ಶಾಕಿಂಗ್ ನ್ಯೂಸ್ : ಪರಸ್ಪರ ಕ್ಷಿಪಣಿ ದಾಳಿಗೆ ಸಜ್ಜಾಗಿದ್ದ ಭಾರತ-ಪಾಕ್..!?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಇಸ್ಲಮಾಬಾದ್, ಮಾ.17- ದಕ್ಷಿಣ ಏಷ್ಯಾದ ಎರಡು ಪ್ರಬಲ ಅಣ್ವಸ್ತ್ರ ಸಾಮಥ್ರ್ಯದ ದೇಶಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಪರಸ್ಪರ ಕ್ಷಿಪಣಿ ದಾಳಿ ನಡೆಯುತ್ತಿದ್ದ ಸಾಧ್ಯತೆ ಅಮೆರಿಕ ಮಧ್ಯಪ್ರವೇಶದಿಂದ ತಪ್ಪಿದ ಘಟನೆ ಈಗ ಬೆಳಕಿಗೆ ಬಂದಿದೆ.

ಪುಲ್ವಾಮಾ ಉಗ್ರರ ದಾಳಿ ಮತ್ತು ಆನಂತರದ ಪ್ರತೀಕಾರದ ಕ್ರಮವಾಗಿ ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ಏರ್ ಸರ್ಜಿಕಲ್ ಸ್ಟ್ರೈಕ್ ಹಾಗೂ ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತದ ಮೇಲೆ ಪಾಕಿಸ್ತಾನದ ಫೈಟರ್‍ಜೆಟ್‍ಗಳು ದಾಳಿಗೆ ಯತ್ನಿಸಿದ ಸಂದರ್ಭದಲ್ಲಿ ಉಭಯ ದೇಶಗಳು ಪರಸ್ಪರ ಕ್ಷಿಪಣಿ ಆಕ್ರಮಣಕ್ಕೆ ಮುಂದಾಗಿದ್ದವು ಎಂದು ಮೂಲಗಳು ತಿಳಿಸಿವೆ.

ಭಾರತ-ಪಾಕ್ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದ ಸಂದರ್ಭದಲ್ಲೇ ಎರಡೂ ದೇಶಗಳು ಪರಸ್ಪರ ಕ್ಷಿಪಣಿಗಳ ಮೂಲಕ ದಾಳಿ ನಡೆಸಲು ಸಜ್ಜಾಗಿದ್ದವು. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‍ಬೋಲ್ಟನ್ ಮತ್ತು ಇತರ ಉನ್ನತಾಧಿಕಾರಿಗಳ ಸಕಾಲಿಕ ಮಧ್ಯಪ್ರವೇಶದಿಂದ ಈ ಆಕ್ರಮಣ ತಪ್ಪಿದಂತಾಗಿದೆ.

ಫೆ.14ರ ಪುಲ್ವಾಮಾ ಉಗ್ರರ ದಾಳಿ ನಂತರ ಪ್ರತೀಕಾರದ ಕ್ರಮವಾಗಿ ಫೆ.26ರಂದು ಪಾಕ್ ಆಕ್ರಮಿತ ಬಾಲಕೋಟ್ ಮೇಲೆ ಐಎಎಫ್ ಯುದ್ಧ ವಿಮಾನಗಳು ದಾಳಿ ನಡೆಸಿ 250ಕ್ಕೂ ಹೆಚ್ಚು ಉಗ್ರರನ್ನು ಕೊಂದು ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಭಾರತದ ಈ ವೈಮಾನಿಕ ದಾಳಿಗೆ ಸೇಡು ತೀರಿಸಿಕೊಳ್ಳಲು ಫೆ.

