ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಲೋಕಾರ್ಪಣೆ, ಏನೇನಿದೆ ಇಲ್ಲಿ..? ಇಲ್ಲಿದೆ ಫುಲ್ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರು ಹೆಚ್ಚುತ್ತಿರುವ ಬೆನ್ನಲ್ಲಿಯೇ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ಸರ್ವ ಸಜ್ಜಾಗಿರುವ ಬೆನ್ನಲ್ಲಿಯೇ, ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ದೇಶದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರವನ್ನು ಲೋಕಾರ್ಪಣೆ ಮಾಡಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಎಸ್) ದಲ್ಲಿ ಸ್ಥಾಪಿಸಲಾಗಿರುವ 10,100 ಹಾಸಿಗೆಗಳ ಸಾಮರ್ಥ್ಯದ ಆರೈಕೆ ಕೇಂದ್ರವು ನಾಳೆಯಿಂದಲೇ ಬಳಕೆಗೆ ಲಭ್ಯವಾಗಲಿದೆ. ಮೊದಲ ಹಂತದಲ್ಲಿ 1,536 ಹಾಸಿಗೆಗಳು ಬಳಕೆಗೆ ಲಭ್ಯವಾಗಲಿವೆ. ಕೂಡಲೇ ಈ ಕೇಂದ್ರಕ್ಕೆ ಸೋಂಕಿತರನ್ನು ಸ್ಥಳಾಂತರಿಸಿ ಚಿಕಿತ್ಸೆ ನೀಡಬಹುದಾಗಿದೆ.

ಅತ್ಯಂತ ಪ್ರತಿಷ್ಟಿತವಾಗಿ, ಪಂಚತಾರಾ ಹೋಟೆಲಿನಂಥ ಸೌಲಭ್ಯಗಳನ್ನು ಒಳಗೊಂಡಿರುವ ಈ ಕೋವಿಡ್ ಆರೈಕೆ ಕೇಂದ್ರವನ್ನು ಸೋಮವಾರ ಸೋಂಕಿತರ ಸೇವೆಗೆ ಮುಕ್ತಗೊಳಿಸಿದ ಸಂದರ್ಭದಲ್ಲಿ ಡಿಸಿಎಂ ಅವರ ಜತೆಗೆ, ಕಂದಾಯ ಸಚಿವ ಆರ್. ಅಶೋಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಮೇಯರ್ ಗೌತಮ್ ಕುಮಾರ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಹಾಜರಿದ್ದರು.

# ಏನೇನಿದೆ ಇಲ್ಲಿ?
ಅತ್ಯಂತ ಸುಸಜ್ಜಿತ ಹಾಗೂ ಅತ್ಯಾಧುನಿಕವಾಗಿ ಯಾವುದೇ ಬೃಹತ್ ಖಾಸಗಿ ಆಸ್ಪತ್ರೆಯನ್ನು ಸರಿಗಟ್ಟುವಂತೆ ನಿರ್ಮಾಣವಾಗಿರುವ ಈ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಒಟ್ಟು 5,000 ಹಾಸಿಗೆಗಳು ಸಿದ್ಧವಾಗಿದ್ದು, ಈ ಪೈಕಿ 1,536 ಹಾಸಿಗೆಗಳು ಕೂಡಲೇ ಬಳಕೆಗೆ ಲಭ್ಯ ಇವೆ.

5ನೇ ಸಂಖ್ಯೆಯ ಹಾಲ್’ನಲ್ಲಿ 24 ವಾರ್ಡುಗಳ ವ್ಯವಸ್ಥೆ ಮಾಡಲಾಗಿದ್ದು, ಒಮ್ಮೆಲೆ 350 ಜನರು ಒಟ್ಟಿಗೆ ಊಟ ಮಾಡಬಹುದು. ಇದರ ಜತೆಗೆ, ಮನರಂಜನಾ ಕೊಠಡಿ ಮಾಡಲಾಗಿದ್ದು ಟಿವಿ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಸೋಫಾ, ಕುರ್ಚಿಗಳು ಹಾಗೂ ಫ್ಯಾನ್ ಸೌಕರ್ಯವನ್ನು ಮಾಡಲಾಗಿದೆ. ಹಾಗೆಯೇ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದೆ. ಸ್ನಾನಕ್ಕೆ, ಮೂತ್ರ ವಿಸರ್ಜನೆಗೆ, ಕೈ ತೊಳೆದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಇದೆ.

ಇವುಗಳೊಂದಿಗೆ ಇಡೀ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ನಿಯಂತ್ರಣ ಕೊಠಡಿಯನ್ನೂ ತೆರೆಯಲಾಗಿದೆ. ಕೋವಿಡ್ ಪಾಸಿಟೀವ್ ಬಂದಿರುವ ರೋಗಿಗಳು ನೋಂದಣಿ ಅಥವಾ ದಾಖಲು ಮಾಡಿಕೊಳ್ಳಲು ಪ್ರತ್ಯೇಕ ಕೊಠಡಿ ಮಾಡಲಾಗಿದೆ.

