ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ ರಷ್ಯಾದ ಎಲ್‍ಎನ್‍ಜಿ ಸರಕು ನೌಕೆ

ಈ ಸುದ್ದಿಯನ್ನು ಶೇರ್ ಮಾಡಿ

LNG--01

ದಹೇಜ್, ಜೂ.4-ದೇಶದ ಇಂಧನ ಅಗತ್ಯಗಳನ್ನು ಪೂರೈಸಲು ಭಾರತ ಇದೇ ಮೊದಲ ಬಾರಿಗೆ ರಷ್ಯಾದಿಂದ ದ್ರವೀಕೃತ ನೈಸರ್ಗಿಕ ಅನಿಲ (ಎಲ್‍ಎನ್‍ಜಿ) ಆಮದು ಪ್ರಕ್ರಿಯೆಗೆ ಚಾಲನೆ ನೀಡಿದೆ. ರಷ್ಯಾದ ಪ್ರಥಮ ಎಲ್‍ಎನ್‍ಜಿ ಸರಕು ನೌಕೆ ಇಂದು ಗುಜರಾತ್‍ನ ದಹೇಜ್‍ನ ಪೆಟ್ರೋನೆಟ್ ಎಲ್‍ಎನ್‍ಜಿ ಲಿಮಿಟೆಡ್‍ನ ಆಮದು ಬಂದರು ತಲುಪಲಿದೆ. ಇದಕ್ಕಾಗಿ ಅಂತಿಮ ಹಂತದ ಸಿದ್ದತೆಗಳು ನಡೆದವು. ಕೇಂದ್ರ ಪೆಟ್ರೋಲಿಯಂ ಮತ್ತು ತೈಲ ಸಚಿವ ಧರ್ಮೇಂದ್ರ ಪ್ರಧಾನ ಸೇರಿದಂತೆ ಉನ್ನತಾಧಿಕಾರಿಗಳು ಕಾರ್ಗೋ ನೌಕೆಯನ್ನು ಬರಮಾಡಿಕೊಳ್ಳಲಿದ್ದಾರೆ.

ಈ ಸಂಬಂಧ ಭಾರತ ಮತ್ತು ರಷ್ಯಾ ನಡುವೆ ಒಪ್ಪಂದ ಏರ್ಪಟ್ಟಿದೆ. ಪ್ರತಿ ವರ್ಷ 2.5 ದಶಲಕ್ಷ ಟನ್‍ಗಳಷ್ಟು ಎಲ್‍ಎನ್‍ಜಿಯನ್ನು 20 ವರ್ಷಗಳ ಕಾಲ ರಷ್ಯಾದ ಗ್ಯಾಜ್‍ ಫ್ರೋಮ್ ಸಂಸ್ಥೆಯಿಂದ ಆಮದು ಮಾಡಿಕೊಳ್ಳಲು ಒಡಂಬಡಿಕೆಯಾಗಿದೆ. ರಷ್ಯಾದ ಎಲ್‍ಎನ್‍ಜಿ ಪೂರೈಕೆ ಸಂಸ್ಥೆ ಗ್ಯಾಜ್‍ಫ್ರೋಮ್‍ನಿಂದ ಭಾರತಕ್ಕೆ ಸರಕು ನೌಕೆಯನ್ನು ತರುವ ಕಾರ್ಯದಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆ ಭಾರತ ಅನಿಲ ಪ್ರಾಧಿಕಾರ ನಿಯಮಿತ (ಗೇಲ್ ಇಂಡಿಯಾ ಲಿಮಿಟೆಡ್) ಶ್ರಮವಹಿಸಿದೆ.

ಭಾರತವು ಎಲ್‍ಎನ್‍ಜಿ ಖರೀದಿಸುವ ವಿಶ್ವದ ನಾಲ್ಕನೇ ಬೃಹತ್ ರಾಷ್ಟ್ರವಾಗಿದ್ದು, ತನ್ನ ಇಂಧನ ಅಗತ್ಯಗಳ ಬೇಡಿಕೆ ಪೂರೈಸಲು ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದೆ. ಎಲ್‍ಎನ್‍ಜಿ ಆಮದು ನಂತರ ದೇಶದಲ್ಲಿ ಉದ್ಭವಿಸಿರುವ ಅನಿಲ ಕೊರತೆ ಗಮನಾರ್ಹ ಮಟ್ಟದಲ್ಲಿ ಇಳಿಕೆಯಾಗಲಿದೆ ಎಂದು ಗೇಲ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ತ್ರಿಪಾಠಿ ತಿಳಿಸಿದ್ದಾರೆ.

Facebook Comments

Sri Raghav

Admin