ಭಾರತದಿಂದ ಆಫ್ಘಾನಿಸ್ಥಾನಕ್ಕೆ ಹತ್ತು ಲಕ್ಷ ಕೋವಿಡ್ ಲಸಿಕೆ ಪೂರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.1- ತಾಲಿಬಾನ್ ಆಕ್ರಮಿತ ಆಫ್ಘಾನಿಸ್ಥಾನಕ್ಕೆ ಮೊದಲ ಬಾರಿಗೆ ಭಾರತ ಸರ್ಕಾರ ಹತ್ತು ಲಕ್ಷ ಕೋವ್ಯಾಕ್ಸಿನ್ ಲಸಿಕೆಗಳನ್ನು ಪೂರೈಕೆ ಮಾಡಲಾರಂಭಿಸಿದೆ. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಂತರಾಷ್ಟ್ರೀಯ ಸಮುದಾಯದೊಂದಿಗೆ ಸಹಮತ ವ್ಯಕ್ತ ಪಡಿಸಿದೆ.

ಅದರ ಭಾಗವಾಗಿ ಈಗಾಗಲೇ ಹಲವು ರಾಷ್ಟ್ರಗಳಿಗೆ ಲಸಿಕೆ ಪೂರೈಸಲಾಗಿದೆ. ಇದೇ ಮೊದಲ ಬಾರಿಗೆ ಆಫ್ಘಾನಿಸ್ಥಾನಕ್ಕೆ ಐದು ಲಕ್ಷ ಲಸಿಕೆಗಳನ್ನು ರವಾನಿಸಲಾಗಿದ್ದು, ಸಂಜೆಯಯ ವೇಳೆಗೆ ಲಸಿಕೆ ಹೊತ್ತ ಇರಾನ್‍ನ ಮಹಾನ್ ವಿಮಾನ ಕಾಬೂಲ್ ತಲುಪಲಿವೆ. ಜನವರಿ ಎರಡನೇ ವಾರದಲ್ಲಿ ಉಳಿದ ಐದು ಲಕ್ಷ ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತದೆ.

ಉಗ್ರ ಸಂಘಟನೆ ಎಂಬ ಪಟ್ಟ ಹೊತ್ತಿದ್ದ ತಾಲಿಬಾನಿಗಳು ಕಳೆದ ಆಗಸ್ಟ್ 15ರಂದು ಆಫ್ಘಾನಿಸ್ಥಾನವನ್ನು ತಮ್ಮ ಕೈ ವಶ ಮಾಡಿಕೊಂಡರು. ಅನಂತರ ಅಲ್ಲಿದ್ದ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗಳನ್ನು ಪ್ರಯಾಸದಿಂದ ಭಾರತವೂ ಸೇರಿದಂತೆ ಹಲವು ದೇಶಗಳು ವಾಪಾಸ್ ಕರೆಸಿಕೊಂಡವು. ಆಫ್ಘಾನಿಸ್ಥಾನದ ಸ್ಥಳೀಯರು ಬಹಳಷ್ಟು ಮಂದಿ ದೇಶ ತೊರೆದಿದ್ದು, ಅವರಿಗೆ ಭಾರತವೂ ಸೇರಿದಂತೆ ಬಹಳಷ್ಟು ರಾಷ್ಟ್ರಗಳು ಆಶ್ರಯ ನೀಡಿವೆ.

ಅಂತರ ರಾಷ್ಟ್ರೀಯ ಸಮುದಾಯ ಆಫ್ಘಾನಿಸ್ಥಾನದ ಬೆಳವಣಿಗೆಳ ಮೇಲೆ ನಿಗಾ ಇಟ್ಟಿದ್ದು, ಹಂತ ಹಂತವಾಗಿ ಸಂಬಂಧ ಸುಧಾರಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಮೊದಲು ಭಾರತ ಆಫ್ಘಾನಿಸ್ಥಾನಕ್ಕೆ ವೈದ್ಯಕೀಯ ಸಲಕರಣೆಗಳನ್ನು ರಫ್ತು ಮಾಡಿತ್ತು. ಇದೇ ಮೊದಲ ಭಾರಿಗೆ ಲಸಿಕೆಯನ್ನೂ ಪೂರೈಕೆ ಮಾಡಲಾಗುತ್ತಿದೆ.

ಹೈದರಾಬಾದ್ ಮೂಲಕ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿರುವ ದೇಶಿಯ ಕೋವ್ಯಾಕ್ಸಿನ್ ಲಸಿಕೆಯನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಭಾರತ ಈ ಮೊದಲು ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್, ಭೂತಾನ್, ಶ್ರೀಲಂಕ, ಮಾಲ್ಡವೀಸ್, ಬ್ರೇಜಿಲ್, ಮೊರೊಕೋ, ದಕ್ಷಿಣ ಆಫ್ರಿಕಾ, ನೈಜೀರಿಯಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಲಸಿಕೆಗಳನ್ನು ಪೂರೈಕೆ ಮಾಡಿದೆ.

ಭಾರತದಲ್ಲಿಯೂ ಲಸಿಕಾ ಅಭಿಯಾನ ಚುರುಕಾಗಿ ನಡೆಯುತ್ತಿದ್ದು, ಅಗತ್ಯಕ್ಕಿಂತಲೂ ಹೆಚ್ಚಿನ ಲಸಿಕೆ ಉತ್ಪಾದನೆಯಾಗುತ್ತಿದೆ. ಭಾರತ್ ಬಯೋಟೆಕ್ ಸಂಸ್ಥೆ ಪ್ರಸ್ತುತ ತಿಂಗಳಿಗೆ 70 ದಶಲಕ್ಷ ಲಸಿಕೆಗಳನ್ನು ತಯಾರಿಸುತ್ತಿದೆ. ಮುಂದಿನ ಕೆಲವೇ ತಿಂಗಳಲ್ಲಿ ಪ್ರತಿ ತಿಂಗಳು 100 ಕೋಟಿ ಲಸಿಕೆ ಉತ್ಪಾದಿಸುವ ಸಾಧ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆ ಕಳೆದ ನವೆಂಬರ್‍ನಲ್ಲಿ ಕೋವ್ಯಾಕ್ಸಿನ್‍ನ್ನು ತುರ್ತು ಬಳಕೆಗೆ ಅಂಗೀಕಾರ ನೀಡಿದೆ.

Facebook Comments