ಭಾರತ- ಚೀನಾ ಕಮಾಂಡರ್‌ಗಳ ನಡುವೆ ಸುದೀರ್ಘ 15 ಗಂಟೆಗಳ ಕಾಲ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.15- ಗಡಿಯಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಭಾರತ ಮತ್ತು ಚೀನಾ ದೇಶಗಳ ಲೆಫ್ಟಿನೆಂಟ್ ಜನರಲ್‍ಗಳ ಮಟ್ಟದ ಕಮಾಂಡರ್‍ಗಳ ನಡುವೆ ಸುದೀರ್ಘ 15 ಗಂಟೆಗಳ ಕಾಲ ಸಭೆ ನಡೆದಿದೆ.

ಸುಧೀರ್ಘವಾದ ಮ್ಯಾರಥಾನ್ ಸಭೆ ಬುಧವಾರ ಮುಂಜಾನೆ 2 ಗಂಟೆವರೆಗೂ ನಡೆದಿತ್ತು. ಸಭೆಯಲ್ಲಿನ ಚರ್ಚೆಗಳು ಸಕಾರಾತ್ಮಕವಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಭೆಯ ಬಳಿಕ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‍ಎಸಿ)ನಿಂದ ಎರಡು ದೇಶಗಳು ತಮ್ಮ ಸೇನೆ ಮತ್ತು ಯುದ್ಧ ಸಾಧನಗಳನ್ನು ಯಾವ ರೀತಿ ಹಿಂತೆಗೆದುಕೊಳ್ಳಲಿವೆ ಎಂದು ಕಾದು ನೋಡಬೇಕಿದೆ.

ಎರಡು ದೇಶಗಳು ಪರಮಾಣು ಶಕ್ತಿ ಹೊಂದಿದ್ದು, ಅಂತರಾಷ್ಟ್ರೀಯ ಕಟ್ಟಳೆಗಳಿಗೆ ಬದ್ಧವಾಗಿವೆ. ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ಅಪ್ರಚೋದಿತ ದಾಳಿ ನಡೆಸಿದ್ದು, ಅದರ ಬೆನ್ನಲ್ಲೇ ಮಾರಣಾಂತಿಕ ಘಟನೆಗಳು ನಡೆದು ಸಂಘರ್ಷಮಯ ವಾತಾವರಣ ನಿರ್ಮಾಣವಾಗಿತ್ತು.

ಲೆಹ್‍ನಿಂದ ಆಗ್ನೇಯಕ್ಕೆ 200 ಕಿ.ಮೀ ದೂರದಲ್ಲಿರುವ ಚುಶುಲïನಲ್ಲಿ ಮಂಗಳವಾರ ಬೆಳಿಗ್ಗೆ 11.30 ಕ್ಕೆ ಪ್ರಾರಂಭವಾದ ಸಭೆ ಬುಧವಾರ ಮುಂಜಾನೆ 2 ಗಂಟೆಗೆ (ಬೀಜಿಂಗ್‍ನ ಸಮಯ ಮುಂಜಾನೆ 4.30 ರ ಸುಮಾರಿಗೆ) ಮುಕ್ತಾಯಗೊಂಡಿದೆ ಎಂದು ಮೂಲಗಳು ತಿಳಿಸಿವೆ.

45,000 ಕ್ಕೂ ಹೆಚ್ಚು ಸೈನಿಕರು, ನೂರಾರು ಫಿರಂಗಿ ಬಂದೂಕುಗಳು ಮತ್ತು ಟ್ಯಾಂಕರ್‍ಗಳು, ರಾಕೆಟ್ ಲಾಂಚರ್‍ಗಳು, ಕ್ಷಿಪಣಿಗಳು, ಫೈಟರ್ ಜೆಟ್‍ಗಳು, ವಾಯುಗಾಮಿ ಬಾಂಬರ್‍ಗಳು ಮತ್ತು ದಾಳಿ ಹೆಲಿಕಾಪ್ಟರ್‍ಗಳು ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದವು. ಸಭೆಯ ಬಳಿಕವೂ ಅವು ಸ್ಥಾನ ಬದಲಿಸಲಿಲ್ಲ.

ಮೂರು ಹಂತದ ಸಂಧಾನ ಪ್ರಕ್ರಿಯೆಯ ಎರಡನೇ ಭಾಗವಾಗಿ ಸಭೆ ನಡೆದಿದೆ. ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಎರಡೂ ಕಡೆಯವರು ಸಂಧಾನ ಮಾತುಕತೆಗೆ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗಿದೆ.

Facebook Comments

Sri Raghav

Admin