27ರಂದು ಪಾಕಿಸ್ತಾನದ ಎಫ್-16 ಫೈಟರ್ ಜೆಟ್‍ಗಳು ಭಾರತದ ವಾಯು ಸರಹದ್ದು ಉಲ್ಲಂಘಿಸಿ ದಾಳಿ ನಡೆಸಲು ವಿಫಲ ಯತ್ನ ನಡೆಸಿದ್ದವು. ಇದೇ ಸಂದರ್ಭದಲ್ಲಿ ರೊಚ್ಚಿಗೆದ್ದ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಆರು ಅತ್ಯಂತ ಪ್ರಬಲ ಕ್ಷಿಪಣಿಗಳನ್ನು ಉಡಾಯಿಸಲು ಸಜ್ಜಾಗಿ ವೈರಿಗಳಿಗೆ ಎಚ್ಚರಿಕೆ ನೀಡಿದ್ದರು.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ಭಾರತಕ್ಕೆ ಕ್ಷಿಪಣಿ ದಾಳಿಗಳ ಮೂಲಕ ತಿರುಗೇಟು ನೀಡುವುದಾಗಿ ಬೆದರಿಕೆ ಹಾಕಿತ್ತು. ಯಾವುದೇ ಕ್ಷಣದಲ್ಲಿ ಉಭಯ ದೇಶಗಳ ನಡುವೆ ಕ್ಷಿಪಣಿಗಳ ದಾಳಿ ನಡೆದು ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.

ಈ ಬಗ್ಗೆ ಮಾಹಿತಿ ಪಡೆದ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಮತ್ತು ಇತರ ಉನ್ನತಾಧಿಕಾರಿಗಳು ಎರಡೂ ರಾಷ್ಟ್ರಗಳ ಹಿರಿಯ ಅಧಿಕಾರಿಗಳು ಮತ್ತು ಸೇನಾ ಮುಖ್ಯಸ್ಥರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಈ ಸಂದರ್ಭದಲ್ಲಿ ಕಾಶ್ಮೀರ ಕಣಿವೆ ಗಡಿಭಾಗದಲ್ಲಿ ಅಕ್ಷರಶಃ ಯುದ್ಧದ ವಾತಾವರಣ ನೆಲೆಸಿತ್ತು. ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲೇ ಈ ಬೆಳವಣಿಗೆ ಕಂಡುಬಂದಿತು.

ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಬೆನ್ನಟ್ಟಿ ಧ್ವಂಸಗೊಳಿಸಿದ ಮಿಗ್-21ರ ಫೈಟರ್ ಪೈಲೆಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್‍ರನ್ನು ಪಾಕಿಸ್ತಾನ ಬಂಧಿಸಿ ಯುದ್ಧಕೈದಿಯನ್ನಾಗಿ ತನ್ನ ಬಳಿ ಇಟ್ಟುಕೊಂಡಿದ್ದ ಸಂದರ್ಭದಲ್ಲೂ ಮತ್ತೊಮ್ಮೆ ಯುದ್ಧದ ಕಾರ್ಮೋಡ ದಟ್ಟೈಸಿತ್ತು.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿದ್ ದೋವಲ್, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ (ಐಎಸ್‍ಐ) ಮುಖ್ಯಸ್ಥ ಮುನೀರ್ ಅವರೊಂದಿಗೆ ಹಾಟ್‍ಲೈನ್ ಮೂಲಕ ಸಂಪರ್ಕಿಸಿ ಪೈಲೆಟ್‍ನನ್ನು ಬಿಡುಗಡೆ ಮಾಡದಿದ್ದರೆ ಭಯಂಕರ ದಾಳಿ ನಡೆಸುವುದಾಗಿ ಗಂಭೀರ ಎಚ್ಚರಿಕೆ ನೀಡಿದ್ದ ಸಂಗತಿಯನ್ನೂ ಸಹ ದೆಹಲಿ, ಇಸ್ಲಮಾಬಾದ್ ಮತ್ತು ವಾಷಿಂಗ್ಟನ್‍ನ ಉನ್ನತ ಮೂಲಗಳು ತಿಳಿಸಿವೆ.

Facebook Comments