ಇಂದಿನಿಂದ ಲಾಕ್‍ಡೌನ್ ಸಡಿಲ : ಪರಿಷ್ಕೃತ ಮಾರ್ಗಸೂಚಿಯಲ್ಲಿ ಏನೇನಿದೆ..? 

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.25- ಕಿಲ್ಲರ್ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶವ್ಯಾಪಿ ಜಾರಿಗೊಳಿಸಿದ್ದ ಒಂದು ತಿಂಗಳ ಲಾಕ್‍ಡೌನ್ ನಂತರ ಇಂದಿನಿಂದ ಕೆಲವು ನಿಯಮಗಳೊಂದಿಗೆ ವಿನಾಯಿತಿ ಘೋಷಿಸಲಾಗಿದೆ.

ಸಣ್ಣ ಅಂಗಡಿ-ಮುಂಗಟ್ಟುಗಳು, ಗ್ರಾಮೀಣ ಪ್ರದೇಶದ ಉದ್ಯಮಗಳು, ಸಲೂನ್, ಕ್ಷೌರದಂಗಡಿ, ಟೈಲರ್ ಶಾಪ್‍ನಂತಹ ಇತರ ಮಳಿಗೆಗಳು ಮತ್ತು ಜೀವನಾವಶ್ಯಕ ವಸ್ತುಗಳ ಮಾರಾಟ ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ.

ಆದರೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದೇ ವೇಳೆ ದೊಡ್ಡ ಮಾಲ್‍ಗಳು, ಶಾಪಿಂಗ್ ಕಾಂಪ್ಲೆಕ್ಸ್‍ಗಳು, ಮದ್ಯದಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್‍ಗಳು, ಹೊಟೇಲ್‍ಗಳು, ಸಿನಿಮಾ ಥಿಯೇಟರ್‍ಗಳು, ಕ್ರೀಡಾ ಸಂಕೀರ್ಣಗಳು, ಜಿಮ್‍ಗಳು, ಸಭಾಂಗಣಗಳು ಮತ್ತು ಬ್ಯೂಟಿ ಪಾರ್ಲರ್‍ಗಳಿಗೆ ನಿರ್ಬಂಧ ಮುಂದುವರೆಸಲಾಗಿದೆ.

ಕೇಂದ್ರ ಗೃಹ ಸಚಿವಾಲಯ ನಿನ್ನೆ ಮಧ್ಯ ರಾತ್ರಿ ಈ ಸಂಬಂಧ ಪರಿಷ್ಕøತ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚನೆ ನೀಡಿದೆ.

ಲಾಕ್‍ಡೌನ್ ಅನ್ನು ಮತ್ತಷ್ಟು ಸಡಿಲಗೊಳಿಸಿದ್ದರೂ ಕೂಡ ಬಿಗಿ ಕ್ರಮಗಳು ಮುಂದುವರೆಯಲಿದೆ. ಈಗಾಗಲೇ ಜಾರಿಯಲ್ಲಿರುವ ಲಾಕ್‍ಡೌನ್‍ನ ನಿಯಮಗಳನ್ನು ವಿನಾಯಿತಿ ಪಡೆದಿರುವ ವಲಯಗಳು ಯಾವುದೇ ಕಾರಣಕ್ಕೂ ಉಲ್ಲಂಘಿಸುವಂತಿಲ್ಲ.

ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸಬೇಕು. ವಿನಾ ಕಾರಣ ಜನ ಸಂದಣಿಗೆ ಆಸ್ಪದ ನೀಡಬಾರದು ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಕೆಲವು ಅಂಗಡಿ ಮುಂಗಟ್ಟುಗಳು ಮತ್ತು ಜನಾವಶ್ಯಕ ಮಳಿಗೆಗಳು ಇಂದಿನಿಂದ ಕಾರ್ಯಾರಂಭ ಮಾಡಿರುವುದರಿಂದ ಸಣ್ಣ ಮತ್ತು ಮಧ್ಯಮ ವರ್ತಕರು ಮತ್ತು ಗ್ರಾಹಕರಿಗೆ ಅನುಕೂಲವಾಗಿದ್ದು ನಿರಾಳತೆ ಕಂಡು ಬಂದಿದೆ.

ಕೇಂದ್ರ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಜನಸಂದಣಿ ಸೇರುವ ಬೃಹತ್ ಶಾಪಿಂಗ್ ಮಾಲ್‍ಗಳು , ವಾಣಿಜ್ಯ ಸಂಕೀರ್ಣಗಳು, ಸಭೆ ಸಮಾರಂಭ ನಡೆಯುವ ಸ್ಥಳಗಳು, ಆಡಿಟೋರಿಯಂಗಳು, ಥಿಯೇಟರ್‍ಗಳು, ಜಿಮ್‍ಗಳು, ಸ್ವಿಮ್ಮಿಂಗ್ ಫೂಲ್ ಮೊದಲಾದ ಸ್ಥಳಗಳಲ್ಲಿ ಮೇ 3ರವರೆಗೂ ನಿರ್ಬಂಧ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಮಾ.25ರಿಂದ ಜಾರಿಯಲ್ಲಿರುವ ಕೆಲವು ಪ್ರಮುಖ ನೀತಿ ನಿಯಮಗಳು ಮತ್ತು ಇತರ ಕಾನೂನುಗಳು ಮೇ 3ರ ಲಾಕ್‍ಡೌನ್‍ವರೆಗೂ ಮುಂದುವರೆಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಪರಿಷ್ಕøತ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ. ಆನ್‍ಲೈನ್ ಅವಕಾಶ: ಆನ್‍ಲೈನ್‍ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಆನ್‍ಲೈನ್ ಮೂಲಕ ದೇಶದ ಕೆಲವು ರಾಜ್ಯಗಳಲ್ಲಿ ಮದ್ಯ , ಸಿಗರೇಟು, ತಂಬಾಕು ಮತ್ತು ಇತರ ಹಾನಿಕಾರಕ ಉತ್ಪನ್ನಗಳ ಮಾರಾಟ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವಾಲಯ ಇವುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೊರಡಿಸಿದೆ.

ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುವುದನ್ನು ಅವಲಂಬಿಸಿ ಮತ್ತಷ್ಟು ಸಡಿಲಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಬಲ್ಲಾ ಪರಿಷ್ಕøತ ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin