ಎಲ್ಲಾ ಪರಿಸ್ಥಿತಿ ಎದುರಿಸಲು ನಾವು ರೆಡಿ, ಭಾರತೀಯ ಸೇನೆ ಘರ್ಜನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.8- ದೇಶದ ಗಡಿ ರಕ್ಷಣೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ರಕ್ಷಣೆಗಾಗಿ ಅಗತ್ಯವಾದ ಎಲ್ಲ ಕ್ರಮಕ್ಕೂ ಸಿದ್ಧವಿರುವುದಾಗಿ ಭಾರತೀಯ ಸೇನಾ ಪಡೆ ಚೀನಾಗೆ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆ ನೀಡಿದೆ.

ಲಡಾಖ್‍ನ ವಾಸ್ತವ ನಿಯಂತ್ರಣ ರೇಖೆ (ಎಲ್‍ಎಸಿ) ದಾಟಿ ಭಾರತೀಯ ಯೋಧರು ನಮ್ಮ ಮೇಲೆ ಗುಂಡು ಹಾರಿಸಿ ಪ್ರಚೋದನಾತ್ಮಕ ಕ್ರಮ ಅನುಸರಿಸಿದ್ದಾರೆ ಎಂಬ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ(ಪಿಎಲ್‍ಎ) ಆರೋಪಿವನ್ನು ಭಾರತೀಯ ಸೇನಾ ಪಡೆ ಸ್ಪಷ್ಟವಾಗಿ ತಳ್ಳಿ ಹಾಕಿದೆ.

ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ಸೇನೆ. ನಮ್ಮ ಯೋಧರು ಎಲ್‍ಎಸಿ ದಾಟಿ ಚೀನಾ ಸೈನಿಕರ ಮೇಲೆ ಎಚ್ಚರಿಕೆ ಗುಂಡು ಹಾರಿಸಿಲ್ಲ ಮತ್ತು ಯಾವುದೇ ಪ್ರಚೋದಾತ್ಮಕ ಕ್ರಮಗಳನ್ನು ಅನುಸರಿಸಿಲ್ಲ. ಈ ಕುರಿತ ಪಿಎಲ್‍ಎ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದೆ.

ಗಡಿಯಲ್ಲಿ ನಾವು ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ. ಬದಲಿಗೆ ಚೀನಾದೊಂದಿಗೆ ಬಿಕ್ಕಟ್ಟು ನಿವಾರಣೆಗಾಗಿ ನಾವು ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆ ನಡೆಸುತ್ತಿರುವಾಗಲೇ ಪಿಎಲ್‍ಎ ಸೇನೆ ಎಲ್‍ಎಸಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡು ಚಟುವಟಿಕೆಗಳನ್ನು ಬಿರುಸುಗೊಳಿಸಿ ಯಥಾಸ್ಥಿತಿಯ ನೀತಿ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಭಾರತೀಯ ಸೇನೆ ಆರೋಪಿಸಿದೆ.

ಚೀನಾ ನಮ್ಮ ಮೇಲೆ ಪ್ರಚೋದನಾಕಾರಿ ಕ್ರಮಗಳನ್ನು ಕೈಗೊಂಡಿದ್ದರೂ ನಾವು ಸಂಯಮದಿಂದ ವರ್ತಿಸಿದ್ದೇವೆ. ಅತಿಕ್ರಮವನ್ನು ನಿಯಮಾನುಸಾರ ಹಿಮ್ಮೆಟ್ಟಿಸಿದ್ದೇವೆ. ಇದರಲ್ಲಿ ಯಾವುದೇ ಕಾನೂನು ಬಾಹಿರ ಕ್ರಮ ಅನುಸರಿಸಿಲ್ಲ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಭಾರತೀಯ ಯೋದರು ನಿಯಮ ಉಲ್ಲಂಘಿಸಿ ಎಲ್‍ಎಸಿ ದಾಟಿ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಸ್ಥಿತಿ ಸ್ಥಿರಗೊಳಿಸಲು ಪ್ರತಿರೋಧ ಕ್ರಮಗಳನ್ನು ಕೈಗೊಳ್ಳುವಂತೆ ಚೀನಾ ಗಡಿ ಭದ್ರತಾ ಪಡೆಗೆ ಸೂಚನೆ ನೀಡಿರುವುದಾಗಿ ಪೀಪಲ್ಸ್ ಲಿಬರೇಷನ್ ಆರ್ಮಿಯ ವಕ್ತಾರರೊಬ್ಬರು ತಿಳಿಸಿದ್ದರು.

ಭಾರತೀಯ ಸೇನಾ ಪಡೆ ಕಾನೂನು ಬಾಹಿರವಾಗಿ ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿದ್ದು, ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆ ಮತ್ತು ಶೆನ್ ಪೂ ಪರ್ವತ ಪ್ರದೇಶವನ್ನು ಅತಿಕ್ರಮವಾಗಿ ಪ್ರವೇಶಿಸಿದೆ ಎಂದು ಪಿಎಲ್‍ಎ ಆರೋಪಿಸಿತ್ತು.

Facebook Comments