ಲಾಕ್‍ಡೌನ್ 2.0 : ಇಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ…?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.15-ದೇಶವ್ಯಾಪಿ ಕಿಲ್ಲರ್ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಸಾವು ಮತ್ತು ಸೋಂಕಿನ ಸಂಖ್ಯೆ ಆತಂಕಕಾರಿ ಮಟ್ಟದಲ್ಲೇ ಮುಂದುವರಿದಿರುವುದರಿಂದ ಇಂದಿನಿಂದ ಭಾರತಾದ್ಯಂತ ಜಾರಿಗೆ ಬಂದಿರುವ ಎರಡನೇ ಹಂತದ ಲಾಕ್‍ಡೌನ್‍ಗಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಇಂದು ಪ್ರಕಟಿಸಿದೆ. ಅಲ್ಲದೇ ಏಪ್ರಿಲ್ 20ರಿಂದ ಕೆಲವು ಕ್ಷೇತ್ರಗಳಿಗೆ ವಿನಾಯಿತಿಗಳನ್ನು ಸಹ ಘೋಷಿಸಲಾಗಿದೆ.

ಮೇ 3ರವರೆಗೆ ಜಾರಿಯಲ್ಲಿರುವ ಲಾಕ್‍ಡೌನ್ ವಿಸ್ತರಣೆ ಸಂದರ್ಭದಲ್ಲಿ ಎಲ್ಲ ರೀತಿಯಾ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ. ಮತ್ತು ಸಾರ್ವಜನಿಕ ಸ್ಥಳಗಳನ್ನು ತೆರೆಯುವುದನ್ನು ನಿರ್ಬಂಧಿಸಿದೆ. ಇಂದು ಬೆಳಗ್ಗೆ ಕೇಂದ್ರ ಗೃಹ ಸಚಿವಾಲಯವು ಈ ಸಂಬಂಧ ಹೊಸ ಮತ್ತು ಪರಿಷ್ಕøತ ಮಾರ್ಗಸೂಚಿಗಳನ್ನು (ಗೈಡ್‍ಲೈನ್ಸ್‍ಗಳು) ಹೊರಡಿಸಿದೆ.

ಅಂತರ್-ರಾಜ್ಯ, ಅಂತರ್-ಜಿಲ್ಲಾ ಮಟ್ಟದಲ್ಲಿ ಜನರು, ಮೆಟ್ರೋ, ಬಸ್ ಸೇವೆಗಳ ಸಂಚಾರವನ್ನು ಮೇ 3ರವರೆಗೆ ನಿರ್ಬಂಧಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳು, ಕೋಚಿಂಗ್ ಸೆಂಟರ್‍ಗಳು, ಸ್ಥಳೀಯ, ದೇಶೀಯ ಮತ್ತು ಅಂತಾರಾಷ್ಟ್ರೀಯ ವಾಯು ಯಾನ, ರೈಲು ಸೇವೆಗಳನ್ನೂ ಸಹ ರದ್ದುಗೊಳಿಸಲಾಗಿದೆ.

ಸಿನಿಮಾ ಮಂದಿರಗಳು, ಮಾಲ್‍ಗಳು, ಶಾಪಿಂಗ್ ಕಾಂಪ್ಲೆಕ್ಸ್‍ಗಳು, ಜಿಮ್ನಾಸಿಯಂಗಳು, ಕ್ರೀಡಾ ಸಂಕೀರ್ಣಗಳು, ಈಜು ಕೊಳಗಳು, ಬಾರ್ ಮತ್ತು ರೆಸ್ಟೋರೆಂಟ್‍ಗಳು, ಹೋಟೆಲ್‍ಗಳನ್ನು ಮೇ 3ರವರೆಗೆ ಮುಚ್ಚಲ್ಪಡಲಿದೆ.

ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡೆಗಳು, ಧಾರ್ಮಿಕ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು, ಧಾರ್ಮಿಕ ಸ್ಥಳಗಳು, ಪೂಜಾ ಮಂದಿರಗಳು, ಗುಡಿ-ಗೋಪುರ, ಮಂದಿರ-ಮಸೀದಿಗಳು ಸಹ ಮೇ 3ರವರೆಗೆ ಬಂದ್ ಆಗಲಿದೆ ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

# ಏಪ್ರಿಲ್ 20 ರಿಂದ ಕೆಲವು ಸಡಿಲಿಕೆ :
ಏಪ್ರಿಲ್ 20ರಿಂದ ಕೃಷಿ, ತೋಟಗಾರಿಕೆ, ಕೃಷಿ ಉತ್ಪನ್ನಗಳು ಮತ್ತು ಮಂಡಿಗಳಿಂದ ವ್ಯವಸಾಯೋತ್ಪನ್ನಗಳನ್ನು ಖರೀದಿಸಲು ಅವಕಾಶ ನೀಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. ಮುಂದಿನ ಸೋಮವಾರದಿಂದ ಕೃಷಿ ಸಾಧನ-ಸಲಕರಣೆಗಳ ಮಾರಾಟ ಮಳಿಗೆಗಳು, ಅವುಗಳ ಬಿಡಿ ಭಾಗಗಳ ಮಾರಾಟ, ಪೂರೈಕೆ ಸರಪಳಿ, ದುರಸ್ಥಿ ಸೌಲಭ್ಯ, ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಪಟ್ಟ ಬಾಡಿಗೆ ಕೇಂದ್ರಗಳಿಗೆ ಅವಕಾಶ ಘೋಷಿಸಲಾಗಿದೆ.

