“ಕಾಶ್ಮೀರದ ಆಕ್ರಮಿತ ಪ್ರದೇಶಗಳಿಂದ ತಕ್ಷಣ ಜಾಗ ಖಾಲಿ ಮಾಡಿ : ಪಾಕ್‍ಗೆ ಭಾರತ ಕಟ್ಟಪ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.25- ಜಮ್ಮು ಕಾಶ್ಮೀರದಲ್ಲಿ ಆಕ್ರಮಿತ ಪ್ರದೇಶಗಳನ್ನು ಪಾಕಿಸ್ತಾನ ಕೂಡಲೇ ತೆರವು ಮಾಡಬೇಕು ಎಂದು ಭಾರತ ಆಗ್ರಹಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‍ಖಾನ್ ನೀಡಿದ್ದ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಭಾರತದ ಪ್ರಥಮ ಕಾರ್ಯದರ್ಶಿ ಸ್ನೇಹ ದುಬೆ ಅವರು, ಪಾಕ್ ವಿರುದ್ಧ ಕಿಡಿಕಾರಿದ್ದು, ಕಠಿಣ ಎಚ್ಚರಿಕೆಯ ಸಂದೇಶವನ್ನು ರವಾನಿದ್ದಾರೆ.

ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಲು ನಾವು ಬಯಸುತ್ತೇವೆ. ಆದರೆ ಪಾಕಿಸ್ತಾನ ವಿಶ್ವಸಂಸ್ಥೆ ಒದಗಿಸುವ ವೇದಿಕೆಗಳನ್ನು ಪದೇ ಪದೇ ದುರುಪಯೋಗ ಪಡಿಸಿಕೊಂಡು ಭಾರತದ ವಿರುದ್ಧ ಸುಳ್ಳು ಮತ್ತು ಅಪಪ್ರಚಾರ ಮಾಡುತ್ತಿದೆ. ಈ ಮೊದಲು ಇದೇ ರೀತಿಯ ಪ್ರಯತ್ನಗಳನ್ನು ಪಾಕಿಸ್ತಾನದ ನಾಯಕರು ಮಾಡಿದ್ದಾರೆ ಎಂದು ಸ್ನೇಹ ದುಬೆ ಆರೋಪಿಸಿದ್ದಾರೆ.

ಪಾಕಿಸ್ತಾನ ಹುನ್ನಾರದ ವಿರುದ್ಧ ಧ್ವನಿ ಎತ್ತುವ ಮತ್ತು ಸತ್ಯವನ್ನು ಹೇಳುವ ನಮ್ಮ ಹಕ್ಕನ್ನು ನಾವು ಬಳಸಿಕೊಳ್ಳುತ್ತೇವೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮುದ್ರಿತ ಭಾಷಣದ ಮೂಲಕ ಸ್ನೇಹ ಪಾಕ್‍ಗೆ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನ ಕೂಡಲೇ ಭಾರತದಲ್ಲಿ ಅತಿಕ್ರಮಣ ಮಾಡಿರುವ ಪ್ರದೇಶಗಳನ್ನು ತೆರವು ಮಾಡಬೇಕು. ಅಗ್ನಿಶಾಮಕ ದಳದ ಸಿಬ್ಬಂದಿಗಳ ವೇಷದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುವ ಪ್ರವೃತ್ತಿಯನ್ನು ಕೈ ಬಿಡಬೇಕು. ಜಮ್ಮು ಕಾಶ್ಮೀರದಲ್ಲಿ ಜಾರಿಯಲ್ಲಿದ್ದ 370 ವಿಧಿಯನ್ನು ರದ್ದು ಮಾಡುವ ಭಾರತದ ಸರ್ಕಾರದ ನಿರ್ಧಾರದ ವಿಷಯದಲ್ಲಿ ಪಾಕಿಸ್ತಾನ ಮೂಗು ತೂರಿಸಬಾರದು. ಭಾರತದ ಆಂತರಿಕ ವಿಷಯದಲ್ಲಿ ಬೇರೆ ದೇಶಗಳ ಹಕ್ಕುಸ್ವಾಮ್ಯತೆ ಇಲ್ಲ ಎಂದು ಪ್ರತಿಪಾದಿಸಿದರು.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನ ಮಾನಗಳು ದೊರೆಕಿವೆ. ಉನ್ನತ ಹುದ್ದೆಗಳಲ್ಲಿ ಅವರು ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದಾರೆ. ಪಾಕಿಸ್ತಾನ ಧರ್ಮಾಧಾರಿತವಾಗಿ ಪ್ರಚೋದನೆ ನೀಡುವ ಪ್ರಯತ್ನ ಫಲಿಸುವುದಿಲ್ಲ. ಪಾಕಿಸ್ತಾನ ಮೊದಲು ಭಯೋತ್ಪಾದನೆಗೆ ಬೆಂಬಲ ನೀಡುವ, ಬಹಿರಂಗವಾಗಿ ತರಬೇತಿ ನೀಡುವುದು, ಆರ್ಥಿಕ ನೆರವು ಒದಗಿಸುವುದನ್ನು ನಿಲ್ಲಿಸಬೇಕು ಎಂದು ಸ್ನೇಹ ಒತ್ತಾಯಿಸಿದ್ದಾರೆ.

ಜಮ್ಮು ಕಾಶ್ಮೀರ, ಲಡಾಕ್ ಭಾರತದ ಅವಿಭಾಜ್ಯ ಅಂಗಗಳು ಮತ್ತು ಅಲ್ಲಿ ಭಾರತದ ಒಳಾಡಳಿತ ಜಾರಿಯಲ್ಲಿರುತ್ತದೆ. ಪಾಕ್ ಕೂಡಲೇ ತಾನು ಅತಿಕ್ರಮಿಸಿರುವ ಪ್ರದೇಶಗಳನ್ನು ತೆರವು ಮಾಡಬೇಕು ಎಂದು ಕಡಕ್ ಸೂಚನೆ ನೀಡಿದ್ದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಇತ್ತೀಚೆಗೆ ನಿಧನರಾದ ಪ್ರತ್ಯೇಕವಾದಿ ನಾಯಕ ಸೈಯದ್ ಆಲಿ ಗೀಲಾನಿ ಅವರ ಶವವನ್ನು ಭಾರತೀಯ ಸೇನೆಯ ಅಧಿಕಾರಿಗಳು ಬಲವಂತವಾಗಿ ಕುಟುಂಬದ ಸದಸ್ಯರಿಂದ ಕಸಿದುಕೊಂಡು ಸಮಾದಿ ಮಾಡಿದ್ದಾರೆ. ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದರು.

ಇದಕ್ಕೆ ಸ್ನೇಹಾ ದುಬೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Facebook Comments