ಲಡಾಕ್‍ಗೆ ಹೆಚ್ಚುವರಿ ಸೇನಾ ಪಡೆ ರವಾನಿಸದಿರಲು ಭಾರತ -ಚೀನಾ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ ಬೀಜಿಂಗ್, ಸೆ.23- ಪೂರ್ವ ಲಡಾಕ್‍ನ ಇಂಡೋ-ಚೀನಾ ಗಡಿಯಲ್ಲಿ ಉಭಯ ದೇಶಗಳ ಮಧ್ಯೆ ಭುಗಿಲೆದ್ದಿರುವ ಗಡಿ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಚೀನಾ ನಡುವೆ ನಿರಂತರ ಮಾತುಕತೆ ಮುಂದುವರೆದಿದೆ.

ಇದೇ ವೇಳೆ ಪೂರ್ವ ಲಡಾಕ್‍ನ ಪ್ಯಾನ್ ಗಾಂಗ್ ಸರೋವರ ಪ್ರದೇಶ ಸೇರಿದಂತೆ ವಾಸ್ತವ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ಹೆಚ್ಚುವರಿ ಸೇನಾ ಪಡೆಗಳನ್ನು ಮತ್ತೆ ರವಾನಿಸದಿರಲು ಉಭಯ ದೇಶಗಳು ಸಮ್ಮತಿಸಿವೆ.

ಇದರಿಂದಾಗಿ ಕಳೆದ ಕೆಲವು ತಿಂಗಳಿನಿಂದ ಪೂರ್ವ ಲಡಾಕ್‍ನಲ್ಲಿ ಕವಿದಿದ್ದ ಯುದ್ಧದ ದಟ್ಟ ಕಾರ್ಮೋಡಗಳು ಚದುರುವ ಆಶಾ ಭಾವನೆ ವ್ಯಕ್ತವಾಗಿದೆ. ಇಂಡೋ-ಚೀನಾ ಗಡಿ ಭಾಗದಲ್ಲಿ ಉಭಯ ದೇಶಗಳು ಹೆಚ್ಚುವರಿ ಸೇನೆಯನ್ನು ನಿಯೋಜಿಸುವುದು ಬೇಡ ಎಂಬುದು ಸೇರಿದಂತೆ ಉದ್ವಿಗ್ನತೆ ಉಪ ಶಮನಕ್ಕಾಗಿ ಕೆಲವು ಮಹತ್ವದ ನಿರ್ಧಾರಗಳನ್ನು ಉಭಯ ದೇಶಗಳು ಅನುಸರಿಸುತ್ತಿವೆ.

ಭಾರತ ಮತ್ತು ಕಮ್ಯುನಿಸ್ಟ್ ದೇಶದ ನಡುವೆ ನಡೆಯುತ್ತಿರುವ ನಿರಂತರ ಮಾತುಕತೆ ಪೂರ್ಣ ಫಲಪ್ರದವಾಗದಿರಲು ಮತ್ತೆ ಪ್ರಕ್ಷುಬ್ಧ ಪರಿಸ್ಥಿತಿಗೆ ಕಾರಣವಾಗುವ ಘಟನೆಗಳಿಗೆ ಅವಕಾಶ ನೀಡುವುದು ಬೇಡ ಎಂಬ ಮಹತ್ವದ ನಿರ್ಧಾರಕ್ಕೆ ಉಭಯ ದೇಶಗಳು ಬಂದಿವೆ.

ಈ ಮಧ್ಯೆ ಬೀಜಿಂಗ್‍ನಲ್ಲಿ ಹೇಳಿಕೆ ನೀಡಿರುವ ಚೀನಾ ಸರ್ಕಾರ ಭಾರತ ಸರ್ಕಾರದೊಂದಿಗೆ ನಿರಂತರ ಮಾತುಕತೆ ಮುಂದುವರೆಸಿ ಗಡಿ ಬಿಕ್ಕಟ್ಟು ಶಮನಕ್ಕೆ ಶ್ರಮಿಸುವುದಾಗಿ ಹೇಳಿಕೆ ನೀಡಿದೆ. ಮತ್ತೊಂದು ಹೇಳಿಕೆಯಲ್ಲಿ ಚೀನಿ ಅಧ್ಯಕ್ಷ ಷಿ ಜಿಂಗ್ ಪಿಂಗ್ ನಾವು ಯಾರೊಂದಿಗೂ ಶೀತಲ ಅಥವಾ ನೇರ ಸಮರ ಮಾಡಲು ಬಯಸುವುದಿಲ್ಲ. ನಾವು ಕೂಡ ಶಾಂತಿಯನ್ನು ಹಂಬಲಿಸುತ್ತೇವೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಇಂದೂ ಕೂಡ ಉಭಯ ದೇಶಗಳ ನಡುವೆ ಮಹತ್ವದ ಮಾತುಕತೆ ಮುಂದುವರೆದಿದೆ. ಆದರೆ ಗಡಿಯಲ್ಲಿ ಇನ್ನು ಚೀನಾ ಸೈನಿಕರ ಜಮಾವಣೆ ಹೆಚ್ಚುತ್ತಿರುವುದು ಆತಂಕ ಸೃಷ್ಟಿಸಿದೆ. ತನ್ನ ವಾಯು ನೆಲೆಗಳನ್ನು ದುಪ್ಪಟ್ಟು ಮಾಡಿಕೊಂಡು ಶಸ್ತ್ರಾಸ್ತ್ರಗಳನ್ನು ಶೇಖರಣೆ ಮಾಡುವ ಕಾರ್ಯವು ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಕೂಡ ಕಟ್ಟೆಚ್ಚರ ವಹಿಸುತ್ತಿದೆ.

ಈಗಾಗಲೇ ಫೆಸಿಫಿಕ್ ಸಾಗರದಲ್ಲಿ ಚೀನಾ ನೌಕಾ ದಳ ಸಮರಾಭ್ಯಾಸ ನಡೆಸುತ್ತಿದ್ದು , ಯುದ್ಧೋತ್ಸಹದಲ್ಲಿ ಇದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

Facebook Comments