‘ವಾಯು’ ದಾಳಿಯಿಂದ ಗುಜರಾತ್ ಪಾರು, ತಗ್ಗಿದ ಚಂಡಮಾರುತ ಆತಂಕ, ಜನತೆ ನಿರಾಳ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಅಹಮದಾಬಾದ್, ಜೂ.13- ಗುಜರಾತ್‍ನಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿದ್ದ ವಾಯು ಚಂಡಮಾರುತ ಮಧ್ಯರಾತ್ರಿ ತನ್ನ ಪಥ ಬದಲಿಸಿದ್ದು, ಗುಜರಾತ್ ಕರಾವಳಿಯತ್ತ ಧಾವಿಸುತ್ತಿದ್ದ ಚಂಡಮಾರುತದ ದಿಕ್ಕು ಸಮುದ್ರದತ್ತ ತಿರುಗಿದೆ.

ಇದರಿಂದ ಗುಜರಾತ್ ಕರಾವಳಿಗೆ ವಾಯು ಚಂಡಮಾರುತದ ಪ್ರಕೋಪ ತಪ್ಪಿದಂತಾಗಿದ್ದು , ಜನತೆ ನಿರಾಳವಾಗಿದ್ದಾರೆ. ಆದರೂ ರಭಸದ ಗಾಳಿಯೊಂದಿಗೆ ಕರಾವಳಿ ತೀರ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಎಂ) ತಿಳಿಸಿದೆ.

ಚಂಡಮಾರುತ ಬದಲಿಸಿದೆಯಾದರೂ ಅದರ ಪರಿಣಾಮ ಗುಜರಾತ್ ಕರಾವಳಿ ಮೇಲಾಗುತ್ತಿದ್ದು , ತೀರ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ತಿಳಿಸಿದ್ದಾರೆ.  ಪಶ್ಚಿಮ ಕರಾವಳಿ ವೆರವಲ್‍ನ ಜಲೇಶ್ವರ್‍ನಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ವಾಯು ಚಂಡಮಾರುತ ಪೋರ್‍ಬಂದರ್ ಮತ್ತು ಮಹುವಾ ಬೀಚ್‍ಗಳ ನಡುವೆ ಹಾದು ಹೋಗಿದೆ.

ವಾಯು ಚಂಡಮಾರುತ ನಿನ್ನೆ ಮಧ್ಯ ರಾತ್ರಿ ತನ್ನ ದಿಕ್ಕು ಬದಲಿಸಿದ್ದು, ಗುಜರಾತ್ ಕರಾವಳಿಯ ಸಮುದ್ರ ತೀರ ಪ್ರದೇಶಗಳಿಗೆ ಸಮಾನಾಂತರವಾಗಿ ಚಲಿಸುತ್ತಿರುವುದರಿಂದ ಇದರ ರಭಸ ಕಡಿಮೆಯಾಗಿದೆ ಎಂದು ಐಎಂಡಿ ಹೆಚ್ಚುವರಿ ಮಹಾ ನಿರ್ದೇಶಕ ದೇವೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಸಮುದ್ರದಲ್ಲೇ ಚಲಿಸುತ್ತಿರುವ ವಾಯು ಈ ಹಿಂದೆ ಪಶ್ಚಿಮದತ್ತ ರಭಸವಾಗಿ ಚಲಿಸುತ್ತಿತ್ತು. ಆದರೆ ಇದರ ದಿಕ್ಕು ಬಲವಾಗಿರುವುದರಿಂದ ಅದು ವಾಯುವ್ಯ ದಿಕ್ಕಿನತ್ತ ಮುನ್ನುಗ್ಗುತ್ತಿದೆ. ಇದು ಮತ್ತೆ ಪಶ್ಚಿಮ ದಿಕ್ಕಿನತ್ತ ತಿರುಗುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ.

ವಾಯು ಚಂಡಮಾರುತ ಗುಜರಾತ್‍ನ ಸೌರಾಷ್ಟ್ರದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು ತೀರ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಾಯು ದಾಳಿಯಿಂದ ಗುಜರಾತ್ ಪಾರಾಗಿದ್ದರೂ ಕರಾವಳಿ ಪ್ರದೇಶದಲ್ಲಿ ರಭಸದ ಗಾಳಿಯೊಂದಿಗೆ ಭಾರೀ ಮಳೆಯಿಂದಾಗಿ ಸಂಭವಿಸುವ ಅನಾಹುತಗಳನ್ನು ಎದುರಿಸಲು ರಕ್ಷಣಾ ಕಾರ್ಯಕರ್ತರು ಸಜ್ಜಾಗಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮ ಕರಾವಳಿಯ 10,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭಾರೀ ಗಾತ್ರದ ಅಲೆಗಳು ಏಳುತ್ತಿದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಸೋಮನಾಥ ದೇಗುಲದ ಆವರಣದಲ್ಲಿದ್ದ ಶೆಡ್‍ಗಳ ಮೇಲ್ಛಾವಣಿಗಳು ಗಾಳಿಯ ವೇಗಕ್ಕೆ ಹಾರಿ ಹೋಗಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವುಗಳಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಗುಜರಾತ್ ಕರಾವಳಿಯಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.

ಅಲ್ಲದೆ ತುರ್ತು ಕ್ರಮವಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅಗತ್ಯ ಪ್ರಮಾಣದ ಆಹಾರ ಪೊಟ್ಟಣಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಉಳಿದಂತೆ ಸೌರಾಷ್ಟ್ರ, ಅಮ್ರೇಲಿ, ಗಿರ್ ಸೋಮನಾಥ್, ಡಿಯು, ಜುನಾಘಡ್, ಪೋರ್‍ಬಂದರ್, ರಾಜ್‍ಕೋಟ್, ದ್ವಾರಕಾ, ದೇವ್ ಭೂಮಿ, ಕಚ್ ಮತ್ತು ಮಹುವಾದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.

ಪ್ರಬಲ ಗಾಳಿ ಬೀಸುತ್ತಿದೆ. ವಾಯು ಚಂಡಮಾರುತ ಹಾದು ಹೋಗುವ ಸಂದರ್ಭದಲ್ಲಿ ಇದರ ವೇಗ ಪ್ರತಿ ಗಂಟೆಗೆ 180 ಕಿಮೀ ದಾಟಲಿದೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಗುಜರಾತ್ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿಯೂ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಅಲ್ಲದೆ ಕರ್ನಾಟಕದಲ್ಲೂ ವಾಯು ಚಂಡಮಾರುತ ಪರಿಣಾಮ ಉಂಟಾಗಿದ್ದು, ಬೆಳಗಿನಿಂದಲೇ ಮೋಡ ಮುಸುಕಿದ ವಾತಾವರಣವಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin