ಮುಂದುವರೆದ ಕೋರೋಣ ಅಟ್ಟಹಾಸ..! ಇಂದಿನಿಂದ ದೇಶದಾದ್ಯಂತ ಲಾಕ್‌ಡೌನ್-3 ಜಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮೇ 4- ಕಿಲ್ಲರ್ ಕೊರೊನಾ ನಿಗ್ರಹಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರನೇ ಹಂತದ ಲಾಕ್ಡೌನ್ ಕೆಲವು ನಿರ್ಬಂಧ ಮತ್ತು ಅನೇಕ ಸಡಿಲಿಕೆಗಳೊಂದಿಗೆ ಇಂದಿನಿಂದ ಜಾರಿಗೆ ಬಂದಿದೆ. 40 ದಿನಗಳ ಭಾರತ ದಿಗ್ಬಂಧನದ ನಂತರ ಇಂದಿನಿಂದ 17ವರೆಗೆ 14 ದಿನಗಳ ಲಾಕ್ಡೌನ್-3 ಮುಂದುವರಿಯಲಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಮ್ಮಾರಿ ನಿಗ್ರಹಕ್ಕಾಗಿ ಶತ ಪ್ರಯತ್ನಗಳನ್ನು ಮುಂದುವರಿಸಿದ್ದರೂ, ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ನಿನ್ನೆ ಒಂದೇ ದಿನ ದೇಶದ ವಿವಿಧೆಡೆ 2,000ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಕಳವಳಕಾರಿ. ಇಂದು ಭಾರತದಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆ 42,000 ದಾಟಿದೆ.

ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಸರಾಸರಿ ಶೇ.25ಕ್ಕಿಂತ ಹೆಚ್ಚಾಗಿದ್ದು, (11,706 ಮಂದಿ ಗುಣಮುಖ) ಸುಧಾರಣೆ ಕಂಡುಬಂದಿದ್ದರೂ, ಮತ್ತೊಂದೆಡೆ ದಿನನಿತ್ಯ ಮರಣ ಮತ್ತು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ದೇಶದ ಜನರನ್ನು ಚಿಂತಾಕ್ರಾಂತವನ್ನಾಗಿ ಮಾಡಿದೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಭಾರತದಲ್ಲಿ ಮೃತರ ಸಂಖ್ಯೆ 1,373ಕ್ಕೇರಿದೆ. ಮತ್ತೊಂದಡೆ ಸೋಂಕು ಪೀಡಿತರ ಸಂಖ್ಯೆ 42,533ರಷ್ಟಿದೆ. ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 29,453ರಷ್ಟಿದೆ. ಈ ಮಧ್ಯೆ ಈವರೆಗೆ 11,706 ಮಂದಿ ಗುಣಮುಖರಾಗಿದ್ದಾರೆ..

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರು ವವರ ಸಂಖ್ಯೆಯಲ್ಲಿ ವೃದ್ದಿ ಕಂಡು ಬಂದಿರುವುದು ಸಮಾಧಾನಕರ ಸಂಗತಿಯಾದರೂ ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ.

ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಆಂಧ್ರಪ್ರದೇಶ, ಪಂಜಾಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.ದೇಶದ ವಿವಿಧೆಡೆ 24 ತಾಸುಗಳ ಅವಧಿಯಲ್ಲಿ (ನಿನ್ನೆ ರಾತ್ರಿವರೆಗೆ) ಒಟ್ಟು 67 ಜನರನ್ನ ಕೋವಿಡ್-19 ಸೋಂಕು ಬಲಿ ತೆಗೆದುಕೊಂಡಿದೆ.

ಗುಜರಾತ್ ನಿನ್ನೆ ಮಹಾರಾಷ್ಟ್ರವನ್ನು ಹಿಂದಿಕ್ಕಿ ಸಾವಿನ ಪ್ರಮಾಣದಲ್ಲಿ ಅಗ್ರಸ್ಥಾನ ಪಡೆಯಿತು. ಅಲ್ಲಿ 28 ರೋಗಿಗಳು ಮೃತಪಟ್ಟರು. ಮಹಾರಾಷ್ಟ್ರದಲ್ಲಿ 27, ರಾಜಸ್ತಾನ 6, ಪಶ್ಚಿಮ ಬಂಗಾಳ 2, ಹರಿಯಾಣ, ಪಂಜಾಬ್, ತಮಿಳುನಾಡು ಮತ್ತು ತೆಲಂಗಾಣದಲ್ಲಿ ತಲಾ ಒಂದೊಂದು ಸಾವು ಸಂಭವಿಸಿದೆ.

