ಸೆಮಿಫೈನಲ್‍ನಲ್ಲಿ ಮುಗ್ಗರಿಸಿದ ಭಾರತ ಹಾಕಿ ತಂಡ, ಕಂಚಿನ ಹೋರಾಟ ಬಾಕಿ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಆ.3- ಬೆಲ್ಜಿಯಂನ ಅಲೆಕ್ಸಾಂಡರ್ ಹೆನ್‍ಡ್ರಿಕ್ಸ್ ಗಳಿಸಿದ ಹ್ಯಾಟ್ರಿಕ್ ಗೋಲ್‍ಗೆ ತಲೆಬಾಗಿದ ಮನ್‍ಪ್ರೀತ್ ಪಡೆಯ ಭಾರತದ ಪುರುಷರ ಹಾಕಿ ತಂಡವು 5-2 ರಿಂದ ವಿರೋಚಿತ ಸೋಲು ಕಾಣುವ ಮೂಲಕ ಫೈನಲ್‍ಗೇರುವ ಅವಕಾಶ ಕೈಚೆಲ್ಲಿದರು. 49 ವರ್ಷಗಳ ನಂತರ ಒಲಿಂಪಿಕ್ಸ್‍ನ ಸೆಮಿಫೈನಲ್‍ಗೇರಿದ್ದ ಭಾರತ ತಂಡವು ಮೊದಲ ಸುತ್ತು ಮುಗಿಯುವ ವೇಳೆಗೆ 2-1ರಿಂದ ಮುನ್ನಡೆ ಸಾಧಿಸಿದ್ದರಾದರೂ ಮೂರನೇ ಸುತ್ತಿನಲ್ಲಿ ಬೆಲ್ಜಿಯಂನ ಆಕ್ರಮಣಕಾರಿ ಆಟಗಾರ ಹೆನ್‍ಡ್ರಿಕ್ಸ್ ಗಳಿಸಿದ ಹ್ಯಾಟ್ರಿಕ್ ಗೋಲಿನಿಂದಾಗಿ ಭಾರತ ಫೈನಲ್‍ಗೇರುವ ಅವಕಾಶವನ್ನು ಕೈಚೆಲ್ಲಿತ್ತು.

ಪಂದ್ಯ ಆರಂಭಗೊಂಡ 2ನೇ ನಿಮಿಷದಲ್ಲಿ ಬೆಲ್ಜಿಯಂ ಆಟಗಾರ ಹೆನ್‍ಡ್ರಿಕ್ಸ್ ಗೋಲು ಬಾರಿಸುವ ಮೂಲಕ ಸಂತಸ ಮೂಡಿಸಿದರು. ಆದರೆ 7ನೇ ನಿಮಿಷದಲ್ಲಿ ಭಾರತ ತಂಡದ ಮುಂಚೂಣಿ ಆಟಗಾರ ಹರ್‍ಮನ್‍ಪ್ರೀತ್‍ಸಿಂಗ್ ಪೆನಾಲ್ಟಿ ಕಾರ್ನರ್ ನೆರವಿನಿಂದ ಗೋಲು ಗಳಿಸುವ ಮೂಲಕ ಸ್ಕೋರ್ ಅನ್ನು 1-1 ರಿಂದ ಸಮಬಲಗೊಳಿಸಿದರು. ನಂತರ ಕೆಲವೇ ಕ್ಷಣಗಳಲ್ಲಿ ನಾಯಕ ಮನ್‍ಪ್ರೀತ್‍ಸಿಂಗ್ ಬೆಲ್ಜಿಯಂನ ಗೋಲ್‍ಕೀಪರ್ ಅಮಿತ್ ರೋಹಿಡಾಸ್ ಕಣ್ತಪ್ಪಿಸಿ ಗೋಲು ಬಾರಿಸಿ ಗೆಲುವಿನ ಭರವಸೆ ಮೂಡಿಸಿದ್ದರು.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮನ್‍ಪ್ರೀತ್‍ಸಿಂಗ್ ಗಳಿಸಿದ ಮೊದಲ ಗೋಲು ಇದಾಗಿದೆ. 2-1 ರಿಂದ ಹಿನ್ನೆಡೆ ಅನುಭವಿಸಿದ್ದ ಬೆಲ್ಜಿಯಂ ತಂಡಕ್ಕೆ ಮತ್ತೆ ನೆರವಾದ ಹೆನ್‍ಡ್ರಿಕ್ಸ್ 19 ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ 2-2 ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರೆ, ನಂತರ ಪಂದ್ಯದ ಕೊನೆಯ ಸುತ್ತಿನಲ್ಲೂ ಹೆನ್‍ಡ್ರಿಕ್ಸ್ ಮತ್ತೊಂದು ಗೋಲು ಬಾರಿಸಿದರೆ , ಲೂಕ್ ಲೂಯಾಪರ್ಟ್ ಮತ್ತೊಂದು ಗೋಲು ಬಾರಿಸುವ ಮೂಲಕ 5-2 ರಿಂದ ಪಂದ್ಯವನ್ನು ಗೆಲ್ಲುವ ಮೂಲಕ ಫೈನಲ್‍ಗೆ ಅರ್ಹತೆ ಗಿಟ್ಟಿಸಿದೆ.

ಈ ಬಾರಿ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಮನಪ್ರೀತ್‍ಸಿಂಗ್ ಪಡೆಯು ಈಗ ಕಂಚಿನ ಪದಕ ಗೆಲ್ಲುವ ಸಲುವಾಗಿ ಗುರುವಾರ ಆಸ್ಟ್ರೇಲಿಯಾ ಅಥವಾ ಜರ್ಮನಿಯ ಸವಾಲನ್ನು ಎದುರಿಸಲಿದೆ. ರಿಯೋ ಒಲಿಂಪಿಕ್ಸ್‍ನಲ್ಲಿ ಬೆಲ್ಜಿಯಂ ತಂಡವು ಫೈನಲ್‍ಗೇರಿತ್ತು, ಈಗ ಟೋಕಿಯೋ ಒಲಿಂಪಿಕ್ಸ್‍ನಲ್ಲೂ ಕೂಡ ಫೈನಲ್‍ಗೇರುವ ಮೂಲಕ ದಾಖಲೆ ಸೃಷ್ಟಿಸಿದೆ.

Facebook Comments