ಜತೆಗೆ, ಇಡೀ ಕೇಂದ್ರವನ್ನು ನಿರ್ವಹಣೆ ಮಾಡಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಹೌಸ್ ಕೀಪಿಂಗ್ ಮತ್ತು ಬಟ್ಟೆ ಒಗೆಯಲು ಪ್ರತ್ಯೇಕ  ಸಿಬ್ಬಂದಿಯನ್ನು ಇಡಲಾಗಿದೆ. ಇನ್ನು ಸುರಕ್ಷತೆ ಕಾರಣಕ್ಕೆ ಮಾರ್ಷಲ್’ಗಳು ಹಾಗೂ ಕೆ.ಎಸ್.ಆರ್.ಪಿ ಯ ಒಂದು ತುಕಡಿಯನ್ನು ಮತ್ತು ಅಗ್ನಿಶಾಮಕ ದಳದ ತುಕಡಿಯನ್ನು ಇಲ್ಲಿ ನಿಯೋಜನೆ ಮಾಡಲಾಗಿದೆ.

ದಿನದ 24 ಗಂಟೆ ವಿದ್ಯುತ್ ಸಮಸ್ಯೆ ಆಗದಂತೆ ಈ ಕೋವಿಡ್ ಕೇಂದ್ರಕ್ಕೆ ಪ್ರತ್ಯೇಕ ವಿದ್ಯುತ್ ಲೈನ್ ಅನ್ನು ಎಳೆಯಲಾಗಿದೆ. ಇನ್ನು ಸರಕಾರ ಈಗಾಗಲೇ ನಿಗದಿ ಮಾಡಿರುವ ಫುಡ್ ಮೆನು ಪ್ರಕಾರ ಸೋಂಕಿತರಿಗೆ ನಿತ್ಯವೂ ಆಹಾರ ಪೂರೈಕೆ ಮಾಡಲಾಗುವುದು.

# ಮಂಚದ ಗುಣಮಟ್ಟ ಪರಿಶೀಲನೆ:
ಕೋವಿಡ್ ಪರಿಕರಗಳ ಗುಣಮಟ್ಟದ ಬಗ್ಗೆ ಕೆಲವರು ತಕರಾರು ತೆಗೆದಿರುವ ಹಿನ್ನೆಲೆಯಲ್ಲಿ ಡಿಸಿಎಂ ಅವರು, 170 ಕೆಜಿ ತೂಕದ ವ್ಯಕ್ತಿಯೊಬ್ಬರನ್ನು ಹಾಸಿಗೆಯ ಮೇಲೆ ಮಲಗಿಸಿ ಮಂಚದ ಸಾಮರ್ಥ್ಯವನ್ನು ಪರಿಶೀಲನೆ ನಡೆಸಿದರು.

ಇದರ ಜತೆಗೆ, ಎಲ್ಲ ಸಚಿವರು, ಅಧಿಕಾರಿಗಳ ಜತೆ ಇಡೀ ಕೇಂದ್ರವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿದರಲ್ಲದೆ, ಗುಣಮಟ್ಟದ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಕೇಂದ್ರದಲ್ಲಿ ರೋಗಿಗಳು ದಾಖಲಾದಂತೆ ಹಾಸಿಗೆಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು. ಎ ಸಿಂಪ್ಟೆಮಿಕ್ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

# ಮತ್ತಷ್ಟು ಕಡೆ ಕೋವಿಡ್ ಕೇಂದ್ರಗಳು:
ಈಗ ಬೆಂಗಳೂರು ನಗರದಲ್ಲಿ 9 ಕಡೆ ಕೋವಿಡ್ ಆರೈಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಜತೆಗೆ ಬಿಐಎಸ್’ಸಿ ಕೇಂದ್ರವು ಸೇರ್ಪಡೆಯಾಗಿದೆ. ಇದರ ಜತೆಗೆ ಅರಮನೆ ಮೈದಾನ, ಅಂತಾರಾಷ್ಟ್ರೀಯ ಕನ್ವೆಂಷನ್ ಸೆಂಟರ್, ಪೊಲೀಸ್ ಕ್ವಾಟ್ರಸ್ ಮುಂತದ ಕಡೆ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

ಹಾಗೆಯೇ  ಕೆಲ ಖಾಸಗಿ ಅಪಾರ್ಟ್ಮೆಂಟುಗಳಲ್ಲಿ ಕೂಡ ಇಂತಹ ಕೇಂದ್ರಗಳನ್ನು ಆರಂಭಿಸಲಾಗುವುದು. ಅಗತ್ಯಕ್ಕೆ ತಕ್ಕಂತೆ ಸರಕಾರ ವ್ಯವಸ್ಥೆ ಮಾಡುತ್ತ ಹೋಗಲಿದೆ. ಇದರ ಜತೆಯಲ್ಲಿಯೇ ಹೋಂ ಕೇರ್ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.

# ರಿಸಲ್ಟ್ ತಡವಾಗಲ್ಲ:
ಇನ್ನು ಮೇಲೆ ಸೋಂಕಿತರ ಅಥವಾ ಸ್ಯಾಂಪಲ್ ಪರೀಕ್ಷೆ ನಂತರ ರಿಸಲ್ಟ್ ತಡವಾಗಲ್ಲ. ಸ್ಯಾಂಪಲ್ ಕೊಟ್ಟ ನಂತರ ಅರ್ಧ ಗಂಟೆಯಲ್ಲೇ ರಿಸಲ್ಟ್ ಸಿಗಲಿದೆ. ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ರಾಪಿಡ್ ಟೆಸ್ಟಿಂಗ್ ಕಿಟ್’ಗಳನ್ನೂ ಅಗತ್ಯವಿದ್ದಷ್ಟು ಒದಗಿಸಲಾಗಿದೆ. ಜನರು ಈ ಬಗ್ಗೆ ಆತಂಕಪಡುವುದು ಬೇಡ ಎಂದು ಡಿಸಿಎಂ ಮನವಿ ಮಾಡಿದರು.

Facebook Comments

Sri Raghav

Admin