130 ಕುಖ್ಯಾತ ಉಗ್ರರ ಆಶ್ರಯದಾತರು ಯಾರು..? : ಇಮ್ರಾನ್ಗೆ ಭಾರತ ಪ್ರಶ್ನೆ
ನ್ಯೂಯಾರ್ಕ್, ಸೆ.28-ಅಮೆರಿಕ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಸೂತ್ರಧಾರ ಒಸಾಮಾ ಬಿನ್ ಲಾಡೆನ್ಗೆ ಬೆಂಬಲ ನೀಡಿದವರ್ಯಾರು? ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ 130ಕ್ಕೂ ಹೆಚ್ಚು ಕುಪ್ರಸಿದ್ಧ ಉಗ್ರರ ಆಶ್ರಯದಾತರು ಯಾರು? ಅನೇಕ ವಿಧ್ವಂಸಕ ಕೃತ್ಯಗಳನ್ನು ಎಸಗಿರುವ ಭಯೋತ್ಪಾದಕ ಬಣದ ನಾಯಕರಿಗೆ ಪಿಂಚಣಿ ನೀಡಿದವರು ಯಾರು? ಇವು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ಖಾನ್ ಅವರಿಗೆ ಭಾರತ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕೇಳಿರುವ ಪ್ರಮುಖ ಪ್ರಶ್ನೆಗಳು.
ವಿಶ್ವಸಂಸ್ಥೆಯ 74ನೇ ಮಹಾ ಅಧಿವೇಶನ ಸಭೆಯಲ್ಲಿ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದ ನಂತರ ಪ್ರಥಮ ಬಾರಿಗೆ ಭಾಷಣ ಮಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದ ಆಕ್ರಮಣದ ಬೆದರಿಕೆ ಹಾಕಿದ್ದರು.
ಇಮ್ರಾನ್ ಖಾನ್ ಅವರ ಭಾಷಣಕ್ಕೆ ಪ್ರತಿಕ್ರಿಯೆ ನೀಡುವ ಅವಕಾಶವನ್ನು ಭಾರತದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಧಿಶಾ ಮೈತ್ರಾ ಅವರಿಗೆ ನೀಡಲಾಗಿತ್ತು.
ಇಂದು ಅವರು ತಮ್ಮ ಭಾಷಣದಲ್ಲಿ ಪಾಕಿಸ್ತಾನ ಮತ್ತು ಪ್ರಧಾನಮಂತ್ರಿ ಇಮ್ರಾನ್ಖಾನ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಇಮ್ರಾನ್ ಖಾನ್ ಅವರು ಅಣ್ವಸ್ತ್ರ ದಾಳಿಯ ಬೆದರಿಕೆ ಹಾಕುತ್ತಿದ್ದಾರೆ. ಇದು ಒಬ್ಬ ರಾಷ್ಟ್ರ ನಾಯಕನ ಮುತ್ಸದ್ಧಿತನವಲ್ಲ ಎಂದು ಕಟುವಾಗಿ ಟೀಕಿಸಿದರು.
ಪಾಕಿಸ್ತಾನ ಉಗ್ರಗಾಮಿಗಳ ಸುರಕ್ಷಿತ ತಾಣವೆಂಬುದು ಜಗಜ್ಜಾಹೀರವಾಗಿದೆ. ಅದು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಪರಿಪಾಠವಾಗಿದೆ ಎಂದು ಆರೋಪಿಸಿದರು.
ಅಮೆರಿಕದ ನ್ಯೂಯಾರ್ಕ್ ವಾಷಿಂಗ್ಟನ್ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಸೂತ್ರಧಾರ ಒಸಾಮಾ ಬಿನ್ ಲಾಡೆನ್ ಮತ್ತು ಆತನ ಅಲ್ಖೈದಾ ಉಗ್ರಗಾಮಿ ಸಂಘಟನೆಗೆ ಬೆಂಬಲ ನೀಡಿದವರು ಯಾರು ಎಂದು ವಿಧಿಶಾ ಮೈತ್ರಾ ಪ್ರಶ್ನಿಸಿದರು.
ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ 130ಕ್ಕೂ ಹೆಚ್ಚು ಕುಪ್ರಸಿದ್ಧ ಉಗ್ರರ ಆಶ್ರಯದಾತರು ಯಾರು? ಅನೇಕ ವಿಧ್ವಂಸಕ ಕೃತ್ಯಗಳನ್ನು ಎಸಗಿರುವ ಭಯೋತ್ಪಾದಕ ಬಣದ ನಾಯಕರಿಗೆ ಪಿಂಚಣಿ ನೀಡಿದವರು ಯಾರು? ಎಂದು ಅವರು ಪ್ರಶ್ನೆ ಮಾಡಿದರು.
1974ರಲ್ಲಿ ಪಾಕಿಸ್ತಾನವು ಬಾಂಗ್ಲಾ ದೇಶದ ವಿರುದ್ಧ ನಡೆಸಿದ ನರಮೇಧವನ್ನು ಈ ವಿಶ್ವ ಇನ್ನೂ ಮರೆತಿಲ್ಲ. 30 ಲಕ್ಷ ಅಮಾಯಕರನ್ನು ಆಗಿನ ಪಾಕಿಸ್ತಾನ ಸರ್ಕಾರದ ಆದೇಶದ ಮೇರೆಗೆ ನಿರ್ದಯವಾಗಿ ಕೊಲ್ಲಲಾಯಿತು ಎಂಬ ಸಂಗತಿಯನ್ನು ಅವರು ಉಲ್ಲೇಖಿಸಿದರು.
ವಿಶ್ವಸಂಸ್ಥೆಯಲ್ಲಿ ನಿನ್ನೆ ಒಂದೇ ದಿನ ಮೋದಿ ಮತ್ತು ಇಮ್ರಾನ್ಖಾನ್ ಭಾಷಣ ಮಾಡಿದ್ದರು. ಈ ಭಾಷಣದಲ್ಲಿ ಮೋದಿಯವರ ಮುತ್ಸದ್ಧಿತನ ಇಡೀ ವಿಶ್ವದ ಸಾಬೀತಾಗಿದ್ದು, ಪಾಕಿಸ್ತಾನದ ಪರೋಕ್ಷ ಉಗ್ರವಾದ ಇಮ್ರಾನ್ ಖಾನ್ ಭಾಷಣದಲ್ಲಿ ಬಯಲಾಗಿ ಪಾಕ್ ಪ್ರಧಾನಿಗೆ ಮತ್ತೆ ಮುಖಭಂಗವಾಗಿದೆ.