ಈವರೆಗೆ ಸಂಭವಿಸಿರುವ 1,373 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿ ಒಟ್ಟು 548 ಸಾವುಗಳು ವರದಿಯಾಗಿವೆ. ದೇಶದಲ್ಲಿ ಸಂಭವಿಸಿದ ಒಟ್ಟು ಸಾವು ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲೇ ಶೇ.40ರಷ್ಟು ಮರಣ ವರದಿಯಾಗಿದೆ.

ನಂತರದ ಸ್ಥಾನಗಳಲ್ಲಿ ಗುಜರಾತ್ (290), ಮಧ್ಯಪ್ರದೇಶ (156), ರಾಜಸ್ತಾನ (71), ದೆಹಲಿ (64), ಉತ್ತರ ಪ್ರದೇಶ (43), ಪಶ್ಚಿಮ ಬಂಗಾಳ (35), ಆಂಧ್ರಪ್ರದೇಶ (33), ತಮಿಳುನಾಡು (30), ತೆಲಂಗಾಣ(29), ಕರ್ನಾಟಕ (25) ಹಾಗೂ ಪಂಜಾಬ್ (20) ರಾಜ್ಯಗಳಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಎಂಟು, ಕೇರಳ, ಬಿಹಾರ ಮತ್ತು ಹರಿಯಾಣದಲ್ಲಿ ತಲಾ ನಾಲ್ಕು, ಜಾರ್ಖಂಡ್ ಮೂರು, ಮೇಘಾಲಯ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಅಸ್ಸಾಂ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ. ಇನ್ನು ಹಲವು ರಾಜ್ಯಗಳಲ್ಲಿ ಕಳೆದ 12 ತಾಸುಗಳ ಅವಧಿಯಲ್ಲಿ ಹೊಸ ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿಯಾಗಿದೆ.

ಮಹಾರಾಷ್ಟ್ರದಲ್ಲಿ ಸೋಂಕು ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನಾಸಿಕ್, ಔರಂಗಾಬಾದ್ ಮತ್ತಿತರ ಜಿಲ್ಲೆಗಳಲ್ಲಿ ಮತ್ತೆ ಹೊಸ ಪ್ರಕರಣಗಳು ದಾಖಲಾಗಿವೆ. ದೆಹಲಿ, ಮಧ್ಯಪ್ರದೇಶ, ಗುಜರಾತ್,. ರಾಜಸ್ತಾನ, ಆಂಧ್ರಪ್ರದೇಶ, ಓಡಿಶಾ ರಾಜ್ಯಗಳಲ್ಲೂ ಹೊಸ ಸಾಂಕ್ರಮಿಕ ಪ್ರಕರಣಗಳು ಪತ್ತೆಯಾಗಿವೆ.

# ಲಾಕ್ಡೌನ್-3 ಜಾರಿ :
ಕೊರೊನಾ ವೈರಸ್ ಸೋಂಕು ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್ಡೌನ್-3 ಇಂದಿನಿಂದ ದೇಶಾದ್ಯಂತ ಅನುಷ್ಠಾನಗೊಂಡಿದೆ.
ರೆಡ್, ಆರೆಂಜ್ ಮತ್ತು ಗ್ರೀನ್ ಜೋನ್ಗಳಾಗಿ ದೇಶದ 739 ಜಿಲ್ಲೆಗಳನ್ನು ವಿಂಗಡಿಸಲಾಗಿದ್ದು, ಕೊರೊನಾ ಸೋಂಕು ತೀವ್ರತೆ ಆಧಾರದ ಮೇಲೆ ಪರಿಷ್ಕøತ ನಿಯಯ-ನಿಬಂಧನೆಗಳೊಂದಿಗೆ ಅನೇಕ ಸಡಿಲಿಕೆ ಮತ್ತು ಕೆಲವು ಜಟಿಲ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.

ದೇಶದ ಶೇ.50ರಷ್ಟು ಭಾಗದಲ್ಲಿ ಇಂದಿನಿಂದ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿವೆ. ಆದರೆ ರೆಡ್ ಜೋನ್, ಮತ್ತು ಕಂಟೈನ್ನ್ಮೆಂಟ್ ಪ್ರದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ಮುಂದುವರಿಸಲಾಗಿದೆ.

Facebook Comments

Sri Raghav

Admin