ಮೋದಿ ಮೇಕ್ ಇನ್ ಇಂಡಿಯಾ ಎಫೆಕ್ಟ್, ವಿಶ್ವಬ್ಯಾಂಕ್‍ನ ಇಓಡಿಬಿ 63ನೇ ಸ್ಥಾನಕ್ಕೇರಿದ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಅ.24-ಸುಲಲಿತವಾಗಿ ವಾಣಿಜ್ಯ-ವಹಿವಾಟು ನಡೆಸಲು ಸಾಧ್ಯವಾಗುವ (ಈಸಿ ಆಫ್ ಡೂಯಿಂಗ್ ಬ್ಯುಸಿನೆಸ್) ಜಾಗತಿಕ ಶ್ರೇಣಿಯ ಪಟ್ಟಿಯನ್ನು ವಿಶ್ವ ಬ್ಯಾಂಕ್ ಇಂದು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ 14 ಸ್ಥಾನಗಳಿಗೆ ಜಿಗಿದಿದ್ದು, 63ನೇ ಶ್ರೇಯಾಂಕ ತಲುಪಿದೆ.  ಅಲ್ಲದೇ ಭಾರತವು ಸತತ ಮೂರನೇ ಬಾರಿಗೆ ಪಟ್ಟಿಯಲ್ಲಿ ಟಾಪ್ 10 ಸಾಧಕರ ಸ್ಥಾನಗಳಲ್ಲಿಯೂ ಗುರುತಿಸಿಕೊಂಡಿರುವುದು ಹೆಗ್ಗಳಿಕೆಯ ವಿಷಯವಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು ಕೈಗೊಂಡ ಇತರ ಸುಧಾರಣೆಗಳಿಂದಾಗಿ ಭಾರತಕ್ಕೆ ಈ ಶ್ರೇಯಾಂಕ ಪಟ್ಟಿಯಲ್ಲಿ ಆರೋಹಣ ಶ್ರೇಯ ಲಭಿಸಿದೆ.

ಜಾಗತಿಕ ಆರ್ಥಿಕತೆ ಕುಂಠಿತದ ಹಿನ್ನೆಲೆಯಲ್ಲಿ ಭಾರತದ ಪ್ರಗತಿ ದರ ಕುಸಿಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ), ವಿಶ್ವ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಶ್ರೇಯಾಂಕ ನಿಗದಿಗೊಳಿಸುವ ವಿವಿಧ ಸಂಸ್ಥೆಗಳು ಮುನ್ಸೂಚನೆ ನೀಡಿರುವ ಸಂದರ್ಭದಲ್ಲೇ ಭಾರತದ ಈ ರ್ಯಾಂಕಿಂಗ್ ಆಶಾದಾಯಕವಾಗಿದೆ.

2014ರಲ್ಲಿ ಮೋದಿ ಪ್ರಧಾನಿಯಾದಾಗ ಭಾರತವು 190 ದೇಶಗಳಲ್ಲಿ 142ನೇ ಸ್ಥಾನ ಪಡೆದಿತ್ತು. ನಾಲ್ಕು ವರ್ಷಗಳ ಶುಧಾರಣೆಗಳಿಂದಾಗಿ 2018ರಲ್ಲಿ ಭಾರತ ವಿಶ್ವ ಬ್ಯಾಂಕ್‍ನ ಡೂಯಿಂಗ್ ಬ್ಯುಸಿನೆಸ್ ವರದಿಯಲ್ಲಿ 100ನೇ ಸ್ಥಾನಕ್ಕೇರಿತ್ತು. 2017ರಲ್ಲಿ ಭಾರತ 130ನೇ ಶ್ರೇಯಾಂಕದಲ್ಲಿತ್ತು. ಕಳೆದ ವರ್ಷದ ಪರಿಷ್ಕøತ ಪಟ್ಟಿಯಲ್ಲಿ 23 ಸ್ಥಾನಗಳಿಗೆ ಜಿಗಿದು 77ನೇ ಸ್ಥಾನದಲ್ಲಿತ್ತು.

ಈಗ 2020ರ ಹೊಸ ಪಟ್ಟಿಯಲ್ಲಿ ಮತ್ತೆ 14 ಸ್ಥಾನಗಳಿಗೆ ಏರಿ 63ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್, ಸಿಂಗಪುರ್ ಮತ್ತು ಹಾಂಕಾಂಗ್ ಈ ವರ್ಷದ ಸುಲಲಿತ ವಾಣಿಜ್ಯ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿವೆ.

Facebook Comments