ಔಷಧಿಗಳು, ವೈದ್ಯಕೀಯ ಸಾಧನಗಳ ತಯಾರಿಕಾ ಘಟಕಗಳು ಮತ್ತು ಆರೋಗ್ಯ ಕ್ಷೇತ್ರದ ಅಗತ್ಯ ಮೂಲಸೌಕರ್ಯಾಭಿವೃದ್ದಿ ವ್ಯವಸ್ಥೆಗಳು ಕೂಡ ಇದೇ ಅವಧಿಯಿಂದ ಕಾರ್ಯಾರಂಭ ಮಾಡಲು ಅನುವು ಮಾಡಿಕೊಡಲಾಗಿದೆ. ಮುಂದಿನ ಸೋಮವಾರದಿಂದ ಹೈವೇ ಡಾಬಾಗಳು, ಟ್ರಕ್ ದುರಸ್ಥಿ ಶಾಪ್‍ಗಳು ಮತ್ತು ಸರ್ಕಾರಿ ಚಟುವಟಿಕೆಗಳ ಕಾಲ್ ಸೆಂಟರ್‍ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಲಾಕ್‍ಡೌನ್ ಅವಧಿಯಲ್ಲಿ ದಿನಸಿ ಮಳಿಗೆಗಳು/ಕಿರಾಣಿ ಅಂಗಡಿಗಳು, ಹಣ್ಣು ಮತ್ತು ತರಕಾರಿ ಮಳಿಗೆಗಳು (ತಳ್ಳು ಗಾಡಿಯಲ್ಲಿ ಮಾರಾಟ ಮಾಡುವುದೂ ಸೇರಿ), ಕೋಳಿ, ಮಾಂಸ ಮತ್ತು ಮೀನು ಅಂಗಡಿಗಳನ್ನು ತೆರೆಯಲು ಮಾರ್ಗಸೂಚಿಯಲ್ಲಿ ಅವಕಾಶ ನೀಡಲಾಗಿದೆ.

ಏಪ್ರಿಲ್ 20ರಿಂದ ಸ್ವ ಉದ್ಯೋಗಿ ಎಲೆಕ್ಟ್ರಿಷಿಯನ್‍ಗಳು, ಕೊಳಾಯಿ ರಿಪೇರಿ ಮಾಡುವವರು, ಮರಗೆಲಸದವರು, ಮೋಟಾರ್ ಮೆಕ್ಯಾನಿಕ್‍ಗಳಿಗೆ ತಮ್ಮ ವೃತ್ತಿ ಮುಂದುವರಿಸಲು ಅನವು ಮಾಡಿಕೊಡಲಾಗಿದೆ.ಏಪ್ರಿಲ್ 20ರಿಂದ ನೀಡಲಾಗಿರುವ ಸಡಿಲಿಕೆಗಳು ಕೊರೊನಾ ವೈರಾಣು ಸೋಂಕುವಿನ ಹಾಟ್‍ಸ್ಪಾಟ್‍ಗಳು ಮತ್ತು ರೆಡ್ ಜೋನ್‍ಗಳಿಗೆ ಅನ್ವಯವಾಗುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಬಿಗಿರಹಿತ ಮಾಡಬಾರದು. ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬಹುದಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳಿಗೆ ಏ.30ರಿಂದ ಪುನರಾರಂಭ ಮಾಡಲು ಅವಕಾಶ ನೀಡಲಾಗಿದ್ದು, ಕಟ್ಟು ನಿಟ್ಟಿನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ವಿಶೇಷ ಆರ್ಥಿಕ ವಲಯದಲ್ಲಿರುವ ತಯಾರಿಕಾ, ಕೈಗಾರಿಕಾ ಘಟಕಗಳು, ರಫ್ತು ಆಧಾರಿತ ಉದ್ದಿಮೆಗಳು, ಕೈಗಾರಿಕಾ ಎಸ್ಟೇಟ್‍ಗಳು ಮತ್ತು ಟೌನ್‍ಶಿಫ್‍ಗಳನ್ನು ಏ.30ರಿಂದ ತೆರೆಯಲು ಅನುಮತಿ ನೀಡಲಾಗಿದ್ದು, ಕಟ್ಟುನಿಟ್ಟಿನ ಸೋಷಿಯಲ್ ಡಿಸ್ಟೆನ್ಸ್ ನಿಯಮ ಪಾಲಿಸುವಂತೆ ತಾಕೀತು ಮಾಡಲಾಗಿದೆ.

Facebook Comments

Sri Raghav

Admin