ಲಡಾಖ್ ಗಡಿಯಲ್ಲಿ ಯುದ್ಧೋನ್ಮಾದ, ಭಾರತ-ಚೀನಾ ಸೇನೆ ಗುಂಡಿನ ಚಕಮಕಿ..!

ಈ ಸುದ್ದಿಯನ್ನು ಶೇರ್ ಮಾಡಿ

ಪ್ಯಾನ್‍ಗಾಂಗ್ ಸರೋವರ/ನವದೆಹಲಿ, ಸೆ.8-ಭಾರತ-ಚೀನಾ ನಡುವಣ ಆತಂಕಕಾರಿ ಸಂಘರ್ಷಕ್ಕೆ ಕಾರಣವಾಗಿರುವ ಪೂರ್ವ ಲಡಾಖ್ ಗಡಿಯಲ್ಲಿ ನಿನ್ನೆ ರಾತ್ರಿ ಉಭಯ ದೇಶಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಘಟನೆಯಿಂದಾಗಿ ಪ್ಯಾನ್‍ಗಾಂಗ್ ಸರೋವರ ಪ್ರದೇಶದಲ್ಲಿ ಭಾರೀ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದು, ಕದನದ ಕಾರ್ಮೋಡಗಳು ಮತ್ತಷ್ಟು ದಟ್ಟವಾಗುತ್ತಿವೆ.

ಪೂರ್ವ ಲಡಾಖ್‍ನಲ್ಲಿ ಕಳೆದ ಮೂರು ತಿಂಗಳಿನಿಂದಲೂ ಏಷ್ಯಾದ ಎರಡು ಪ್ರಬಲ ದೇಶಗಳ ನಡುವೆ ಭಾರೀ ವಿವಾದಕ್ಕೆ ಕಾರಣವಾಗಿರುವ ಪೂರ್ವ ಲಡಾಖ್‍ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‍ಎಸಿ) ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ) ನಡುವೆ ತಡ ರಾತ್ರಿ ಮತ್ತೆ ಗುಂಡಿನ ಚಕಮಕಿ ನಡೆದಿರುವುದು ಆತಂಕಕಾರಿ ಸಂಗತಿಯಾಗಿದೆ.

ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿರುವ ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿ ಭಾರತೀಯ ಯೋಧರು ಚೀನಿ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ಪಿಎಲ್‍ಎ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಚೀನಾ ಸೇನಾಪಡೆಗಳಿಂದ ಪ್ರತಿಯಾಗಿ ಗುಂಡಿನ ದಾಳಿ ನಡೆಸಲಾಗಿದ್ದು, ಪ್ರಚೋದನಾಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಬೆಳವಣಿಗೆಯಿಂದಾಗಿ ಪ್ಯಾಂಗಾಂಗ್ ಸರೋವರದ ಬಳಿ ಮತ್ತೊಮ್ಮೆ ಯುದ್ಧೋನ್ಮಾದ ವಾತಾವರಣ ಸೃಷ್ಟಿಯಾಗಿದೆ. ಪೂರ್ವ ಲಡಾಖ್‍ನಲ್ಲಿ ಅತ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎಂಬುದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಒಪ್ಪಿಕೊಂಡಿದ್ದಾರೆ.

ಆದಾಗ್ಯೂ ಇಂಡೋ-ಚೀನಾ ಗಡಿ ಭಾಗದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ತಿಳಿಗೊಳಿಸಲು ಉಭಯ ದೇಶಗಳ ನಡುವಣ ಕಮ್ಯಾಂಡರ್‍ಗಳು ಮತ್ತು ಸಭೆ ಸೇರಿ ಮಾತುಕತೆ ಮುಂದುವರಿಸಿದ್ದಾರೆ.

