ಮೇ 20ರಿಂದ ದೇಶವ್ಯಾಪಿ ಸಾರಿಗೆ, ಜೂ.1ರಿಂದ ಮಾಲ್‍ಗಳು, ಸಭೆ-ಸಮಾರಂಭಗಳಿಗೆ ಅವಕಾಶ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 4- ಲಾಕ್‍ಡೌನ್‍ನಲ್ಲಿ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಸಡಿಲಿಕೆ ಮಾಡಿರುವ ಕೇಂದ್ರ ಸರ್ಕಾರ ಮೇ 20ರಿಂದ ದೇಶವ್ಯಾಪಿ ಸಾರಿಗೆ ಸಂಚಾರ ಮತ್ತು ಜೂ.1ರಿಂದ ಮಾಲ್‍ಗಳು ಮತ್ತು ಸಭೆ, ಸಮಾರಂಭಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಉನ್ನತ ಮೂಲಗಳ ಪ್ರಕಾರ ಮೇ 20ರಿಂದ ದೇಶವ್ಯಾಪಿ ಬಸ್, ರೈಲು, ಟ್ಯಾಕ್ಸಿ, ಆಟೋ ಮತ್ತು ಇತರ ಖಾಸಗಿ ಬಾಡಿಗೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಿದೆ.

ಜೂ.20ರಿಂದ ಮಾಲ್‍ಗಳು, ಬೃಹತ್ ವಾಣಿಜ್ಯ ಸಂಕೀರ್ಣಗಳು, ಸಿನಿಮಾ ಮಂದಿರಗಳು, ಕ್ರೀಡಾ ಸಂಕೀರ್ಣಗಳು, ಸಾರ್ವಜನಿಕರ ಸಭೆ, ಸಮಾರಂಭಗಳು ಮತ್ತಿತರ ಚಟುವಟಿಕೆ ಜನರಿಗೆ ಮುಕ್ತವಾಗಲಿದೆ.

ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು , ಅಂತಿಮ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ಕಳೆದ 41 ದಿನಗಳಿಂದ ಲಾಕ್‍ಡೌನ್ ಪರಿಣಾಮ ದೇಶದ ಆರ್ಥಿಕತೆ ಮೇಲೆ ತೀವ್ರ ಹೊಡೆತ ಬಿದ್ದಿದ್ದು , ಚೇತರಿಕೆ ಕ್ರಮವಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲು ಮೋದಿ ಸೂಚಿಸಿದ್ದಾರೆ. ಜತೆ ಜತೆಗೆ ಕೇಂದ್ರ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದಾರೆ.

ಒಂದೆಡೆ ಕೊರೊನಾ ಸೋಂಕು ಮತ್ತು ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಅತ್ಯಂತ ಬುದ್ಧಿವಂತಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ ಹಂತ ಹಂತವಾಗಿ ಲಾಕ್‍ಡೌನ್ ತೆರವುಗೊಳಿಸಿ ಜನರ ಸುರಕ್ಷತೆ ಜತೆಗೆ ಆರ್ಥಿಕ ಚಟುವಟಿಕೆಗೆ ವೇಗ ನೀಡುವುದು ಮೋದಿ ಅವರ ಉದ್ದೇಶವಾಗಿದೆ.  ಈಗಾಗಲೇ ಇಂದಿನಿಂದ ದೇಶಾದ್ಯಂತ ಕೆಲವು ನಿರ್ಬಂಧಗಳನ್ನು ಸಡಿಲಿಸಿ ಜನತೆಗೆ ಅನುವು ಮಾಡಿಕೊಡಲಾಗಿದೆ.

Facebook Comments

Sri Raghav

Admin