಸಿದ್ದು ಕೂಡ ಪಂದ್ಯದ ದಿಕ್ಕು ಬದಲಿಸಿತು ಎಂದು ಹೇಳಿದರು.

ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದ ರೋಹಿತ್ ಶರ್ಮ ಮಾತನಾಡಿ, ನಾನು ನಿಜ ಹೇಳಬೇಕೆಂದರೆ ತ್ರಿಶತಕ ಬಾರಿಸಬೇಕೆಂದು ನಿರ್ಧರಿಸಿರಲಿಲ್ಲ. ಆದರೆ ದೊಡ್ಡ ಮೊತ್ತವನ್ನು ಕಲೆ ಹಾಕಬೇಕೆಂಬ ದೃಢ ಸಂಕಲ್ಪ ಮಾಡಿದ್ದೆ. ನಾನು ಔಟಾದ ಬಗೆ ನನಗೆ ತೀವ್ರ ನಿರಾಸೆಯಾಗಿದ್ದು ನಿಜ ಎಂದು ಹೇಳಿದರು.

Facebook Comments

Sri Raghav

Admin