# ಚೀನಾ ಆರೋಪ:
ಭಾರತೀಯ ಯೋದರು ನಿಯಮ ಉಲ್ಲಂಘಿಸಿ ಎಲ್‍ಎಸಿ ದಾಟಿ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಸ್ಥಿತಿ ಸ್ಥಿರಗೊಳಿಸಲು ಪ್ರತಿರೋಧ ಕ್ರಮಗಳನ್ನು ಕೈಗೊಳ್ಳುವಂತೆ ಚೀನಾ ಗಡಿ ಭದ್ರತಾ ಪಡೆಗೆ ಸೂಚನೆ ನೀಡಿರುವುದಾಗಿ ಪೀಪಲ್ಸ್ ಲಿಬರೇಷನ್ ಆರ್ಮಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಭಾರತೀಯ ಸೇನಾ ಪಡೆ ಕಾನೂನು ಬಾಹಿರವಾಗಿ ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿದ್ದು, ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆ ಮತ್ತು ಶೆನ್ ಪೂ ಪರ್ವತ ಪ್ರದೇಶವನ್ನು ಅತಿಕ್ರಮವಾಗಿ ಪ್ರವೇಶಿಸಿದೆ ಎಂಬುದು ಪಿಎಲ್‍ಎ ಆರೋಪ.

ಈ ಸಂದರ್ಭದಲ್ಲಿ ಚೀನಾ ಗಡಿ ಭದ್ರತಾ ಪಡೆಗಳ ಮೇಲೆ ಭಾರತೀಯ ಯೋಧರು ಗುಂಡಿನ ದಾಳಿ ನಡೆಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರತಿರೋಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತನ್ನ ಗುಂಡಿನ ದಾಳಿ ಕ್ರಮವನ್ನು ಚೀನಾ ಉನ್ನತ ಸೇನಾಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದಾರೆ.  ಗಂಭೀರ ರೀತಿಯ ಪ್ರಚೋದನಾಕಾರಿ ಕ್ರಮಗಳು ಅತ್ಯಂತ ಕೆಟ್ಟ ವರ್ತನೆ ಎಂದು ಆರೋಪಿಸಿರುವ ಚೀನಾ, ಅಪಾಯಕಾರಿ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕೆಂದು ಭಾರತಕ್ಕೆ ಮನವಿ ಮಾಡಿದೆ.

# ವಿಶ್ವಸಂಸ್ಥೆ ಕಳವಳ:
ನಿನ್ನೆ ತಡರಾತ್ರಿ ಭಾರತ-ಚೀನಾ ಸೇನಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದು ಪೂರ್ವ ಲಡಾಖ್ ಗಡಿ ಭಾಗ ಮತ್ತಷ್ಟು ಪ್ರಕ್ಷುಬ್ಧಗೊಂಡಿರುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.  ಉಭಯ ದೇಶಗಳು ಪೂರ್ವ ಲಡಾಖ್ ಪ್ರದೇಶದಲ್ಲಿ ಗರಿಷ್ಠ ಸಂಯಮ ಕಾಯ್ದುಕೊಳ್ಳುವಂತೆ ತಿಳಿಸಿದೆ.

ಈ ಮಧ್ಯೆ, ಇಂಡೋ-ಚೀನಾ ಗಡಿ ಬಿಕ್ಕಟ್ಟಿನ ಬಗ್ಗೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಅಲ್ಲಿನ ಪರಿಸ್ಥಿತಿ ಅತ್ಯಂತ ಉದ್ವಿಗ್ನವಾಗಿದೆ. ಪ್ರಕ್ಷುಬ್ಧ ಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನಗಳು ಮುಂದುವರಿದಿವೆ ಎಂದು ಹೇಳಿದ್ದಾರೆ.  ಈ ಎಲ್ಲ ಬೆಳವಣಿಗೆಗಳ ನಡುವೆ ಉಭಯ ದೇಶಗಳ ಉನ್ನತ ಸೇನಾಧಿಕಗಳು ಇಂದು ಬೆಳಗ್ಗೆಯಿಂದ ಗಡಿ ಬಿಕ್ಕಟ್ಟು ಶಮನಗೊಳಿಸಲು ಮಾತುಕತೆ ಮುಂದುವರಿಸಿದ್ದಾರೆ.

Facebook Comments